ಸ್ವಕ್ಷೇತ್ರದಲ್ಲೇ ಜಿಟಿಡಿಗೆ ಜೆಡಿಎಸ್‌ ನಾಯಕರ ಸಡ್ಡು

KannadaprabhaNewsNetwork |  
Published : May 18, 2026, 02:00 AM IST
ಜೆಡಿಎಸ್‌ ಸಮಾವೇಶ | Kannada Prabha

ಸಾರಾಂಶ

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಈಗ ಮತ್ತೊಮ್ಮೆ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಮಹೇಂದ್ರ ದೇವನೂರು

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಈಗ ಮತ್ತೊಮ್ಮೆ ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ.

ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಕ್ಷೇತ್ರದ ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರ ವಿರುದ್ಧ ಸ್ವಪಕ್ಷೀಯರೇ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ, ಅವರ ಪುತ್ರ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲಿ ‘ಜನರೊಂದಿಗೆ ಜನತಾದಳ’ ಆಯೋಜಿಸುವ ಮೂಲಕ ತೊಡೆ ತಟ್ಟಿದ್ದಾರೆ.

ಜಿ.ಟಿ.ದೇವೇಗೌಡರು ಜೆಡಿಎಸ್ ಜೊತೆ ಅಂತರ ಕಾಯ್ದುಕೊಂಡು ಸ್ವಲ್ಪಮಟ್ಟಿಗೆ ಸಿದ್ದರಾಮಯ್ಯ ಅವರಿಗೆ ಹತ್ತಿರವಾದಾಗಲೇ ತಂದೆ, ಮಗನ ನಡುವೆ ಮನಸ್ತಾಪ ಆರಂಭವಾಗಿತ್ತು. ಈಗ ತಂದೆಯ ಕ್ಷೇತ್ರದಲ್ಲಿ ಮಗ ಆಯೋಜಿಸಿರುವ ಈ ಸಮಾವೇಶ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

ಮೊನ್ನೆಯಷ್ಟೇ ಜಿ.ಟಿ.ದೇವೇಗೌಡರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಬಂದಿದ್ದರು. ಇದರ ಬೆನ್ನಲ್ಲೇ ನಡೆದ ಈ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳು ಯಾವುದೇ ಕಾರಣಕ್ಕೂ ಮತ್ತೆ ಜಿ.ಟಿ.ದೇವೇಗೌಡರಿಗೆ ಮಣೆ ಹಾಕುವುದಿಲ್ಲ ಎಂಬ ಸಂದೇಶ ನೀಡಿತು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಮೂರು ಬಾರಿಯಿಂದ ಸತತವಾಗಿ ಜೆಡಿಎಸ್‌ ಗೆದ್ದಿದೆ. ಇದು ವ್ಯಕ್ತಿಯ ಗೆಲುವಲ್ಲ, ಪಕ್ಷದ ಗೆಲುವು. ಆದರೆ, ಪಕ್ಷದ ಕಾರ್ಯಕರ್ತರ ಭಾವನೆಗೆ ಅಗೌರವವಾಗಿದೆ. ಇದನ್ನು ಯಾವುದೇ ಒತ್ತಡಕ್ಕೂ ಮಣಿಯದೆ ಸರಿಪಡಿಸುವ ಕೆಲಸ ಮಾಡುತ್ತೇನೆ ಎಂಬ ಕುಮಾರಸ್ವಾಮಿ ಅವರ ಮಾತು ಪ್ರತ್ಯಕ್ಷವಾಗಿಯೇ ಜಿ.ಟಿ.ದೇವೇಗೌಡರನ್ನು ಗುರಿಯಾಗಿಸಿಕೊಂಡಿತ್ತು. ಇನ್ನು ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂಬ ಹೇಳಿಕೆಯು ಸ್ವತಃ ಎಚ್‌.ಡಿ.ದೇವೇಗೌಡರು ಹೇಳಿದರೂ ಮಣಿಯುವುದಿಲ್ಲ ಎಂಬುದನ್ನು ಸೂಚಿಸಿತು.

