ಕೇಶವ ಕುಲಕರ್ಣಿ
ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಉಂಟಾಗಿದ್ದು, ಚಿಕಿತ್ಸೆಗೆಂದು ಬರುವ ಬಡರೋಗಿಗಳು ಅಗತ್ಯ ಔಷಧ ಸಿಗದೆ ಖಾಸಗಿ ಮೆಡಿಕಲ್ ಶಾಪ್‌ಗಳಿಗೆ ಹೋಗಿ ಹಣ ಕೊಟ್ಟು ಔಷಧ ಕೊಂಡುಕೊಳ್ಳುವ ಅನಿವಾರ್ಯತೆ ಉಂಟಾಗಿದೆ. ಉಚಿತ ಚಿಕಿತ್ಸೆ ಸಿಗುತ್ತದೆ ಹಾಗೂ ಜತೆಗೆ ಔಷಧವೂ ಸಿಗುತ್ತದೆ ಎಂದು ಆಸ್ಪತ್ರೆಗೆ ಬರುವ ಬಡರೋಗಿಗಳ ಪಾಡು ಕೇಳುವವರು ಇಲ್ಲದಂತಾಗಿದೆ.
ಹಣ ಇಲ್ಲವೆಂದು ಬಡವರು, ನಾನಾ ಪಟ್ಟಣ, ಗ್ರಾಮಗಳಿಂದ ಇಲ್ಲಿಗೆ ಆಗಮಿಸುತ್ತಾರೆ. ಅವರ ಬಳಿ ಹಣ ಇದ್ದಿದ್ದರೆ ಅವರ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿಯೆ ಚಿಕಿತ್ಸೆ ಪಡೆದುಕೊಂಡು ಔಷಧ ಪಡೆದುಕೊಳ್ಳುತ್ತಿದ್ದರು. ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಉಚಿತ ಎಂಬ ಕಾರಣಕ್ಕಿಂತ ಹಣ ಇಲ್ಲದ ಸಾಕಷ್ಟು ಬಡವರು, ಕಾರ್ಮಿಕರು, ಕೂಲಿ ಕಾರ್ಮಿಕರೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ, ಇಲ್ಲಿ ಸರಿಯಾಗಿ ಔಷಧವೇ ಇಲ್ಲ ಎಂಬ ಸಂಗತಿ ರೋಗಿಗಳನ್ನು ಮತ್ತಷ್ಟು ದಂಗಾಗಿಸಿದೆ. ನಿತ್ಯ ಓಪಿಡಿ (ಹೊರರೋಗಿಗಳ ವಿಭಾಗ)ದಲ್ಲಿಯೇ ಪರಿಸ್ಥಿತಿ ಹೀಗಿರುವಾಗ ಐಪಿಡಿ (ಒಳರೋಗಿಗಳ ವಿಭಾಗನಲ್ಲಿ ದಾಖಲಾಗಿರುವ ರೋಗಿಗಳ ಪಾಡೇನು? ನಿತ್ಯ ಅವರು ಔಷಧಕ್ಕಾಗಿಯೇ ಎಷ್ಟು ಖರ್ಚು ಮಾಡಬೇಕು? ಎಂಬ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.ಆಸ್ಪತ್ರೆಯಲ್ಲಿ ಶುಕ್ರವಾರದಿಂದ ಗುತ್ತಿಗೆ ನೌಕರರ ಪ್ರತಿಭಟನೆ ಹಿನ್ನೆಲೆ ಜಿಲ್ಲಾ ಆರೋಗ್ಯಾಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬೆನ್ನಲ್ಲೇ ಔಷಧಗಳ ಕೊರತೆ ಉಂಟಾಗಿರುವುದು ರೋಗಿಗಳಿಗೆ ಹೊರೆಯಾಗಿದೆ. ಸೋಮವಾರ ಡಿಎಚ್‌ಒ ಡಾ.ಮಂಜುನಾಥ ಭೇಟಿ ಸಂದರ್ಭದಲ್ಲೂ ಸಾರ್ವಜನಿಕರು ಆಸ್ಪತ್ರೆಗೆ ಅಗತ್ಯ ಔಷಧ ಪೂರೈಸುವಂತೆ ಮನವಿ ಮಾಡಿದ್ದರು. ಆದರೆ ಇದುವರೆಗೂ ಔಷಧ ಪೂರೈಕೆ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
----------
- ದಾದಾಪೀರ್ ಚಿಕಿತ್ಸೆಗೆ ಬಂದಿದ್ದ ವ್ಯಕ್ತಿ
ನಾಯಿ ಕಡಿತದ ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದೆ. ವೈದ್ಯರು ಔಷಧ ಚೀಟಿ ಬರೆದುಕೊಟ್ಟಿದ್ದು, ಆಸ್ಪತ್ರೆಯಲ್ಲಿ ಈ ಔಷಧ ಇಲ್ಲ ಎನ್ನುತ್ತಿದ್ದಾರೆ. ಹೊರಗೆ ಖರೀದಿಸಬೇಕಿದೆ. ಬಡವರಾಗಿದ್ದು ಖಾಸಗಿ ಮೆಡಿಕಲ್ ಶಾಪ್‌ನಲ್ಲಿ ಔಷಧ ಖರೀದಿಸುವ ಶಕ್ತಿ ಇಲ್ಲ. ಖಾಸಗಿ ವೈದ್ಯರ ವೆಚ್ಚ ಭರಿಸಲಾಗದೇ ಸರ್ಕಾರಿ ಆಸ್ಪತ್ರೆಗೆ ಬಂದರೆ ಔಷಧಗಳ ಕೊರತೆಯಿದೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಕುಡಲೇ ಸಮಸ್ಯೆ ಬಗೆಹರಿಸಬೇಕು.