ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಓರ್ವ ವರ್ಣರಂಜಿತ ರಾಜಕಾರಣಿ, ಜನಹಿತಕ್ಕಾಗಿ ಎಂತಹವರನ್ನು ಎದುರು ಹಾಕಿಕೊಳ್ಳುವ ಮನಸ್ಥಿತಿ ಹೊಂದಿದ್ದರು ಎಂದು ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಓರ್ವ ವರ್ಣರಂಜಿತ ರಾಜಕಾರಣಿ, ಜನಹಿತಕ್ಕಾಗಿ ಎಂತಹವರನ್ನು ಎದುರು ಹಾಕಿಕೊಳ್ಳುವ ಮನಸ್ಥಿತಿ ಹೊಂದಿದ್ದರು ಎಂದು ಜೆಡಿಯು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ತಿಳಿಸಿದ್ದಾರೆ. ನಗರದ ಜಿಲ್ಲಾ ಜೆಡಿಯು ಕಚೇರಿಯಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಜೆ.ಎಚ್.ಪಟೇಲರ 96 ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಸರ್ವೋದಯ, ಕಟ್ಟಕಡೆಯ ವ್ಯಕ್ತಿಗೆ ಸರಕಾರದ ಸವಲತ್ತು ದೊರೆಯಬೇಕೆಂಬ ಪರಿಕಲ್ಪನೆ ಪಟೇಲರದ್ದಾಗಿತ್ತು. ಬಡಜನರ ಅಭಿವೃದ್ಧಿ ಎಂಬ ಸಿದ್ದಾಂತಕ್ಕೆ ಕಟ್ಟು ಬಿದ್ದು ರಾಜಕಾರಣದಲ್ಲಿದ್ದ ಪಟೇಲರು, ಸ್ವತಹಃ ದೇವೇಗೌಡರೇ ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದಾಗಲೂ ನಿರಾಕರಿಸಿ, ಜೆಡಿಯು ಪಕ್ಷದಲ್ಲಿಯೇ ಉಳಿದವರು. ಅಧಿವೇಶನಗಳಲ್ಲಿ ವಿರೋಧ ಪಕ್ಷಗಳ ಟೀಕೆಗೆ ತಮ್ಮ ಹಾಸ್ಯಭರಿತ ಮಾತುಗಳಿಂದಲೇ ಉತ್ತರ ನೀಡುತ್ತಿದ್ದ ಪಟೇಲರು, ಸಂಸತ್ತಿನಲ್ಲಿ ಮೊದಲ ಬಾರಿಗೆ ಕನ್ನಡದಲ್ಲಿಯೇ ಮಾತನಾಡಿ ಇಡೀ ದೇಶದ ಗಮನ ಸೆಳೆದರು ಎಂದರು.
ಮುಂದಿನ ಅಕ್ಟೋಬರ್ 12 ರಂದು ಜೆಡಿಯು ಪಕ್ಷದ ವತಿಯಿಂದ ರಾಷ್ಟ್ರಪಿತ ಮಹಾತ್ಮಗಾಂಧಿ, ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಹಾಗೂ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಅವರ ಜನ್ಮ ದಿನಗಳ ಅಂಗವಾಗಿ ನಗರದ ಕನ್ನಡ ಭವನದಲ್ಲಿ ಚುನಾವಣಾ ಸುಧಾರಣೆ ಎಂಬ ವಿಷಯ ಕುರಿತು ಒಂದು ದಿನ ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಮಹಿಮ ಪಟೇಲ್, ಚಂದ್ರಶೇಖರ ಸೇರಿದಂತೆ ಹಿರಿಯ ನಾಯಕರು ಭಾಗವಹಿಸುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ಮನವಿ ಮಾಡಿದರು.ಜೆಡಿಯು ಪಕ್ಷದ ಮತ್ತೋರ್ವರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೆಡಿಯು ಮಹಿಳಾ ಘಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಯಶೋಧ, ನಗರ ಘಟಕದ ಅಧ್ಯಕ್ಷ ಪರಮೇಶ್, ಜಿಲ್ಲಾ ಕಾರ್ಯದರ್ಶಿ ಕುದೂರು ಬಸಣ್ಣ.ಎಸ್, ಪಕ್ಷದ ಮುಖಂಡರಾದ ಮಂಜುನಾಥ್, ಕಲಾವಿದರಾದ ವಿರೇಶ್ ಮತ್ತಿತರರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.