ಈ ಕ್ಷೇತ್ರ ವ್ಯಕ್ತಿಯಿಂದ ಗೆದ್ದಿಲ್ಲ. ಈ ಗೆಲುವು ನಿಮಗೆ ಸೇರಬೇಕು. 2028ರ ಚುನಾವಣೆಯಲ್ಲಿಯೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮ ಆಶೀರ್ವಾದದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ಜಿ.ಡಿ.ಹರೀಶ್‌ ಗೌಡ ಅವರು ಪಕ್ಷ ಸಂಘಟಿಸುತ್ತಿದ್ದಾರೆ. ಸಾ.ರಾ.ಮಹೇಶ್‌ ಮಾರ್ಗದರ್ಶನದಲ್ಲಿ ಗೊಂದಲದ ಅಗತ್ಯವಿಲ್ಲ. ಎಲ್ಲಿ ಏನು ತೀರ್ಮಾನಿಸಬೇಕೆಂದು ನನಗೆ ಗೊತ್ತಿದೆ ಎಂದರು ಕುಮಾರಸ್ವಾಮಿ.

ಮಾಜಿ ಸಚಿವ ಸಾ.ರಾ.ಮಹೇಶ್ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ಅವರಿಗೆ ಅಪಾರ ಗೌರವ, ಪ್ರೀತಿ ಇದೆ. ಯಾರು ಇರಲಿ, ಇಲ್ಲದಿರಲಿ ಪಕ್ಷದ ಕಾರ್ಯಕರ್ತರು ಮತದಾರರು ಇದ್ದಾರೆ ಎಂದು ಪರೋಕ್ಷವಾಗಿ ಜಿ.ಟಿ.ದೇವೇಗೌಡರ ಕಾಲೆಳೆದರು. ಮುಂದಿನ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಇಂಥವರೇ ನಾಯಕರು ಎಂದು ಹೇಳದಿದ್ದರೂ, ಪಕ್ಷದ ಕಾರ್ಯಕರ್ತರನ್ನೇ ಆಧಾರವಾಗಿಟ್ಟುಕೊಂಡು ವಾಗ್ದಾಳಿ ನಡೆಸಿದರು.

ಒಟ್ಟಾರೆ ಮನೆಗೆ ಸೀಮಿತವಾಗಿದ್ದ ತಂದೆ-ಮಗನ ನಡುವಿನ ವಿರಸಕ್ಕೆ ಚಾಮುಂಡೇಶ್ವರಿ ಕ್ಷೇತ್ರ ಮುಂದಿನ ದಿನಗಳಲ್ಲಿ ಬಹುದೊಡ್ಡ ವೇದಿಕೆ ಆಗಬಹುದು.2006ರಲ್ಲಿ ಸಣ್ಣ ತಪ್ಪಿನಿಂದ ಸೋಲಾಯಿತು:

