ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿನ ಕೊಂಡಜ್ಜಿ ರಸ್ತೆಯ ವಿಜಯ ನಗರ ಬಡಾವಣೆಯಲ್ಲಿ 25 ವರ್ಷಗಳ ಹಿಂದೆ ರಾಮಪ್ಪ ಗೌಡ ಎಂಬುವರು ಒಟ್ಟು 10ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿದ್ದರು. ಆದರೆ, ಆ ಮನೆಗಳನ್ನು ಪಾಲಿಕೆ ಉದ್ಯಾನವನದ ಜಾಗದಲ್ಲಿ ನಿರ್ಮಿಸಲಾಗಿದೆಯೆಂಬುದಾಗಿ ಪಾಲಿಕೆ ಅಧಿಕಾರಿಗಳು ಮಂಗಳವಾರ ಬೆಳ್ಳಂ ಬೆಳಿಗ್ಗೆಯೇ ಪೊಲೀಸರ ಭದ್ರತೆಯಲ್ಲಿ ಬೆಸ್ಕಾಂ ಅಧಿಕಾರಿ, ಸಿಬ್ಬಂದಿ ಸಹಕಾರದಲ್ಲಿ ತೆರವು ಕಾರ್ಯ ಕೈಗೊಂಡರು.
ಮನೆಗಳನ್ನು ತೆರವುಗೊಳಿಸಲು ಪೊಲೀಸ್ ಬಂದೋಬಸ್ತ್‌ನಲ್ಲಿ ಜೆಸಿಬಿಗಳ ಸಮೇತ ಧಾವಿಸಿದ ಅಧಿಕಾರಿಗಳು ಮೂರು ಮನೆಗಳಿಗೆ ಜೆಸಿಬಿ ಮೂಲಕ ಸ್ಥಳಕ್ಕೆ ಧಾವಿಸಿದರು. ಬೆಸ್ಕಾಂನವರು ಮನೆಗಳಿಗೆ ಕಲ್ಪಿಸಿದ್ದ ವಿದ್ಯುತ್ ಸಂಪರ್ಕ ತೆರವುಗೊಳಿಸಿ, ಕಾರ್ಯಾಚರಣೆಗೆ ಅನುವು ಮಾಡಿಕೊಟ್ಟರು. ವಿಜಯನಗರ ಬಡಾವಣೆಯ ಪಾರ್ಕ್ ಜಾಗದಲ್ಲಿ ಈ ಮನೆಗಳನ್ನು ನಿರ್ಮಿಸಿದ್ದು, ಅವುಗಳನ್ನು ತೆರವು ಮಾಡಿಸಲು ಮುಂದಾಗಿದ್ದೇವೆಂಬುದಾಗಿ ಅಧಿಕಾರಿಗಳು ಮನೆಯಲ್ಲಿದ್ದವರಿಗೆ ತಿಳಿಸಿ, ಕಾರ್ಯಾಚರಣೆಗೆ ಮುಂದಾದರು.ದಿಢೀರನೇ ಮನೆ ಖಾಲಿ ಮಾಡುವಂತೆ, ಆ ಮನೆಗಳನ್ನು ಕೆಡವುತ್ತೇವೆಂದರೆ ಏನರ್ಥ ಎಂಬುದಾಗಿ ಮನೆಯ ಪುರುಷರು, ಮಹಿಳೆಯರು, ವಯೋವೃದ್ಧರು ಪ್ರಶ್ನಿಸತೊಡಗಿದರು. 40 ವರ್ಷದಿಂದ ನಾವು ಇಲ್ಲಿದ್ದೇವೆ. ಆಗ ಮನೆ ಕಟ್ಟುವಾಗ ಇಲ್ಲದ ಪಾರ್ಕ್ ಈಗ ಬಂದಿದೆಯಾ ಎಂಬುದಾಗಿ ಮನೆ ಮಾಲೀಕರ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದರು. ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದವರಿಗೆ ಪೊಲೀಸರು ಎಚ್ಚರಿಸಿದರು. ಅಷ್ಟರಲ್ಲಿ ಮೂರು ಮನೆಗಳಿಗೆ ಜೆಸಿಬಿ ಯಂತ್ರದಿಂದ ತೆರವು ಕಾರ್ಯವೂ ಶುರುವಾಗಿತ್ತು.
