ಜೆಡಿಎಸ್ ಪಂಚರತ್ನ ರಥಯಾತ್ರೆ ವಾರ್ಷಿಕ ಸವಿನೆನಪು ಸಂಭ್ರಮಾಚರಣೆ

KannadaprabhaNewsNetwork | Published : Dec 27, 2023 1:32 AM

ಸಾರಾಂಶ

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಪರಿಕಲ್ಪನೆಯ ಪಂಚರತ್ನ ರಥಯಾತ್ರೆ ಕೆ.ಆರ್.ಪೇಟೆಗೆ ಆಗಮಿಸಿ ಒಂದು ವರ್ಷ. ಜೆಡಿಎಸ್‌ ಕಾರ್ಯಕರ್ತರಿಂದ ವಾರ್ಷಿಕ ಸವಿ ನೆನಪು, ಸಂಭ್ರಮಾಚರಣೆ, ಕರ್ನಾಟಕಕ್ಕೆ ಮತ್ತೊಮ್ಮೆ ಕುಮಾರಣ್ಣ ಎನ್ನುವ ಘೋಷಣೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕನಸಿನ ಪರಿಕಲ್ಪನೆಯ ಜೆಡಿಎಸ್ ಪಂಚರತ್ನ ರಥಯಾತ್ರೆ ವಾರ್ಷಿಕ ಸವಿನೆನಪು ಕಾರ್ಯಕ್ರಮವನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಿದರು.

ಕಳೆದ 2022ರ ಡಿ.25ರಂದು ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ತಾಲೂಕಿಗೆ ಆಗಮಿಸಿತ್ತು. ಇತಿಹಾಸ ಸೃಷ್ಟಿಸುವ ಕಾರ್ಯಕ್ರಮ ಆಯೋಜಿಸಿದರ ಸವಿನೆನಪಿಗಾಗಿ ಜೆಡಿಎಸ್ ಕಾರ್ಯಕರ್ತರು ಶಾಸಕ ಎಚ್.ಟಿ.ಮಂಜು ನೇತ್ರತ್ವದಲ್ಲಿ ಕೇಕ್ ಕತ್ತರಿಸಿ, ಸಿಹಿ ವಿತರಿಸಿ ಕರ್ನಾಟಕಕ್ಕೆ ಮತ್ತೊಮ್ಮೆ ಕುಮಾರಣ್ಣ ಎನ್ನುವ ಘೋಷಣೆ ಕೂಗಿದರು.

ಪಟ್ಟಣದ ಬಸವೇಶ್ವರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಚ್.ಟಿ.ಮಂಜು, ಕಳೆದ ವರ್ಷ ಪವಿತ್ರ ಕ್ರಿಸ್‌ಮಸ್ ದಿನದಂದು ನಮ್ಮ ತಾಲೂಕಿಗೆ ಕುಮಾರಣ್ಣನವರ ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಆಗಮಿಸಿತ್ತು ಎಂದರು.

ತಾಲೂಕಿನ ಇತಿಹಾಸದಲ್ಲಿಯೇ ಸುಮಾರು 50ರಿಂದ 60 ಸಾವಿರ ಜನ ಒಂದೆಡೆ ಸೇರಿ ನಡೆಸಿದ ಪಂಚರತ್ನ ಕಾರ್ಯಕ್ರಮ ಇತಿಹಾಸದ ಪುಟಗಳಲ್ಲಿ ದಾಖಲಾಯಿತು ಎಂದರು.

ತಾಲೂಕಿನ ಜೆಡಿಎಸ್ ಕಾರ್ಯಕರ್ತರ ಹಿತಾಸಕ್ತಿಗನುಗುಣವಾಗಿ ನಾನು ರಾಜಕಾರಣ ಮಾಡುತ್ತಿದ್ದೇನೆ. ನಿಮ್ಮ ಮತಕ್ಕೆ ಗೌರವ ತರುವ ಕೆಲಸ ಮಾಡಲಿದ್ದೇನೆ. ತಾಲೂಕಿನ ಅಭಿವೃದ್ಧಿಗೆ ನನ್ನ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮು ಮಾತನಾಡಿ, ತಾಲೂಕಿನ ಜನತೆ ಕುಮಾರಣ್ಣನಿಗೆ ನೀಡಿದ ಅಭಯದಂತೆ ಶಾಸಕ ಮಂಜಣ್ಣನಿಗೆ ಹೆಚ್ಚು ಮತ ನೀಡುವ ಮೂಲಕ ಜೆಡಿಎಸ್ ಗೆಲುವಿಗೆ ಸಹಕಾರ ನೀಡಿದ್ದಾರೆ ಎಂದರು.

ಶಾಸಕರು ಕೂಡ ಮತ ನೀಡಿದ ಮತದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಪಂಚರತ್ನ ಕಾರ್ಯಕ್ರಮದ ಒಂದು ವರ್ಷ ಸವಿನೆನಪಿಗಾಗಿ ಇಂದು ಜೆಡಿಎಸ್ ಕಾರ್ಯಕರ್ತರು ಅದೇ ಉತ್ಸಾಹದಲ್ಲಿ ಇರುವುದು ಸಂತಸ ತಂದಿದೆ ಎಂದರು.

ಇದೇ ವೇಳೆ ಪುರಸಭಾ ಸದಸ್ಯ ಗಿರೀಶ್, ಮಾಜಿ ಸದಸ್ಯ ಹೇಮಂತ್‌ಕುಮಾರ್, ಸಂತೇಬಾಚಹಳ್ಳಿ ಹೋಬಳಿ ಜೆಡಿಎಸ್ ಅಧ್ಯಕ್ಷ ರವಿಕುಮಾರ್, ಅಲ್ಪಸಂಖ್ಯಾತ ಘಟಕದ ತನ್ವೀರ್ ಪಾಷ, ಜೆಡಿಎಸ್ ಮುಖಂಡರಾದ ಮಹದೇವೇಗೌಡ, ಅಲೋಕ, ಬೈರಾಪುರ ಹರೀಶ್ ಸೇರಿದಂತೆ ಹಲವರಿದ್ದರು.

Share this article