2006ರ ಉಪ ಚುನಾವಣೆಯಲ್ಲಿ ನಮ್ಮ ನಾಯಕರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಇಂದು ಕರ್ನಾಟಕ ಈ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಸಣ್ಣ-ಪುಟ್ಟ ಭಿನ್ನಾಭಿಪ್ರಾಯ, ತಪ್ಪುಗಳಿಂದ ಅಂದು ಸೋಲಾಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.ಆದರೆ, ಅಂದಿನಿಂದ ಅವಿನಾಭಾವ ಸಂಬಂಧ ಈ ಕ್ಷೇತ್ರದ ಮೇಲಿದೆ. ನಿಮ್ಮ ಕುಟುಂಬದ ಮಗನೋ, ಅಣ್ಣನೋ, ತಮ್ಮನೋ ಎಂಬಂತೆ ನನ್ನನ್ನು ಕಾಪಾಡಿದ್ದೀರಿ. ನಿಮ್ಮ ಶಕ್ತಿಯನ್ನು ನಿಮಗೆ ಧಾರೆ ಎರೆಯುವ ಕೆಲಸ ಮಾಡಿದ್ದೇನೆ. ಮುಂದೆಯೂ ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುವೆ ಎಂದು ತಿಳಿಸಿದರು.ಈ ಕ್ಷೇತ್ರ ವ್ಯಕ್ತಿಯಿಂದ ಗೆದ್ದಿಲ್ಲ. ಈ ಗೆಲುವು ನಿಮಗೆ ಸೇರಬೇಕು. 2028ರ ಚುನಾವಣೆಯಲ್ಲಿಯೂ ಕೂಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮ ಆಶೀರ್ವಾದದಿಂದ ಜೆಡಿಎಸ್‌ ಅಧಿಕಾರಕ್ಕೆ ಬರಲಿದೆ. ಜಿ.ಡಿ.ಹರೀಶ್‌ಗೌಡ ಅವರು ಪಕ್ಷ ಸಂಘಟಿಸುತ್ತಿದ್ದಾರೆ. ಸಾ.ರಾ.ಮಹೇಶ್‌ ಮಾರ್ಗದರ್ಶನದಲ್ಲಿ ಗೊಂದಲದ ಅಗತ್ಯವಿಲ್ಲ. ಎಲ್ಲಿ ಏನು ತೀರ್ಮಾನಿಸಬೇಕೆಂದು ನನಗೆ ಗೊತ್ತಿದೆ ಎಂದರು.ಮೈಸೂರು ಜಿಲ್ಲೆಯಲ್ಲಿ ನಂಜನಗೂಡು ಕ್ಷೇತ್ರವನ್ನು ಹೊರತುಪಡಿಸಿ ಬೇರೆ ಎಲ್ಲಾ ಕ್ಷೇತ್ರದಲ್ಲಿಯೂ ಜನರೊಂದಿಗೆ ಜನತಾದಳ ಕಾರ್ಯಕ್ರಮ ಮಾಡಿದ್ದೇವೆ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಆಶೀರ್ವಾದ ಮಾಡಿದರೆ, ನನಗೆ ಚಾಮುಂಡೇಶ್ವರಿ ಕ್ಷೇತ್ರದ ಜನರ ಆಶೀರ್ವಾದ ಇದೆ. ನಾನು ಉದ್ಬೂರು, ರಮ್ಮನಹಳ್ಳಿ ಜನರನ್ನು ನೆನಪಿಸಿಕೊಳ್ಳುತ್ತೇನೆ. 2006ರ ಉಪ ಚುನಾವಣೆ ಸ್ಮರಣೀಯ. ಅದನ್ನು ನಾವು ನಡೆಸಿದ್ದಲ್ಲ, ಕಾರ್ಯಕರ್ತರು ನಡೆಸಿದ್ದು ಎಂದು ಅವರು ಹೇಳಿದರು.ಜೆಡಿಎಸ್‌ ಇಡೀ ರಾಜ್ಯದಲ್ಲಿ ಸುಭದ್ರ:

