- ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ, ಜೆಸಿಟಿಯು ನೇತೃತ್ವ ।
- ಬಿಜೆಪಿ ಹಾದಿ ತುಳಿದ ಕಾಂಗ್ರೆಸ್ ಸರ್ಕಾರ: ಮುಖಂಡರ ಆಕ್ರೋಶ- ರೈತ, ಕಾರ್ಮಿಕ, ಜನವಿರೋಧಿ ನೀತಿ ಖಂಡಿಸಿ ಜಯದೇವ ವೃತ್ತದಲ್ಲಿ ಘೋಷಣೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಪ್ರಶ್ನಿಸಿ, ಜಿಲ್ಲೆಯ ರೈತ ಹಾಗೂ ಕಾರ್ಮಿಕ ಹೋರಾಟ ಸಮಿತಿಗಳಾದ ಸಂಯುಕ್ತ ಹೋರಾಟ ಕರ್ನಾಟಕ ಜಿಲ್ಲಾ ಸಮಿತಿ, ಜೆಸಿಟಿಯು ವತಿಯಿಂದ ನಗರದ ಶ್ರೀ ಜಯದೇವ ವೃತ್ತದಲ್ಲಿ ಮಂಗಳವಾರ ಜನಾಗ್ರಹ ಚಳವಳಿ ನಡೆಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ರಾಜ್ಯ ಸರ್ಕಾರದ ರೈತ, ಕಾರ್ಮಿಕ, ಜನವಿರೋಧಿ ನೀತಿ, ಧೋರಣೆ, ಬೆಲೆ ಏರಿಕೆ ಖಂಡಿಸಿ ಘೋಷಣೆಗಳನ್ನು ಕೂಗಲಾಯಿತು.
ಸಂಘಟನೆ ಮುಖಂಡರು ಮಾತನಾಡಿ, ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಕರಾಳ ಕೃಷಿ ಕಾಯ್ದೆಗಳ ರದ್ದತಿ, ಬಲವಂತದ ಭೂಸ್ವಾಧೀನಕ್ಕೆ ತಡೆ, ಬಗರ್‌ಹುಕುಂ, ಅರಣ್ಯ ಸಾಗುವಳಿ ರೈತರಿಗೆ ರಕ್ಷಣೆ, ಸಂವಿಧಾನ ಹಕ್ಕುಗಳ ಖಾತ್ರಿ, ಕೋಮುವಾದಿ ಕೃತ್ಯಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ, ರೈತರಿಗೆ ಬೆಂಬಲ ಬೆಲೆ ರಕ್ಷಣೆ ಮುಂತಾದ ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದು 2 ವರ್ಷಗಳಾಗಿವೆ. ಆದರೂ, ಹಿಂದಿನ ಬಿಜೆಪಿ ಸರ್ಕಾರದ ನೀತಿಗಳನ್ನೇ ಈಗಿನ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಮುಂದುವರಿಸುತ್ತಿದೆ ಎಂದು ದೂರಿದರು.ವಿದ್ಯುತ್ ಖಾಸಗೀಕರಣ ಸೇರಿದಂತೆ ಮೋದಿ ಸರ್ಕಾರದ ಜನವಿರೋಧಿ ಕಾರ್ಪೊರೇಟ್ ಪರ ಎಲ್ಲ ಕ್ರಮಗಳನ್ನು ವೇಗವಾಗಿ ಜಾರಿಗೊಳಿಸುತ್ತಿರುವ ಹಿನ್ನೆಲೆ ಎಲ್ಲ ರೈತ, ಕಾರ್ಮಿಕ, ದಲಿತ, ಮಹಿಳಾ, ವಿದ್ಯಾರ್ಥಿ ಯುವಜನ ಸಂಘಟನೆಗಳ ಪ್ರಮುಖ ಕಾರ್ಯಕರ್ತರು