ಕನ್ನಡಪ್ರಭ ವಾರ್ತೆ ತುಮಕೂರುಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಮುಂತಾದ ಕ್ರಿಮಿನಲ್ ಕೇಸುಗಳಲ್ಲಿ ಭಾಗಿಯಾಗಿರುವ ಲೋಕಾಯುಕ್ತ ವಿಶೇಷ ತನಿಖಾದಳ ಮುಖ್ಯಸ್ಥ ಎಡಿಜಿಪಿ ಎಂ.ಚಂದ್ರಶೇಖರ್ ಅವರನ್ನು ಕೂಡಲೇ ಭಾರತೀಯ ಸೇವೆಯಿಂದ ಅಮಾನತುಗೊಳಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಮುಖಂಡರು ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.ಈ ವೇಳೆ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರ ವಿರುದ್ಧ ಅಸಭ್ಯ ಮಾತನಾಡಿರುವ ಎಡಿಜಿಪಿ ಚಂದ್ರಶೇಖರ್ ಅವರು ಸಾರ್ವಜನಿಕ ಸೇವೆಯಲ್ಲಿ ಉಳಿಯಲು ಯೋಗ್ಯರಲ್ಲ, ಅವರನ್ನು ತಕ್ಷಣ ಅಮಾನತು ಮಾಡಬೇಕು. ಚುನಾಯಿತ ಪ್ರತಿನಿಧಿಗಳಿಗೆ ಸೇವೆ, ಭದ್ರತೆ ಒದಗಿಸಬೇಕಾದ ಈ ಅಧಿಕಾರಿ ತಮ್ಮ ವ್ಯಾಪ್ತಿ ಮೀರಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು. ಇಂತಹ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೇ ಅಧಿಕಾರಿಯನ್ನು ಕುಮಾರಸ್ವಾಮಿಯವರ ತೇಜೋವಧೆ ಮಾಡಲು ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ. ಹಿಮಾಚಲ ಪ್ರದೇಶ ಐಪಿಎಸ್ ಕೇಡರ್‌ಗೆ ಸೇರಿದ ಚಂದ್ರಶೇಖರ್ ರಾಜ್ಯಕ್ಕೆ ವರ್ಗಾವಣೆಯಾಗಿ ಬಂದು ಪ್ರಮುಖ ಆಯಕಟ್ಟಿನ ಹುದ್ದೆಗಳಲ್ಲಿ ನೇಮಕಗೊಂಡು ಕೆಲಸ ಮಾಡಿದ್ದಾರೆ. ಕೆಲಸ ನಿರ್ವಹಿಸುವ ಜಾಗದಲ್ಲಿ ಹಲವಾರು ಭೂಗಳ್ಳರು, ವ್ಯಾಪಾರಸ್ಥರು, ಉದ್ಯಮಿಗಳು, ಸಮಾಜಘಾತಕರೊಂದಿಗೆ ಒಡನಾಟ ಬೆಳೆಸಿಕೊಂಡು ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ಇದರ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಎಡಿಜಿಪಿ ಚಂದ್ರಶೇಖರ್ ತಮ್ಮ ವ್ಯಾಪ್ತಿ ಮೀರಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ವಿರುದ್ಧ ಅಸಭ್ಯ ಮಾತುಗಳನ್ನಾಡಿದ್ದಾರೆ. ವಿವೇಚನೆ ಮೀರಿ ಹೀನ ಭಾಷೆ ಬಳಸಿದ್ದಾರೆ. ಉದ್ಧಟತನದಿಂದ ಜನಪ್ರಿಯ ನಾಯಕರನ್ನು ಈ ರೀತಿ ತೇಜೋವಧೆ ಮಾಡಲು ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕು ಕಾರಣ ಎಂದು ಟೀಕಿಸಿದರು.