ಜೆಡಿಎಸ್ ಪಕ್ಷ ಹಳೇ ಮೈಸೂರು ಭಾಗಕ್ಕೆ ಸೀಮಿತವಾಗಿಲ್ಲ. ಇಡೀ ರಾಜ್ಯದಲ್ಲಿ ಜನತಾದಳ ಸುಭದ್ರವಾಗಿದೆ. ರಾಜ್ಯದ ಜನರ ಒಲವು ಜೆಡಿಎಸ್ ಪಕ್ಷದ ಮೇಲಿದೆ ಎಂದು ರಾಜ್ಯ ಯುವಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ನಮ್ಮ ಪಕ್ಷ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ಇದೆ. ರಾಜ್ಯದ ಜನರ ಒಲವು ಜೆಡಿಎಸ್ ಪಕ್ಷದ ಮೇಲಿದೆ ಎಂದ ಅವರು, 2023ರ ಚುನಾವಣೆಯಲ್ಲಿ ಜನತಾದಳಕ್ಕೆ 19 ಸ್ಥಾನ ಲಭಿಸಿದೆ. ಪಂಚರತ್ನ ಕಾರ್ಯಕ್ರಮಗಳ ಮೂಲಕ ಕುಮಾರಸ್ವಾಮಿ ಅವರು ಸಾಕಷ್ಟು ಪ್ರಯತ್ನ ಮಾಡಿದರೂ ಅದಕ್ಕೆ ತಕ್ಕ ಪ್ರತಿಫಲ ಸಿಗಲಿಲ್ಲ. ನಾನು ಇಡೀ ರಾಜ್ಯವ್ಯಾಪಿ ಪಕ್ಷವನ್ನು ಕಟ್ಟುವ ನಿಟ್ಟಿನಲ್ಲಿ ಹಗಲಿರುಳು ಶ್ರಮ ವಹಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

2028ರ ಚುನಾವಣಾ ಫಲಿತಾಂಶದ ಬಳಿಕ ಯಾರು ಸಿಎಂ ಆಗಬೇಕು ಎನ್ನುವುದನ್ನು ನಾನು ಈಗ ಹೇಳುವುದಿಲ್ಲ. ಕುಮಾರಸ್ವಾಮಿ ಅವರು ಅಲ್ಪಾವಧಿ ಸಿಎಂ ಆಗಿದ್ದಾಗ ಕೊಟ್ಟ ಆಡಳಿತವನ್ನು ಇಂದಿಗೂ ಜನ ನೆನೆಸಿಕೊಳ್ಳುತ್ತಾರೆ. ಹಾಗಾಗಿ ಸಿಎಂ ಕುರ್ಚಿ ಮುಖ್ಯವಲ್ಲ, ನಾಡಿನ ಅಭಿವೃದ್ಧಿ ಮುಖ್ಯ ಎಂದು ನಿಖಿಲ್ ತಿಳಿಸಿದರು.ಅನಿರೀಕ್ಷಿತ ಬೆಳವಣಿಗೆಯಿಂದ ಕುಮಾರಸ್ವಾಮಿ ಅವರು ಲೋಕಸಭೆಗೆ ಹೋಗಬೇಕಾಯಿತು. ಅಧಿಕಾರ ಇರಲಿ, ಇಲ್ಲದಿರಲಿ ಕುಮಾರಸ್ವಾಮಿ ಅವರು ಯಾವಾಗಲೂ ರೈತ, ದೀನ ದಲಿತರ ಪರವಾಗಿರುತ್ತಾರೆ. ಅವರನ್ನು ಪ್ರತಿನಿತ್ಯ ಕಾಣುವವರು ರೈತ, ಮಧ್ಯಮ ವರ್ಗದ ಜನ. ಈ ಕಾರಣದಿಂದಲೇ ಕುಮಾರಸ್ವಾಮಿ ಅವರು ಬಂದಾಗ ನೀವು ತೋರಿಸುವ ಪ್ರೀತಿ ಏನು ಎನ್ನುವುದು ಗೊತ್ತಾಗುತ್ತದೆ ಎಂದು ನಿಖಿಲ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯಕ್ಕೆ ಭಾಷೆ ಮಾತ್ರವಲ್ಲ, ರಾಜಕೀಯ ಪ್ರಜ್ಞೆ, ಗ್ರಹಿಕೆ ಮುಖ್ಯ: ಡಾ. ರಂಗನಾಥ
ವಿದೇಶಕ್ಕೂ ಹಾರಿದ ಕಲಬುರಗಿ ಜೋಳದ ರೊಟ್ಟಿ!