ಚಿತ್ರದುರ್ಗ: ಮಧ್ಯ ಕರ್ನಾಟಕದ ದಸರಾವೆಂದೇ ಖ್ಯಾತಿ ಪಡೆದ ಬಸವಕೇಂದ್ರ ಮುರುಘಾಮಠದ ಶರಣ ಸಂಸ್ಕೃತಿ ಉತ್ಸವಕ್ಕೆ ಭಾನುವಾರ ಸಂಭ್ರಮದ ತೆರೆ ಬಿದ್ದಿತು.
ಧರ್ಮಗುರು ಬಸವಣ್ಣ ಹಾಗೂ ಶೂನ್ಯ ಪೀಠದ ಮೊದಲ ಅಧ್ಯಕ್ಷ ಅಲ್ಲಮಪ್ರಭು, ದೇವರ ಭಾವಚಿತ್ರ ಮತ್ತು ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆ, ಶೂನ್ಯಪೀಠಾರೋಹಣ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ನೆರವೇರಿತು. ವಿಜಯದಶಮಿ ನಂತರದ ದಿನ ಮುರುಘಾಮಠದಲ್ಲಿ ಶೂನ್ಯಪೀಠಾರೋಹಣ ಇರುತ್ತದೆ. ಈ ಮೊದಲು ಪೀಠಾಧಿಪತಿ ಕುಳಿತು ಸಾರ್ವಜನಿಕರಿಗೆ ದರ್ಶನನೀಡುತ್ತಿದ್ದರು. ಈ ಬಾರಿ ಜಯದೇವ ಶ್ರೀಗಳ 150 ನೇ ಜಯಂತ್ಯುತ್ಸವದ ಅಂಗವಾಗಿ ಶೂನ್ಯ ಪೀಠದಲ್ಲಿ ಅವರ ಪುತ್ಥಳಿ ಇಟ್ಟು ಪೀಠಾರೋಹಣ ನೆರವೇರಿಸಲಾಯಿತು. ಪೀಠಾರೋಹಣ ಸಂಭ್ರಮ ವೀಕ್ಷಿಸಲು ರಾಜಾಂಗಣದಲ್ಲಿ ಭಕ್ತ ಸಮೂಹವೇ ತುಂಬಿತ್ತು.ಬೆಳಿಗ್ಗೆ 10 ಗಂಟೆಗೆ ಜಯದೇವ ಶ್ರೀಗಳ ಪುತ್ಥಳಿಯನ್ನು ಪೀಠದಲ್ಲಿ ಇಟ್ಟ ತಕ್ಷಣ ಭಕ್ತರು ಸಂಭ್ರಮಿಸಿದರು. ನಾಡಿನಲ್ಲಿ ಮಳೆ, ಬೆಳೆ ಚೆನ್ನಾಗಿ ಆಗಲಿ, ಮುರುಗೇಶನ ಕೃಪೆ ಇರಲಿ ಎಂದು ಪ್ರಾರ್ಥಿಸಿದರು.ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ.ಕಳಸದ್, ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳ ನೇತೃತ್ವದಲ್ಲಿ ಶೂನ್ಯ ಪೀಠಾರೋಹಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಡಾ.ಬಸವಕುಮಾರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳು, ಸಾಧಕರು, ಭಕ್ತರು, ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು, ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳು, ನೌಕರ ವರ್ಗದವರು ಹಾಗೂ ಜನ ಸಮೂಹದ ಜಯಘೋಷಣೆಗಳೊಂದಿಗೆ ಶ್ರೀ ಮಠದಲ್ಲಿ ಶೂನ್ಯ ಪೀಠಾರೋಹಣವನ್ನು ಸಾಕ್ಷೀಕರಿಸಿದರು. ವಿವಿಧ ಕಲಾತಂಡಗಳು ಶ್ರೀಮಠದ ರಾಜಾಂಗಣದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದವು. ನಂತರ ಶ್ರೀಮಠದ ಪ್ರಾಂಗಣದಲ್ಲಿ ನಡೆದ ಧರ್ಮಗುರು ಬಸವಣ್ಣನವರ ಮತ್ತು ಅಲ್ಲಮ ಪ್ರಭುದೇವರ ಭಾವಚಿತ್ರ ಮತ್ತು ಪ್ರಾಚೀನ ಹಸ್ತ ಪ್ರತಿಗಳ ಮೆರವಣಿಗೆಗೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀ ಶಿವಯೋಗಿ.ಸಿ ಕಳಸದ್ ಚಾಲನೆ ನೀಡಿದರು.