ಸರ್ಕಾರದ ಅಧಿಕಾರಿ ಪಕ್ಷಾತೀತವಾಗಿ, ಪ್ರಶ್ನಾತೀತವಾಗಿ ನಡೆದುಕೊಳ್ಳಬೇಕು. ವಿವಾದಾತ್ಮಕ ನಡವಳಿಕೆ ಪ್ರದರ್ಶಿಸಿರುವ ಎಡಿಜಿಪಿ ಚಂದ್ರಶೇಖರ್ ಅವರನ್ನು ಸೇವೆಯಿಂದ ವಜಾ ಮಾಡಬೇಕು, ಅವರ ಭ್ರಷ್ಟಾಚಾರ ಪ್ರಕರಣಗಳ ತನಿಖೆ ಮಾಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾತನಾಡಿ, ಸರ್ಕಾರದ ಸೌಲಭ್ಯ ಪಡೆದು ಕೆಲಸ ಮಾಡುತ್ತಿರುವ ಚಂದ್ರಶೇಖರ್ ಎಂಬ ಐಪಿಎಸ್ ಅಧಿಕಾರಿ ಕೇಂದ್ರ ಸಚಿವ ಕುಮಾರಸ್ವಾಮಿಯವರ ವಿರುದ್ಧ ಅವಹೇಳನಾಕಾರಿಯಾಗಿ ಮಾತನಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ, ಈ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ, ಅವರ ಸೇವಾವಧಿಯ ಪ್ರಕರಣಗಳ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು. ನಗರ ಜೆಡಿಎಸ್ ಅಧ್ಯಕ್ಷ ವಿಜಯ್‌ಗೌಡ ಮಾತನಾಡಿ, ಸರ್ಕಾರದ ಅಧಿಕಾರಿಯಾದ ಚಂದ್ರಶೇಖರ್ ಅವರು ಮಾಜಿ ಮುಖ್ಯಮಂತ್ರಿ, ಕೇಂದ್ರ ಸರ್ಕಾರದ ಸಚಿವ ಕುಮಾರಸ್ವಾಮಿಯವರ ವಿರುದ್ಧ ಹಗುರವಾಗಿ ಹೇಳಿಕೆ ನೀಡುತ್ತಾ ಅಪಮಾನ ಮಾಡಲು ಹೊರಟಿರುವುದನ್ನು ರಾಜ್ಯದ ಜನ ಸಹಿಸಿಕೊಳ್ಳುವುದಿಲ್ಲ. ಸರ್ಕಾರ ಈ ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಇಲ್ಲವಾದರೆ ಜೆಡಿಎಸ್ ರಾಜ್ಯಾದ್ಯಂತ ಉಗ್ರ ಹೋರಾಟ ಮುಂದುವರೆಸುತ್ತದೆ ಎಂದು ಹೇಳಿದರು.
ರಾಜ್ಯ ಜೆಡಿಎಸ್ ಎಸ್.ಟಿ.ಘಟಕದ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ಮುಖಂಡರಾದ ಶ್ರೀನಿವಾಸ ಪ್ರಸಾದ್, ಟಿ.ಜಿ.ನರಸಿಂಹರಾಜು, ಯೋಗಾನಂದಕುಮಾರ್, ಮಹಿಳಾ ಘಟಕ ಅಧ್ಯಕ್ಷೆ ಕುಸುಮಾ ಜಗನ್ನಾಥ್, ನಗರ ಪಾಲಿಕೆ ಮಾಜಿ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ಮಾಜಿ ಸದಸ್ಯರಾದ ಹನುಮಂತರಾಯಪ್ಪ ಎಚ್.ಡಿ.ಕೆ.ಮಂಜುನಾಥ್, ಎ.ಶ್ರೀನಿವಾಸ್, ಟಿ.ಎಚ್.ಬಾಲಕೃಷ್ಣ, ಲಕ್ಷ್ಮೀನರಸಿಂಹರಾಜು, ರಾಮಕೃಷ್ಣಪ್ಪ, ಧರಣೇಂದ್ರಕುಮಾರ್, ಮುಖಂಡರಾದ ಟಿ.ಎಲ್.ಕುಂಭಯ್ಯ, ಗುರುಪ್ರಕಾಶ್ ಬಳ್ಳುಕುರಾಯ, ಗಂಗಣ್ಣ, ದೊಡೇರಿ ವಿಜಯಕುಮಾರ್, ತಾಹೇರಾ ಕುಲ್ಸಂ, ಲೀಲಾವತಿ, ರಾಮಣ್ಣ, ರಂಗಪ್ಪ ಮೊದಲಾದವರು ಭಾಗವಹಿಸಿದ್ದರು.