ಕನ್ನಡಪ್ರಭ ವಾರ್ತೆ ಗೋಕಾಕ
ತಾಲೂಕಿನ ಕೌಜಲಗಿ ಗ್ರಾಮದ ಬಸವೇಶ್ವರ ಪೇಟೆಯಲ್ಲಿ ಮಂಗಳವಾರ ಜರುಗಿದ ಕಿತ್ತೂರು ರಾಣಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಹಾನ್ ಪುರುಷರನ್ನು ಒಂದೇ ಸಮಾಜಕ್ಕೆ ಸೀಮಿತ ಮಾಡಬಾರದೆಂದು ಕಿವಿಮಾತು ಹೇಳಿದರು.
ಅರಬಾವಿ ಕ್ಷೇತ್ರದಲ್ಲಿ ಕಳೆದ ಎರಡು ವರ್ಷಗಳಿಂದ ಎಲ್ಲ ಮಹಾನ್ ಪುರುಷರ ಜಯಂತಿ ಉತ್ಸವ ಕಾರ್ಯಕ್ರಮಗಳನ್ನು ಎಲ್ಲ ಜಾತಿಯ ಜನರೊಂದಿಗೆ ಆಚರಿಸಲಾಗುತ್ತಿದೆ. ಈ ಮೂಲಕ ನಮ್ಮ ಜನರು ಸಾಮರಸ್ಯ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗೀರಥ ಮಹರ್ಷಿ, ಡಾ.ಬಿ.ಆರ್. ಅಂಬೇಡ್ಕರ್ ಸೇರಿದಂತೆ ವಿವಿಧ ಮಹಾನ್ ಪುರುಷರ ಜಯಂತಿ ಕಾರ್ಯಕ್ರಮಗಳನ್ನು ದೊಡ್ಡಮಟ್ಟದಲ್ಲಿ ಆಚರಿಸುತ್ತಾ ಬರುತ್ತಿದ್ದೇವೆ. ಜೊತೆಗೆ ಸಣ್ಣ ಜಾತಿಗೆ ಸೇರಿರುವ ದಾರ್ಶನಿಕ ಪುರುಷರ ಸ್ಮರಣೆ ಮಾಡುವ ಮೂಲಕ ಎಲ್ಲ ವರ್ಗದವರನ್ನು ಸಮಾನವಾಗಿ ಕಾಣುತ್ತಿದ್ದೇವೆ ಎಂದವರು ತಿಳಿಸಿದರು.ಜನರ ಆಶೀರ್ವಾದದಿಂದ ಚುನಾಯಿತಗೊಂಡು ಪ್ರಮಾಣ ವಚನ ಮಾಡುವ ನಾವು ಅದರಂತೆ ನಡೆದುಕೊಳ್ಳಬೇಕಿದೆ. ರಾಗ, ದ್ವೇಷ, ಅಸೂಯೆ ಮರೆತು ಜನರ ಕೆಲಸ ಮಾಡಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಜನರ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ತರದೇ ಅವರ ಭಾವನೆಗಳನ್ನು ಗೌರವಿಸುವ ಕೆಲಸವನ್ನು ನಮ್ಮಂತಹ ಜನಪ್ರತಿನಿಧಿಗಳು ಮಾಡಬೇಕಿದೆ. ನಾವು ಮಾಡುವ ಯಾವುದೇ ಕೆಲಸಗಳು ಜನರ ಹೃದಯ ತಲುಪಬೇಕು. ಹೊರತು ನಮ್ಮನ್ನು ಸಾರ್ವಜನಿಕವಾಗಿ ಕೆಟ್ಟದಾಗಿ ಮಾತಾಡುವ ಮುನ್ನವೇ ಅಧಿಕಾರದಿಂದ ಕೆಳಗಿಳಿಯಬೇಕು. ಅಧಿಕಾರ ಎಂದಿಗೂ ಶಾಶ್ವತವಲ್ಲ. ಆದರೆ, ಅಧಿಕಾರ ಸಿಕ್ಕಾಗ ಕಷ್ಟ ಕಾಲದಲ್ಲಿ ಬೆಂಬಲಕ್ಕೆ ನಿಂತ ಜನರನ್ನು ನಾವು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಆಡಳಿತಾತ್ಮಕ ದೃಷ್ಟಿಯಿಂದ ಕೌಜಲಗಿ ಹೊಸ ತಾಲೂಕು ರಚನೆಯಾಗಬೇಕಿದೆ. ಕಳೆದ 40 ವರ್ಷಗಳಿಂದ ಕೌಜಲಗಿ ಮತ್ತು ಸುತ್ತಲಿನ ಗ್ರಾಮಸ್ಥರು ಸೇರಿಕೊಂಡು ಒಂದಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ಇದಕ್ಕೆ ಎಲ್ಲ ರೀತಿಯಿಂದಲೂ ಸಹಕಾರ ನೀಡಲು ಸಿದ್ಧನಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ ಮತ್ತೊಮ್ಮೆ ಮನವಿ ಮಾಡಿಕೊಳ್ಳೋಣ ಎಂದು ತಿಳಿಸಿದರು. ಕೌಜಲಗಿಗೆ ಅಗತ್ಯವಿರುವ ರಾಷ್ಟ್ರೀಕೃತ ಬ್ಯಾಂಕ ತೆರೆಯಲು ಸಂಬಂಧಪಟ್ಟವರಿಗೆ ಈಗಾಗಲೇ ಪತ್ರ ವ್ಯವಹಾರ ಮಾಡಲಾಗಿದೆ. ಸಂಸತ್ ಸದಸ್ಯ ಜಗದೀಶ ಶೆಟ್ಟರ್ ಮೂಲಕ ಪ್ರಯತ್ನಿಸುವ ವಾಗ್ದಾನ ಮಾಡಿದರು.
ಸುಣಧೋಳಿಯ ಶಿವಾನಂದ ಸ್ವಾಮೀಜಿ, ಭಾಗೋಜಿಕೊಪ್ಪದ ಮುರುಘರಾಜೇಂದ್ರ ಶಿವಾಚಾರ್ಯರು, ಸ್ಥಳೀಯ ಮರುಳಸಿದ್ಧೇಶ್ವರ ಮಠದ ಕೃಪಾನಂದ ಸ್ವಾಮೀಜಿ, ಶ್ರೀಕಾಂತ ವಿರಕ್ರಮಠ ವಹಿಸಿದ್ದರು.
- ಬಾಲಚಂದ್ರ ಜಾರಕಿಹೊಳಿ ಶಾಸಕ ಅರಬಾವಿ ಕ್ಷೇತ್ರ