ಧಾರವಾಡ: ಡಾ. ದ.ರಾ. ಬೇಂದ್ರೆ ಅವರ ನಾಕುತಂತಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಬಂದು ಐದು ದಶಕಗಳು ಕಳೆದ ಹಿನ್ನೆಲೆಯಲ್ಲಿ ಸುವರ್ಣ ಸಂಭ್ರಮದ ನಿಮಿತ್ತ ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಜು. 12ರಂದು ವಿಶೇಷ ಉಪನ್ಯಾಸ ಮಾಲೆ ಆರಂಭಿಸಿದೆ.
ನಾಕುತಂತಿ ಮತ್ತು ಭಾರತೀಯ ತತ್ವದರ್ಶನಗಳು ಕುರಿತು ಬೆಂಗಳೂರಿನ ವಂದೇ ಮಾತರಂ ಪಾಠಾಶಾಲಾ ಸಂಸ್ಥಾಪಕರು, ಸಾಹಿತಿ ಡಾ. ಜಿ.ಬಿ. ಹರೀಶ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಲಬುರ್ಗಿ ಕೇಂದ್ರೀಯ ವಿವಿ ನಿರ್ದೇಶಕ ಪ್ರೊ. ಬಸವರಾಜ ಡೋಣೂರ ಸಂಚಾಲಕತ್ವ ವಹಿಸಲಿದ್ದು, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯೆ ಡಾ. ಗಿರಿಜಾ ಹಿರೇಮಠ ಭಾಗವಹಿಸುತ್ತಾರೆ. ತಾವು ಅಧ್ಯಕ್ಷತೆ ವಹಿಸಲಿದ್ದು, ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳನ್ನು ಆಹ್ವಾನಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ ಸೊಲಗಿ, ಸಂಯೋಜಕ ಪ್ರಕಾಶ ಬಾಳಿಕಾಯಿ ಇದ್ದರು.ಬೇಂದ್ರೆ ಭವನಕ್ಕೆ ಸಿಗದ ಬಣ್ಣದ ಭಾಗ್ಯ: 22 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬೇಂದ್ರೆ ಭವನಕ್ಕೆ ನಿರ್ವಹಣೆ ಕೊರತೆ ಉಂಟಾಗಿದೆ. ಬರೋಬ್ಬರಿ 22 ವರ್ಷಗಳಿಂದ ಸಂಪೂರ್ಣ ಕಟ್ಟಡದ ಬಣ್ಣದ ಭಾಗ್ಯ ಸಿಕ್ಕಿಲ್ಲ. ಅನುದಾನ ಕೊರತೆಯಿಂದ ಬಣ್ಣ ಕಾಣದೇ, ಶಿಥಿಲಗೊಂಡಿರುವ ಕಟ್ಟಡ ಸೊರಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಡಾ.ಡಿ.ಎಂ. ಹಿರೇಮಠ ಹೇಳಿದರು.