ಕನ್ನಡಪ್ರಭ ವಾರ್ತೆ ಮಂಡ್ಯ
ಸರ್ಕಾರವು ೨೦೧೭ರ ಅಕ್ಟೋಬರ್ ೩೧ಕ್ಕಿಂತ ಮೊದಲು ನೇಮಕಗೊಂಡವರಿಗೆ ಅನುಮೋದನೆ ನೀಡಲು ಮುಂದಾಗಿದ್ದರೂ, ಅಲ್ಲಿ ಒಂದು ದೊಡ್ಡ ತಾಂತ್ರಿಕ ಅಡ್ಡಿಯಿತ್ತು. ಹೆಚ್ಚಿನ ಶ್ರಮಿಕರಿಗೆ ಕನಿಷ್ಠ ವಿದ್ಯಾರ್ಹತೆಯ ದಾಖಲೆಗಳಿರಲಿಲ್ಲ. ಅಕ್ಷರ ಜ್ಞಾನವಿಲ್ಲದ, ಕೇವಲ ಕೈಯಲ್ಲಿ ಆಧಾರ್ ಕಾರ್ಡ್ ಮಾತ್ರ ಹಿಡಿದು ದಶಕಗಳಿಂದ ದುಡಿಯುತ್ತಿದ್ದ ಈ ವರ್ಗಕ್ಕೆ ನ್ಯಾಯಯುತವಾಗಿ ಅನುಮೋದನೆ ನೀಡುವುದು ದೊಡ್ಡ ಸವಾಲಾಗಿತ್ತು.
೧೫-೨೦ ವರ್ಷಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದ ಇವರಿಗೆ ಉದ್ಯೋಗ ಭದ್ರತೆ ಎಂಬುದು ಕೇವಲ ಕನಸಾಗಿತ್ತು. ಸರ್ಕಾರಗಳು ಭರವಸೆ ನೀಡುತ್ತಿದ್ದರೂ, ವಿದ್ಯಾರ್ಹತೆಯ ಕೊರತೆ ಮತ್ತು ತಾಂತ್ರಿಕ ದಾಖಲೆಗಳ ಅಲಭ್ಯತೆಯ ಕಾರಣದಿಂದ ಇವರ ಸೇವೆ ಅನುಮೋದನೆಗೊಳ್ಳದೆ ನೆನೆಗುದಿಗೆ ಬಿದ್ದಿತ್ತು.ಮಂಡ್ಯ ಜಿಲ್ಲೆಯೊಂದರಲ್ಲೇ ಸುಮಾರು ೭೨೭ ಹುದ್ದೆಗಳಿದ್ದವು (೫೫೦ ನೀರುಗಂಟಿಗಳು, ೪೧ ಅಟೆಂಡರ್ ಹಾಗೂ ೧೩೮ ಸ್ವಚ್ಛತಾಗಾರರು). ದಾಖಲೆಗಳ ಕೊರತೆಯಿಂದಾಗಿ ಇವರ ಬದುಕು ಅತಂತ್ರವಾಗಿತ್ತು. ಈ ಸಮಸ್ಯೆಯನ್ನು ಅರಿತ ಜಿಲ್ಲಾ ಪಂಚಾಯ್ತಿ ಕೇವಲ ಅಂಕಪಟ್ಟಿಗಳನ್ನು ನೋಡುವ ಬದಲು, ಅವರು ಕೆಲಸ ಮಾಡಿದ ದಿನಗಳ ಹಾಜರಾತಿ, ಪಾವತಿಯಾದ ವೇತನದ ವಿವರ ಮತ್ತು ಗ್ರಾಪಂ ಸಭೆಯ ನಿರ್ಣಯಗಳನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲು ನಿರ್ಧರಿಸಿತು. ಇದು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿರದೆ, ಹಕ್ಕಿಗಾಗಿ ಕಾಯುತ್ತಿದ್ದ ಶ್ರಮಿಕರ ಪರವಾಗಿ ನಿಂತ ನ್ಯಾಯದ ನಡೆಯಾಗಿದೆ.
