ಭಟ್ಕಳ: ತಾಲೂಕಿನ ಹಾಡವಳ್ಳಿಯ ಪದ್ಮಾವತಿ ರಂಗಮಂದಿರದಲ್ಲಿ ಆಯೋಜಿಸಲಾದ ಜನಸ್ಪಂದನಾ ಸಭೆಯನ್ನು ತಹಸೀಲ್ದಾರ್ ನಾಗೇಂದ್ರ ಶೆಟ್ಟಿ ಉದ್ಘಾಟಿಸಿದರು.
ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಮೂಲಭೂತ ಸೌಲಭ್ಯಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಕುರಿತಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟರು. ಪ್ರಮುಖವಾಗಿ ಆಧಾರ್ ಕಾರ್ಡ್ ತಿದ್ದುಪಡಿ, ಶಾಲೆಗಳ ಮೇಲ್ಛಾವಣಿ ದುರಸ್ತಿ, ಅಂಗವಿಕಲರಿಗೆ ದ್ವಿಚಕ್ರ ವಾಹನ ವಿತರಣೆ, ಮನೆ ನಂಬರ್ ನೀಡಿಕೆ ಸೇರಿದಂತೆ ಹಲವು ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಹಾಡವಳ್ಳಿ ಅಂಗನವಾಡಿ ಕಾರ್ಯಕರ್ತೆ ನೇಮಕ, ಕುಡಿಯುವ ನೀರಿನ ವ್ಯವಸ್ಥೆ ಸುಧಾರಣೆ, ಹಲ್ಯಾಣಿ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ರಸ್ತೆ ನಿರ್ಮಾಣ, ವಿದ್ಯುತ್ ಲೈನ್ ಸಮಸ್ಯೆಗಳ ಪರಿಹಾರಕ್ಕೂ ಆಗ್ರಹ ವ್ಯಕ್ತವಾಯಿತು. ಹಾಡವಳ್ಳಿ ಭಾಗದ ಆರೋಗ್ಯ ಕೇಂದ್ರದಲ್ಲಿ ಶುಶ್ರೂಷಕಿಯರ ನೇಮಕ, ಶಾಲಾ ಚರಂಡಿ ನಿರ್ಮಾಣ ಹಾಗೂ ಹೇಜಿಲ್ ಗ್ರಾಮದಲ್ಲಿ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕೋಣಾರ ಆಸ್ಪತ್ರೆ ಬಳಿ ಬಸ್ ನಿಲ್ದಾಣ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಮುಖಂಡ ಉದಯಕುಮಾರ ಶೆಟ್ಟಿ ತಹಸೀಲ್ದಾರರನ್ನು ಆಗ್ರಹಿಸಿದರು. ಕಾರ್ಯಕ್ರಮದ ಬಳಿಕ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರು ಹಾಡವಳ್ಳಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪಾಠ ಬೋಧಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ್ ಕುಮಾರ್, ಹಾಡವಳ್ಳಿ ಪಿಡಿಒ, ಮೀನುಗಾರಿಕೆ ಸಹಾಯಕ ನಿರ್ದೇಶಕ ರೇಣುಕಾಸ್ವಾಮಿ ಉಪಸ್ಥಿತರಿದ್ದರು. ಗ್ರಾಮ ಆಡಳಿತಾಧಿಕಾರಿ ಚಾಂದಬಾಷಾ ಸ್ವಾಗತಿಸಿದರು. ಶಿಕ್ಷಕ ಸುರೇಶ್ ಮುರುಡೇಶ್ವರ ಕಾರ್ಯಕ್ರಮ ನಿರೂಪಿಸಿದರು.