ಸ್ಥಳೀಯ ನಿವಾಸಿಗಳು ಮುಖಂಡರು, ಮೇಲಾಧಿಕಾರಿಗಳಿಗೆ ಮಾತನಾಡಿದ ಕಾಲಾವಕಾಶ ನೀಡುವಂತೆ ಕೋರಿಕೊಳ್ಳುವಷ್ಟರಲ್ಲಿ ಮೂರು ಮನೆಗಳ ಸಜ್ಜಾ, ಗೋಡೆಗಳನ್ನು ಭಾಗಶಃ ಜೆಸಿಬಿ ಯಂತ್ರ ಕೆಡವಿತ್ತು. ಕಡೆಗೆ ಜಿಲ್ಲಾಧಿಕಾರಿ ಮನೆಗಳಲ್ಲಿದ್ದ ಸಾಮಾನು, ಸರಂಜಾಮುಗಳನ್ನು ತೆಗೆದುಕೊಳ್ಳಲು 2 ದಿನ ಕಾಲಾವಕಾಶ ನೀಡಿ, ಆದೇಶಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಿ ವರ್ಗವು ಮನೆಗಳ ತೆರವು ಕಾರ್ಯವನ್ನು ತಾತ್ಕಾಲಿಕವಾಗಿ ಮುಂದೂಡಿದ ನಂತರವಷ್ಟೇ ಮನೆಗಳ ನಿವಾಸಿಗಳು ನಿಟ್ಟಿಸಿರುಬಿಟ್ಟರು.ಇದೇ ವೇಳೆ ಮಾತನಾಡಿದ ಸಂತ್ರಸ್ತ ಕುಟುಂಬದ ಮಹಿಳೆಯರು, ಪುರುಷರು, ವಯೋವೃದ್ಧರು, ನಮಗೆ ಯಾವುದೇ ನೋಟೀಸ್ ಆಗಲೀ, ಮೌಖಿಕ ಸೂಚನೆಯನ್ನಾಗಲೀ ನೀಡದೇ, ಏಕಾಏಕಿ ಪೊಲೀಸರ ಬಂದೋಬಸ್ತ್‌ನಲ್ಲಿ ಬಂದು, ಜೆಸಿಬಿ ಯಂತ್ರಗಳ ಮೂಲಕ ಪಾಲಿಕೆ ಅಧಿಕಾರಿಗಳ ಮನೆಗಳಿಂದ ನಮ್ಮನ್ನುತೆರವುಗೊಳಿಸಿದ್ದಾರೆ. ಮಹಿಳೆಯರು, ಮಕ್ಕಳೆನ್ನದೇ ಮನೆಯಿಂದ ನಮ್ಮನ್ನೆಲ್ಲಾ ಹೊರಗೆ ಎಳೆದು ಹಾಕಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ ಎಂದರು.
ಮನೆಗಳ ಮಾಲೀಕ ರಾಮಪ್ಪ ಗೌಡ್ರು ಮಾತನಾಡಿ, ಇದೇ ಜಾಗದಲ್ಲಿ 25 ವರ್ಷದ ಹಿಂದೆಯೇ ಮನೆಗಳನ್ನು ಕಟ್ಟಿದ್ದೇವೆ. ಹಿಂದೆ ಇದು ನಮ್ಮದೇ ಕುಟುಂಬದ ಜಮೀನಾಗಿತ್ತು. ಇದು ನಮ್ಮ ವಂಶ ಪಾರಂಪರ್ಯವಾಗಿ ಬಂದ ಆಸ್ತಿಯಾಗಿದೆ. ಮನೆಗೆ ವಿದ್ಯುತ್ ಬಿಲ್, ನೀರಿನ ಬಿಲ್ ಸೇರಿದಂತೆ ಎಲ್ಲಾ ದಾಖಲೆ ಒದಗಿಸಿದ್ದ ಅಧಿಕಾರಿಗಳು ಕೆಲ ತಿಂಗಳ ಹಿಂದೆ ಕಂದಾಯವನ್ನು ಸಹ ಕಟ್ಟಿಸಿಕೊಂಡಿದ್ದರು ಎಂದು ಆರೋಪಿಸಿದರು.ಪಾಲಿಕೆ ಅಧಿಕಾರಿಗಳು ನೋಟಿಸ್ ನೀಡಿದ್ದೇವೆಂದು ಹೇಳುತ್ತಿದ್ದಾರೆ. ಅದು ನೋಟೀಸ್ ಅಲ್ಲ, ಇ-ಸ್ವತ್ತು ಪತ್ರ ಮಾತ್ರ. ಅದು ಹೇಗೆ ನೋಟಿಸ್ ಆಗುವುದಕ್ಕೆ ಸಾಧ್ಯ? 1994ರಲ್ಲಿಯೇ ನಾವು ಇಲ್ಲಿ ಮನೆ ಕಟ್ಟಿದ್ದೇವೆ. ಇಸ್ವಿಯನ್ನು ಸಹ ಮನೆಯ ಮೇಲೆ ಕೆತ್ತಲಾಗಿದೆ. 30 ವರ್ಷ ಕಾಲ ಮನೆ ಮಾಲೀಕರು ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿ ವಾಸ ಮಾಡಿದ್ದೇವೆ. ಪುಣ್ಯಾತ್ಮರೊಬ್ಬರ ಮಧ್ಯಪ್ರವೇಶದಿಂದ ಕಾರ್ಯಾಚರಣೆ ನಿಂತಿದೆ. ನಾವು ನ್ಯಾಯಾಲಯದ ಮೆಟ್ಟಿಲೇರುತ್ತೇವೆ ಎಂದರು.