ಗಜೇಂದ್ರಗಡ: ಪಟ್ಟಣದ ವಿಜಯ ಮಹಾಂತೇಶ ಸಂಸ್ಥಾನಮಠದ ಸಭಾಭವನದಲ್ಲಿ ಬುಧವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತು ಗಜೇಂದ್ರಗಡ ತಾಲೂಕು ಘಟಕದ ಸಹಯೋಗದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಬರೆದ, ಯತೀಶ ಕೊಳ್ಳೇಗಾಲ ನಿರ್ದೇಶನದ ಜಂಗಮ ಬದುಕು ನಾಟಕ ಪ್ರದರ್ಶನಗೊಂಡಿತು.
ಮೂವರು ಕಲಾವಿದರ ಒಂದು ಗಂಟೆ ಹದಿನೈದು ನಿಮಿಷದ ನಾಟಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತು. ಅಭಿನಯ, ನಾಟಕದ ಸಂದೇಶಗಳು ಮನುಷ್ಯನ ತುಡಿತಗಳು, ಹಲವು ಹುಡುಕಾಟದ ನಡುವಿನ ಗೊಂದಲಗಳನ್ನು ತೆರೆದಿಟ್ಟಿತು. ಇಂದಿನ ನಾಗರಿಕ ಬದುಕಿನಲ್ಲಿ ಕಾಲ ಘಟ್ಟದಲ್ಲಿ ಗಂಡು ಹೆಣ್ಣು, ಗಂಡ ಹೆಂಡತಿ ಸಂಬಂಧಗಳೇ ಹಳಸುತ್ತಿರುವುದು, ಬಂಧುತ್ವ ವ್ಯವಹಾರ ಆಗುತ್ತಿರುವುದು, ಇರದಿರುವುದಕ್ಕೆ ಹಾತೊರೆಯುವ, ಸಿಗಲಾರದ ಕಾಮನೆಗಳನ್ನು ಹುಡುಕಿ ಕಾಲವನ್ನೇ ಹೊಸಕಿ ಹಾಕುವ ಸಂದರ್ಭಗಳು ಮನುಷ್ಯ ಮುಟ್ಟುವುದೆಲ್ಲಿಗೆ ಎಂಬ ಸತ್ಯಗಳಿಗೆ ಕನ್ನಡಿಯಂತೆ ನಾಟಕ ಪ್ರದರ್ಶನವಾಯಿತು.
ಈ ವೇಳೆ ನಿವೃತ್ತ ಉಪನ್ಯಾಸಕ ಬಿ.ಎ. ಕೆಂಚರಡ್ಡಿ ಮಾತನಾಡಿ, ನಿಮ್ಮ ಸಮಸ್ಯೆ ನೀವೇ ಪರಿಹರಿಸಿಕೊಳ್ಳಿ, ಬದುಕು ವೈವಿಧ್ಯವಾದುದು. ಇದು ಗೊಂದಲವಾಗುವ ಬದಲು ಗೌರವ ತರುವಂತಿರಲಿ, ದಾಂಪತ್ಯದ ತುಮುಲಗಳು ಹೊಯ್ದಾಟವಾಗಿ, ತಪ್ಪು ಒಪ್ಪಿನ ಅರಿವಿಲ್ಲದೆ, ಜೀವನೋನ್ಮಾದದಲ್ಲಿ ಅನೈತಿಕತೆ ಬದುಕು ಬರಸಿಡಿಲಿಗೆ ಸಿಗುವುದು ಬೇಡ ಎಂಬ ಸತ್ಯ ಸಂದೇಶಗಳನ್ನು ಸಾರಿದ ಕೌಟುಂಬಿಕ ಸಾಮರಸ್ಯದ ಬದುಕು ಈ ನಾಟಕದಿಂದ ತಿಳಿಯಿತು ಎಂದರು.ಕಸಾಪ ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ, ಬಸವರಾಜ ಶಿಲವಂತರ, ಬಿ.ಟಿ. ಹೊಸಮನಿ, ಫರೀದಾಬೇಗಂ ಡಾಲಾಯತ, ಆರ್.ಕೆ. ಬಾಗವಾನ, ಪುಂಡಲೀಕ ಕಲ್ಲಿಗನೂರ, ಎಸ್.ಐ. ಪತ್ತಾರ, ಡಾ. ಶರಣು ಗಾಣೀಗೇರ, ಕಳಕಯ್ಯ ಸಾಲಿಮಠ ನಾಟಕದ ಕುರಿತು ಮಾತನಾಡಿದರು. ಉಪನ್ಯಾಸಕ ಬಿ.ಬಿ. ಮುನವಳ್ಳಿ, ಎಚ್.ಎಸ್. ಸೊಂಪೂರ, ದಾವಲ ತಾಳಿಕೋಟಿ, ಅಲ್ಲಾವುದ್ದೀನ್ ಬಾಗವಾನ, ಮಹದೇವ ನರಿ, ಉಸ್ಮಾನ ಹೀರೆಹಾಳ, ಬಸವರಾಜ ಗೌರಿಮಠ, ಶಿವಯ್ಯ ಚಕ್ಕಡಿಮಠ, ಎಫ್.ಡಿ. ಕಟ್ಟಿಮನಿ ಇದ್ದರು.