ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆಯಿಂದ ಉದ್ಯೋಗ ಸೃಷ್ಟಿ : ಕೋಟಾ ಶ್ರೀನಿವಾಸ್‌ ಪೂಜಾರಿ

KannadaprabhaNewsNetwork | Published : Jan 30, 2025 12:30 AM

ಸಾರಾಂಶ

ಚಿಕ್ಕಮಗಳೂರುಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತ ಕಾರ್ಯಾಗಾರ, ಸವಲತ್ತು ವಿತರಣಾ ಕಾರ್ಯಕ್ರಮ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಹಾಗೂ ಕೃಷಿ ಮತ್ತು ಕೃಷಿ ಸಂಬಂಧಿತ ಇಲಾಖೆ ಗಳ ಸಹಭಾಗಿತ್ವದಲ್ಲಿ ನಗರದ ಎಐಟಿ ಕಾಲೇಜಿನ ಆಂಫಿ ಥಿಯೇಟರ್‌ನಲ್ಲಿ ಬುಧವಾರ ನಡೆದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ ಹಾಗೂ ಇತರೆ ಕೇಂದ್ರ ಪುರಸ್ಕೃತ ಯೋಜನೆಗಳ ಕುರಿತು ಕಾರ್ಯಾಗಾರ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತಿಚೀನ ದಿನಗಳಲ್ಲಿ ಸ್ವಂತ ಉದ್ಯೋಗ ಮತ್ತು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡಿ ಬದುಕುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕದಿಂದ ಒಂದಿಷ್ಟು ಉದ್ಯೋಗ ಸೃಷ್ಟಿ ಮಾಡಬಹುದು. ನಾವು ಕಲಬೆರಕೆ ರಹಿತ ಆಹಾರ ಸೇವಿಸಲು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಯೋಜನೆಯಿಂದ ಪ್ರಾರಂಭ ಮಾಡಬೇಕು ಎಂದು ಹೇಳಿದರು.

ಇಂತಹ ಕಾರ್ಯಾಗಾರ ನಡೆಯುತ್ತಿರುವುದು ಕರ್ನಾಟಕ ರಾಜ್ಯದಲ್ಲಿ ಚಿಕ್ಕಮಗಳೂರು ಎರಡನೇ ಸ್ಥಾನ ಪಡೆದುಕೊಂಡಿರುವುದು ಖುಷಿ ವಿಚಾರ. ರಾಜ್ಯದ ಎಲ್ಲಾ ಜಿಲ್ಲೆ ಗಳಲ್ಲೂ ಇಂತಹ ಕಾರ್ಯಕ್ರಮ ನಡೆಯಬೇಕು. ಸ್ವಂತ ಉದ್ಯೋಗ ಮಾಡುವವರಿಗೆ ಈ ಯೋಜನೆಯಿಂದ ಅನುಕೂಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರಿಗೆ ಹಾಗೂ ಸ್ವಂತ ಉದ್ಯೋಗ ಮಾಡುವವರಿಗೆ ಅನುಕೂಲವಾಗಲು ಇಂತಹ ಯೋಜನೆ ಜಾರಿ ತಂದಿದೆ. ರೈತರು ದೇಶದ ಆಸ್ತಿ, ಗುಣಮಟ್ಟದ ಆಹಾರ ಪದಾರ್ಥಗಳನ್ನು ಬೆಳೆಯುವ ರೈತರಿಗೆ ಇನ್ನು ಉತ್ತಮ ಬೆಂಬಲವನ್ನು ಸರ್ಕಾರ ನೀಡಬೇಕು ಎಂದು ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಎಂ.ಸಿ. ಶಿವಾನಂದಸ್ವಾಮಿ ಮಾತನಾಡಿ, ಯುವ ಪೀಳಿಗೆಗೆ ಸ್ವಂತ ಉದ್ಯೋಗ ಮಾಡಲು ತಮ್ಮ ಜೀವನ ರೂಪಿಸಿಕೊಳ್ಳಲು ಈ ಯೋಜನೆ ಸಹಕಾರಿ, ಜೊತೆಗೆ ಒಳ್ಳೆ ವೇದಿಕೆ ಕಲ್ಪಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ವ್ಯವಸ್ಥಾಪಕ ನಿದೇಶಕ ಡಾ. ಕೆ.ಎಚ್. ಶಿವಕುಮಾರ್ ಮಾತನಾಡಿ, ರೈತರನ್ನು ಉದ್ದಿಮೆಗಾರನ್ನಾಗಿ ಮಾಡುವುದು ಈ ಯೋಜನೆ ಮುಖ್ಯ ಉದ್ದೇಶ. ಇದರಿಂದ ಇನ್ನು ಹಲವಾರು ಹೊಸ ಸ್ವಂತ ಉದ್ಯೋಗ ಕೈಗೊಳ್ಳುವವರಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದರು.

ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ಅಧ್ಯಕ್ಷ ಬಿ.ಎಚ್. ಹರೀಶ್, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಭಾರತೀಯ ಕಾಫೀ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್, ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್, ಜಂಟಿ ಕೃಷಿ ನಿರ್ದೇಶಕಿ ಎಚ್‌.ಎಲ್‌. ಸುಜಾತ, ಕೃಷಿ ಇಲಾಖೆ ಉಪ ನಿರ್ದೇಶಕ ಡಾ. ವೆಂಕಟೇಶ್‌ ಚವ್ಹಾಣ್‌, ಎಂ.ಆರ್‌. ಹಂಸವೇಣಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ. ಪೂರ್ಣಿಮಾ, ಸಂಬಾರು ಮಂಡಳಿ ಉಪ ನಿರ್ದೇಶಕ ಹೊನ್ನೂರು, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಮಹೇಶ್‌ ಉಪಸ್ಥಿತರಿದ್ದರು.

ಕಾರ್ಯಕ್ರಮದ ಹಿನ್ನಲೆಯಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.

29 ಕೆಸಿಕೆಎಂ 3ಚಿಕ್ಕಮಗಳೂರಿನ ಎಐಟಿ ಕಾಲೇಜಿನ ಆಂಫಿ ಥಿಯೇಟರ್‌ನಲ್ಲಿ ಬುಧವಾರ ನಡೆದ ಕಾರ್ಯಾಗಾರ ಮತ್ತು ಸವಲತ್ತು ವಿತರಣಾ ಕಾರ್ಯಕ್ರಮವನ್ನು ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಉದ್ಘಾಟಿಸಿದರು. ಬಿ.ಎಚ್‌. ಹರೀಶ್‌, ಶಿವಾನಂದಸ್ವಾಮಿ, ಸುಜಾತ ಶಿವಕುಮಾರ್‌, ಎಚ್‌.ಎಲ್‌. ಸುಜಾತ, ಡಾ. ವೆಂಕಟೇಶ್‌ ಚವ್ಹಾಣ್‌ ಇದ್ದರು.

Share this article