ಜಿಲ್ಲಾ ಪಂಚಾಯ್ತಿಯ ಆಡಳಿತ ವಿಭಾಗದಿಂದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಹಾಗೂ ತಾಲೂಕು ಮಟ್ಟದ ಪರಿಶೀಲನಾ ಸಮಿತಿಯನ್ನು ರಚಿಸಿ, ಸೇವೆ ಸಲ್ಲಿಸುತ್ತಿರುವ ನೌಕರರ ಅರ್ಹತೆಯನ್ನು ಮೌಲ್ಯಮಾಪನ ಮಾಡಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಯು ಜಿಲ್ಲೆಯಾದ್ಯಂತ ಗುರುತಿಸಲ್ಪಟ್ಟ ಒಟ್ಟು ೭೨೭ ಹುದ್ದೆಗಳ ಪೈಕಿ ೬೫೧ ನೌಕರರನ್ನು ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಹಾಗೂ ತಾಲೂಕು ಮಟ್ಟದ ಪರಿಶೀಲನಾ ಸಮಿತಿಯವರು ಎಲ್ಲಾ ಹಂತಗಳಲ್ಲಿಯೂ ಪರಿಶೀಲನೆ ನಡೆಸಿ ೫೯೦ ನೌಕರರ ಪ್ರಸ್ತಾವನೆಗಳು ಅರ್ಹವೆಂದು ಸಾಬೀತಾಯಿತು. ಪ್ರತಿಯೊಬ್ಬರಿಗೂ ತಮ್ಮ ವಾದ ಮಂಡಿಸಲು ಅವಕಾಶ ನೀಡಿದ್ದರಿಂದ, ಇಡೀ ಪ್ರಕ್ರಿಯೆ ಯಾವುದೇ ಗೊಂದಲವಿಲ್ಲದೆ ಅತ್ಯಂತ ಕಾನೂನುಬದ್ಧವಾಗಿ ಪೂರ್ಣಗೊಂಡಿತು.
ದಶಕಗಳಿಂದ ‘ತಾತ್ಕಾಲಿಕ’ ಅಥವಾ ‘ಹಂಗಾಮಿ’ ಎಂಬ ಅನಿಶ್ಚಿತತೆಯ ಹಣೆಪಟ್ಟ ಹೊತ್ತು ದುಡಿಯುತ್ತಿದ್ದ ೫೮೬ ಶ್ರಮಜೀವಿಗಳಿಗೆ (೪೮೮ ನೀರುಗಂಟಿಗಳು, ೪೦ ಅಟೆಂಡರ್‌ಗಳು ಹಾಗೂ ೫೮ ಸ್ವಚ್ಛತಾಗಾರರು) ಈ ಬಾರಿಯ ೭೭ನೇ ಗಣರಾಜ್ಯೋತ್ಸವದ ದಿನದಂದು ಅಧಿಕೃತವಾಗಿ ಸೇವಾ ಅನುಮೋದನೆ ಪತ್ರ ವಿತರಿಸಲಾಗಿದೆ. ಆ ಕ್ಷಣ ಅವರ ಮುಖದಲ್ಲಿ ಮೂಡಿದ ನಗು ಮತ್ತು ನೆಮ್ಮದಿ ಜಿಲ್ಲಾ ಪಂಚಾಯ್ತಿ ನಡೆಸಿದ ಈ ಸುದೀರ್ಘ ಪರಿಶ್ರಮಕ್ಕೆ ಸಂದ ದೊಡ್ಡ ಗೌರವ. ಇಂದು ಅವರು ಕೇವಲ ನೌಕರರಲ್ಲ, ಸಮಾಜದಲ್ಲಿ ಗೌರವ ಮತ್ತು ಉದ್ಯೋಗ ಭದ್ರತೆ ಹೊಂದಿದ ಶಕ್ತಿಯಾಗಿದ್ದಾರೆ.