ಸರ್ಕಾರಿ ಸಂಸ್ಥೆಗಳ ಖಾಸಗೀಕರಣದಿಂದ ಉದ್ಯೋಗ ನಾಶ: ಕೆ. ಜಯಪ್ರಕಾಶ್ ಹೆಗ್ಡೆ

KannadaprabhaNewsNetwork |  
Published : Apr 19, 2024, 01:06 AM IST
ಜಯ18 | Kannada Prabha

ಸಾರಾಂಶ

ಕೋಟೇಶ್ವರ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಿತು. ಸಮಾವೇಶದಲ್ಲಿ ಜೆಪಿ ಹೆಗ್ಡೆ ಕೇಂದ್ರ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು. ಹಾಕುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದರು, ಆದರೆ 10 ವರ್ಷಗಳಾದರೂ ಹೇಳಿದಂತೆ ಯಾಕೆ ಮಾಡಿಲ್ಲ ಎಂದು ಕೇಳೋಣ ಎಂದರೆ ಅವರು ಸಿಗುವುದೇ ಇಲ್ಲ ಎನ್ನುತ್ತಿದ್ದಾರೆ ಜನರು. 10 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಕೊಟ್ಟಿದ್ದರೆ ದೇಶ ರಾಮ ರಾಜ್ಯವಾಗುತ್ತಿತ್ತು. ಆದರೆ ಉದ್ಯೋಗ ಕೊಡುವುದು ಬಿಟ್ಟು ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಉದ್ಯೋಗ ನಾಶ ಮಾಡಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಅವರು ಇಲ್ಲಿನ ಕೋಟೇಶ್ವರ ಬಸ್ ನಿಲ್ದಾಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.

ನಿಮ್ಮ ಜೊತೆ ಇರುವವರನ್ನು, ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವವರನ್ನು ಗೆಲ್ಲಿಸುತ್ತೀರೋ, ನಾಯಕನ ಹೆಸರಿನಲ್ಲಿ ಮತ ಕೇಳಿ ಗೆದ್ದು ಕಾಣೆಯಾಗುವವರನ್ನು ಆರಿಸುತ್ತೀರೋ ನಿರ್ಧರಿಸಿ ಎಂದರು.

ಜನಪ್ರತಿನಿಧಿಗಳಿಗೆ ಜನರ ಕೆಲಸ ಮಾಡುವುದು ಸೇವೆಯಲ್ಲ, ಅದು ಕರ್ತವ್ಯ. ನಾನು ಶಾಸಕ, ಸಚಿವ, ಸಂಸದನಾಗಿ ಮಾಡಿದ ಕೆಲಸಗಳ ಹೆಸರಿನಲ್ಲಿ ಮತ ಕೇಳುತಿದ್ದೇನೆ. ಕೆಲಸ ಮಾಡದವರನ್ನು ಗೆಲ್ಲಿಸಿದರೆ ನಿಮಗೆ ಏನು ಲಾಭ ಎಂದು ಕೇಳಿದರು.

ತಾನು ಸಂಸದನಾದರೆ ಕ್ಷೇತ್ರಕ್ಕೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸುವ ಪ್ರಯತ್ನ ಮಾಡುತ್ತೇನೆ, ಬಡವರಿಗೆ ಸುಲಭವಾಗಿ ಆರೋಗ್ಯ ಮತ್ತು ಉದ್ಯೋಗ ನನ್ನ ಆದ್ಯತೆಯಾಗಿದೆ ಎಂದರು.

ಸಮಾವೇಶದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ ಮತ್ತು ಬಿ.ಎಂ. ಸುಕುಮಾರ್ ಶೆಟ್ಟಿ, ಕೆಪಿಸಿಸಿ ವಕ್ತಾರ ನಿಕೇತ್ ರಾಜ್, ಪಕ್ಷದ ನಾಯಕರಾದ ಎಂ.ಎ.ಗಫೂರ್, ದಿನೇಶ್ ಹೆಗ್ಡೆ ಮೊಳಹಳ್ಳಿ, ದೇವಕಿ ಸಣ್ಣಯ್ಯ, ಮಲ್ಯಾಡಿ ಶಿವರಾಮ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಮುಂತಾದವರಿದ್ದರು.

ನನಗೆ, ಭಟ್ರಿಗೆ, ಪ್ರಮೋದ್ರಿಗೆ ಟಿಕೆಟ್ ಸಿಗದಂತೆ ಮಾಡಿದ್ದೆ ಕೋಟ

ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ವಾಗ್ದಾಳಿ ನಡೆಸಿದರು. ಸುಳ್ಳು ಹೇಳುವುದೇ ಅವರ ಬಂಡವಾಳ, 3 ಬಾರಿ ಶಾಸಕರಾದರೂ ಯಾವುದೇ ಸಾಧನೆ ಮಾಡಿಲ್ಲ, ನನ್ನ ಕ್ಷೇತ್ರ ಅಭಿವೃದ್ಧಿಗೆ 2 ಕೋಟಿ ರು.ಗಳ ಅನುದಾನ ಕೇಳಿದಾಗ ಕೊಡ್ತೇ ಕೊಡ್ತೇ ಎಂದು ಹೇಳಿ ಕೈಕೊಟ್ಟರು. ನನಗೆ ಬೈಂದೂರಿನಲ್ಲಿ ಟಿಕೆಟ್ ಸಿಗದಂತೆ ಮಾಡಿದ್ದೆ ಅವರು. ನನಗೆ ಮಾತ್ರವಲ್ಲ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ, ಉಡುಪಿಯ ರಘುಪತಿ ಭಟ್ಟರಿಗೆ, ಪ್ರಮೋದ್ ಮಧ್ವರಾಜರಿಗೂ ಟಿಕೆಟ್ ಸಿಗದಂತೆ ಮಾಡಿದ್ದೇ ಅವರು ಎಂದು ಆರೋಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