ಇಂದಿನ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಅನುಸರಿಸುತ್ತಿದ್ದ ನೀತಿಗಳನ್ನೇ ಕಾಂಗ್ರೆಸ್ ಸರ್ಕಾರವೂ ಮುಂದುವರೆಸುತ್ತಿದೆ. ಕಾರ್ಮಿಕರ ದುಡಿಮೆ ಅವಧಿ 8ರಿಂದ 12 ಗಂಟೆಗೆ ಹಿಂದಿನ ಸರ್ಕಾರ ಏರಿಕೆ ಮಾಡಿತ್ತು. ಈಗಿನ ಸರ್ಕಾರ ಇಂತಹ ಕಾರ್ಮಿಕ ವಿರೋಧಿ ಕ್ರಮ ರದ್ದುಪಡಿಸುವ ಬದಲು ಏರಿಕೆಗೆ ನೋಟಿಫಿಕೇಷನ್ ಮಾಡಿದೆ. ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಲಕ್ಷಾಂತರ ಬಡ, ದಲಿತ, ಹಿಂದುಳಿದ ವರ್ಗಗಳ ಬಗರಹುಕುಂ ಹಾಗೂ ಅರಣ್ಯ ಸಾಗುವಳಿ ರೈತರ ಭೂಮಿ ಹಕ್ಕು ಕೋರಿರುವ ಅರ್ಜಿಗಳನ್ನು ಸಕ್ರಮಾತಿ ಸಮಿತಿ ಮುಂದೆ ತರದೇ ಮೀನ ಮೇಷ ಎಣಿಸುತ್ತಿದೆ ಎಂದು ಆರೋಪಿಸಿದ ಅವರು, ಜನಾಗ್ರಹ ನಿರ್ಣಯಗಳನ್ನು ತಕ್ಷಣವೇ ಈಡೇರಿಸುವಂತೆ ಒತ್ತಾಯಿಸಿದರು.
ಇನ್ನು ಅರ್ಜಿಗಳನ್ನು ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಹಂತಗಳಲ್ಲೇ ಕಾನೂನುಬಾಹಿರವಾಗಿ ವಜಾಗೊಳಿಸಿ, ರಾಜ್ಯದ ಎಲ್ಲ ಕಡೆ ನಿರ್ದಯವಾಗಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಮೂಲಕ ದೌರ್ಜನ್ಯ ಬಳಸಿ ಒಕ್ಕಲೆಬ್ಬಿಸಲಾಗುತ್ತಿದೆ. ಕೃಷಿ ಭೂಮಿ ಉಳಿಸಿಕೊಳ್ಳದೇ ಆಹಾರ ಭದ್ರತೆಗೆ ಗಂಭೀರ ಅಪಾಯ ತಂದೊಡ್ಡಿದೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.ಬಂಡವಾಳ ಹೂಡಿಕೆ ಸಮಾವೇಶ ಉದ್ದೇಶ ಕೇವಲ ಕೃಷಿ ಭೂಮಿ ಕಬಳಿಕೆಯಾಗಿದೆ. ಕೆಐಎಡಿಬಿ ವಶದಲ್ಲಿರುವ ಲಕ್ಷಾಂತರ ಎಕರೆ ಭೂಮಿ ಸಮರ್ಥವಾಗಿ ಬಳಸದೇ, ಮತ್ತೆ ಹೊಸದಾಗಿ ರಿಯಲ್ ಎಸ್ಟೇಟ್ ಹಿತಾಸಕ್ತಿ ರಕ್ಷಣೆಗಾಗಿ ಭೂಸ್ವಾಧೀನ ಮಾಡಲಾಗುತ್ತಿದೆ. ಕೃಷಿ ಮಾರುಕಟ್ಟೆಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ದುರ್ಬಲಗೊಳಿಸಿ, ಖಾಸಗಿ ಮಾರುಕಟ್ಟೆಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಪ್ರತಿ ವಲಯದಲ್ಲೂ ನಡೆಸುತ್ತಿರುವ ಜನವಿರೋಧಿ ಕ್ರಮಗಳನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಹಂತದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಗಳ ಮುಖಂಡರಾದ ಆವರಗೆರೆ ಎಚ್.