- ಕ್ರೀಡಾಂಗಣ ಮಳಿಗೆಗಳ ಖಾಲಿ ಮಾಡಿಸುವಂತೆ ಆಗ್ರಹ - - - ಕನ್ನಡಪ್ರಭ ವಾರ್ತೆ ಹರಿಹರ ನಗರದ ಗಾಂಧಿ ಮೈದಾನದ ಆವರಣದಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣದ ಬಾಡಿಗೆ ಕರಾರು ಅವಧಿ ಮುಗಿದ್ದಿದ್ದು, ತಕ್ಷಣ ಅವುಗಳನ್ನು ಖಾಲಿ ಮಾಡಿಸಿ ಹೊಸದಾಗಿ ಹರಾಜು ಪ್ರಕ್ರಿಯ ಕೈಗೊಳ್ಳುವಂತೆ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಧರಣಿ ಸತ್ಯಾಗ್ರಹ 4ನೇ ದಿನವೂ ಮುಂದುವರಿಯಿತು.
ಸಂಘಟನೆ ತಾಲೂಕು ಅಧ್ಯಕ್ಷ ಎಸ್. ಗೋವಿಂದ ಮಾತನಾಡಿ, ಇಲಾಖೆ ಗಾಂಧಿ ಮೈದಾನದಲ್ಲಿ ನಿರ್ಮಿಸಿರುವ 42 ಮಳಿಗೆಗಳ ಬಾಡಿಗೆ ವಾಯಿದೆ ಮುಗಿದು ಅನೇಕ ತಿಂಗಳಾಗಿವೆ. ಈ ಹಿಂದೆ ಮರುಹರಾಜು ಮಾಡುವುದಾಗಿ ಪ್ರಕಟಣೆ ಕರೆದಿದ್ದರು. ತಲಾ ₹500 ರಂತೆ ಹಣ ಪಡೆದು ಅರ್ಜಿ ವಿತರಿಸಿದ್ದರು. ಆದರೆ, ನ್ಯಾಯಾಲಯದ ಕಾರಣ ಹೇಳಿ ಹರಾಜು ಪ್ರಕ್ರಿಯೆ ಮುಂದೂಡಿದ್ದರು ಎಂದು ಕಿಡಿಕಾರಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಸಮಕ್ಷಮ ಮರುಹರಾಜು ಮಾಡುವ ಮೊದಲು ಪ್ರಸ್ತುತ ಈಗ ಇರುವ ಬಾಡಿಗೆದಾರರನ್ನು ಖಾಲಿ ಮಾಡಿಸಿ ಮರುಹರಾಜು ಮಾಡಲು ಇಲಾಖೆಯವರು ಒಪ್ಪಿಕೊಂಡಿದ್ದರು. ಕಳೆದ ಸೆ.27ರಂದು ಮರುಹರಾಜು ಪ್ರಕಟಣೆ ಹೊರಡಿಸಿರುವ ಇಲಾಖೆಯವರು ನ.1ರಿಂದ ನ.5ರವರೆಗೆ ಅರ್ಜಿ ವಿತರಿಸುವುದಾಗಿ ತಿಳಿಸಿದ್ದರು. ಈಗ ಆ ಪ್ರಕ್ರಿಯೆ ಸಹ ನಡೆಯುತ್ತಿಲ್ಲ ಎಂದರು.ಈ ಹಿಂದೆ ಮರುಹರಾಜು ಮಾಡುವುದಾಗಿ ಪ್ರಕಟಿಸಿದಾಗ ಅನೇಕರು ಅರ್ಜಿಗಳನ್ನು ತಲಾ ₹500ರಂತೆ ನೀಡಿ ಅರ್ಜಿ ಪಡೆದಿದ್ದರು. ಅವೇ ಅರ್ಜಿಗಳನ್ನು ಮಾನ್ಯ ಮಾಡಬೇಕು. ಜಿಲ್ಲಾಧಿಕಾರಿ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವವರೆಗೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಉಪಾಧ್ಯಕ್ಷ ಎಂ.ಆರ್. ಆನಂದ್, ಪ್ರಧಾನ ಕಾರ್ಯದರ್ಶಿ ಸಿ.ಎಚ್. ಸುನೀಲ್ ಕುಮಾರ್, ಖಜಾಂಚಿ ಶಬ್ರೀಶ್, ಸಹ ಕಾರ್ಯದರ್ಶಿ ಭರತ್, ಮಧು, ಶ್ರೀನಿವಾಸ್, ಬಿ.ವಿಕ್ರಂ, ನವೀನ್, ಸಂಜಯ್, ಆತ್ಮಾನಂದ್ ಇತರರು ಭಾಗವಹಿಸಿದ್ದರು.