ಜಯಕುಮಾರ್ ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

KannadaprabhaNewsNetwork |  
Published : May 31, 2025, 01:11 AM IST
೩೦ಕೆಎಂಎನ್‌ಡಿ-೬ಜಯಕುಮಾರ್ ಅವರ ಸಾವಿಗೆ ಕಾರಣರೆನ್ನಲಾದ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಮಹಾ ಒಕ್ಕೂಟದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ಕೆಲಸದಿಂದ ವಜಾ ಮಾಡಬೇಕು. ದಲಿತ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಎಸ್ಸಿ, ಎಸ್ಟಿ ಕಾಯಿದೆ ಪ್ರಕಾರ ಪ್ರಕರಣ ದಾಖಲು ಮಾಡಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆ.ಆರ್. ಪೇಟೆ ತಾಲೂಕು ಕತ್ತರಘಟ್ಟದಲ್ಲಿ ನಡೆದ ಜಯಕುಮಾರ್ ಸಾವಿನ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.

ನಗರದ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೊಲೀಸರ ಅವಿವೇಕತನದಿಂದ ಈ ಘಟನೆ ನಡೆದುಹೋಗಿದೆ. ಮೇ ೧೬ರಂದು ಆರೋಪಿ ಅನಿಲ್‌ಕುಮಾರ್ ವಿರುದ್ಧ ಜಯಕುಮಾರ್ ನೀಡಿದ್ದ ದೂರಿನ ಬಗ್ಗೆ ಗಮನ ಹರಿಸಿದ್ದರೆ ಒಂದು ಸಾವು ನಡೆಯುತ್ತಿರಲಿಲ್ಲ ಎಂದು ಆರೋಪಿಸಿದರು.

ಅಮಾಯಕನಾಗಿದ್ದ ಜಯಕುಮಾರ್ ತನಗೆ ಸೇರಿದ ಜಮೀನಿನಲ್ಲಿ ವ್ಯವಸಾಯ ಮಾಡಲು ಮುಂದಾಗಿದ್ದಾನೆ. ಜಮೀನಿನಲ್ಲಿ ಆರೋಪಿ ಅನಿಲ್‌ಕುಮಾರ್ ನ ಹುಲ್ಲಿನ ಬಣವೆ ಇದ್ದು, ಅದನ್ನು ತೆರವುಗೊಳಿಸುವಂತೆ ಪತ್ನಿಯೊಂದಿಗೆ ತೆರಳಿ ಜಯಕುಮಾರ್ ಕೇಳಿಕೊಂಡಿದ್ದಾನೆ. ಆದರೆ ಅನಿಲ್‌ಕುಮಾರ್ ಹುಲ್ಲಿನ ಬಣವೆ ವಿಚಾರಕ್ಕೆ ಬಂದರೆ ಇಬ್ಬರನ್ನೂ ಪೆಟ್ರೋಲ್ ಸುರಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ದೂರು ನೀಡಿದ್ದರೂ. ಕೆ.ಆರ್. ಪೇಟೆ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ಪೇಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸೇರಿದಂತೆ ನಾಲ್ವರು ಪೊಲೀಸರನ್ನು ಕೆಲಸದಿಂದ ವಜಾ ಮಾಡಬೇಕು. ದಲಿತ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಎಸ್ಸಿ, ಎಸ್ಟಿ ಕಾಯಿದೆ ಪ್ರಕಾರ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಸಿದ್ದರಾಮಯ್ಯ, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ರುದ್ರೇಶ್, ಪರಮಾನಂದ, ಸಿ.ಟಿ.ಮಂಜುನಾಥ್, ಶಂಕರ್ ಗೋಷ್ಠಿಯಲ್ಲಿದ್ದರು.

----------ಬಾಕ್ಸ್

ಪೊಲೀಸ್ ಅಧಿಕಾರಿಗಳ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕತ್ತರಘಟ್ಟ ಗ್ರಾಮದ ಜಯಕುಮಾರ್ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಮಹಾ ಒಕ್ಕೂಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿತು. ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಎದುರು ಸೇರಿದ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಪಟ್ಟು ಹಿಡಿದು ಧರಣಿ ನಡೆಸಿದರು. ಇಡೀ ಪ್ರಕರಣವನ್ನೇ ದಿಕ್ಕು ತಪ್ಪಿಸಿರುವ ಕೆ.ಆರ್.ಪೇಟೆಯ ಪೊಲೀಸ್ ಅಧಿಕಾರಿಗಳಾದ ಡಿವೈಎಸ್‌ಪಿ ಚಲುವರಾಜು, ವೃತ್ತ ನಿರೀಕ್ಷಕ ಆನಂದೇಗೌಡ, ಸಬ್‌ಇನ್ಸ್‌ಫೆಕ್ಟರ್ ಸುಬ್ಬಯ್ಯ, ಠಾಣೆಯ ಪೇದೆ ವೈರಮುಡಿಗೌಡ ಅವರನ್ನು ತಕ್ಷಣ ಅಮಾನತು ಮಾಡಬೇಕು. ಜೊತೆಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸುನಂದಾ ಜಯರಾಂ, ಎಂ.ವಿ.ಕೃಷ್ಣ, ಸಿ.ಕುಮಾರಿ, ನರಸಿಂಹಮೂರ್ತಿ, ಅಭಿಗೌಡ ಹನಕೆರೆ, ಅನ್ನದಾನಿ ಸೋಮನಹಳ್ಳಿ, ನಾಗರಾಜು, ಜೆ.ರಾಮಯ್ಯ, ಜಯರಾಮು, ಉಮ್ಮಡಹಳ್ಳಿ ಉಮೇಶ್, ಹನಕೆರೆ ಗಂಗರಾಜು, ಗೀತಾ, ಪಂಕಜ, ಕಬ್ಬನಹಳ್ಳಿ ಪ್ರಸನ್ನ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