ಜಿ. ಉಮೇಶ, ಮಧು ತೊಗಲೇರಿ, ಸತೀಶ ಅರವಿಂದ್, ಆವರಗೆರೆ ಚಂದ್ರು, ಪವಿತ್ರಾ, ಹೊನ್ನೂರು ಮುನಿಯಪ್ಪ, ಮಂಜುನಾಥ ಕೈದಾಳೆ, ಬಲ್ಲೂರು ಹನುಮಂತಪ್ಪ, ಆವರಗೆರೆ ಚಂದ್ರು, ಅಣಬೇರು ತಿಪ್ಪೇಸ್ವಾಮಿ, ಆನಂದರಾಜ, ಗುಮ್ಮನೂರು ಬಸವರಾಜ, ಮಂಜುನಾಥ ಕುಕ್ಕವಾಡ, ಶ್ರೀನಿವಾಸ, ಐರಣಿ ಚಂದ್ರು, ಶಿವಾಜಿ ರಾವ್ ಇತರರು ಇದ್ದರು.- - -
(ಬಾಕ್ಸ್) * ಆರೋಪಗಳೇನು? - ಸ್ಮಾರ್ಟ್ ಮೀಟರ್ ಅಳವಡಿಕೆ ಮೂಲಕ ವಿದ್ಯುತ್ ಖಾಸಗೀಕರಣಕ್ಕೆ ಬೆಂಬಲ ನೀಡಲಾಗುತ್ತಿದೆ.- ಕೃಷಿ ಪಂಪ್‌ಸೆಟ್‌ಗಳಿಗೂ ಪ್ರೀಪೇಯ್ಡ್ ಮೀಟರ್ ಅಳವಡಿಕೆಗೆ ಒತ್ತಡ ಹೇರುವ ಕೆಲಸವಾಗುತ್ತಿದೆ.
- ಒ.ಟಿ. ಸೌಲಭ್ಯ ಇಲ್ಲದೇ ದಿನಕ್ಕೆ 12 ಗಂಟೆ ದುಡಿಸಿಕೊಳ್ಳಲು ಕಾರ್ಖಾನೆಗಳಿಗೆ ಅನುಮತಿ ನೀಡುತ್ತಿದೆ.- ಶಿಕ್ಷಣ, ಆರೋಗ್ಯ ಸೇರಿದಂತೆ ಪ್ರತಿ ನಾಗರಿಕ ಸೌಲಭ್ಯ ಖಾಸಗೀಕರಣಗೊಳಿಸಲಾಗುತ್ತಿದೆ.
- 10 ತಿಂಗಳ ಅತಿಥಿ ಶಿಕ್ಷಕರ ನೇಮಕಾತಿಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆಯುವಂತೆ ಹುಚ್ಚು ಆದೇಶ ಹೊರಡಿಸಲಾಗಿದೆ- ದಲಿತರು, ಮಹಿಳೆಯರು, ಮಕ್ಕಳು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಗಟ್ಟಲು ಸರ್ಕಾರ ವಿಫಲವಾಗಿದೆ.
- ಕೋಮುವಾದಿ, ಮೂಲಭೂತವಾದಿ ಶಕ್ತಿಗಳ ಉಪಟಳ ಹಿಮ್ಮೆಟ್ಟಿಸಲು ಕಾಂಗ್ರೆಸ್ ಆಡಳಿತ ವಿಫಲವಾಗಿದೆ.- ಶಾಂತಿಯುತ ಪ್ರತಿಭಟನೆಗಳ ಮೇಲೆ ಕಠಿಣ ಕಾನೂನು ಅನ್ವಯಿಸಿ ಮೊಕದ್ದಮೆ ದಾಖಲಿಸಲಾಗುತ್ತಿದೆ.
- - - -20ಕೆಡಿವಿಜಿ15.ಜೆಪಿಜಿ:ದಾವಣಗೆರೆ ಶ್ರೀ ಜಯದೇವ ವೃತ್ತದಲ್ಲಿ ಮಂಗಳವಾರ ಹೊಸಪೇಟೆಯಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶವನ್ನು ಪ್ರಶ್ನಿಸಿ ಜಿಲ್ಲೆಯ ಸಂಯುಕ್ತ ಹೋರಾಟ ಕರ್ನಾಟಕ, ಜೆಸಿಟಿಯು ವತಿಯಿಂದ ಪ್ರತಿಭಟಿಸಲಾಯಿತು.