ಕಾರಟಗಿ: ಪಟ್ಟಣದ ಆರಾಧ್ಯದೈವ ಶ್ರೀ ಶರಣಬಸವೇಶ್ವರರ ಜೋಡು ರಥೋತ್ಸವ ಶುಕ್ರವಾರ ಸಂಜೆ ಜನಸಾಗರದ ನಡುವೆ ವಿಜೃಂಭಣೆಯೊಂದಿಗೆ ನಡೆಯಿತು.
ದೇವಸ್ಥಾನದ ಮುಂದಿನ ರಥಬೀದಿಯಲ್ಲಿ ಅಲಂಕೃತ ಎರಡು ರಥಗಳಲ್ಲಿ, ನಿಗದಿಯಾಗಿದ್ದ ೬.೩೦ರ ಮುಹೂರ್ತಕ್ಕೆ ಭಕ್ತರು ಬೆಳಗ್ಗೆ ಜೋಡುರಥಗಳನ್ನು ಅಲಂಕರಿಸಿದ್ದರು. ಇನ್ನು ಕೆಲವು ಭಕ್ತರು ಬೃಹತ್ ರುದ್ರಾಕ್ಷಿ ಮಾಲೆ, ಬೃಹತ್ ಹೂವಿನ ಹಾರವನ್ನು ಹಾಕಿ ಮತ್ತಷ್ಟು ಮೆರಗು ನೀಡಿದ್ದರು.
ಶರಣಬಸವೇಶ್ವರ ಬೆಳ್ಳಿ ಮೂರ್ತಿ ಹಾಗೂ ಗಣೇಶನ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಕಳಸಾರೋಹಣ ಮಾಡಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಸ್ತೆಯ ಎರಡು ಬದಿಗಳಲ್ಲಿ ನೆರೆದಿದ್ದ ಅಪಾರ ಜನಸ್ತೋಮ ಶ್ರೀ ಶರಣ ಬಸವೇಶ್ವರರಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು. ಜೈಕಾರದ ನಡುವೆ ಎರಡು ರಥಗಳು ನಿಧಾನವಾಗಿ ಸಾಗಿದವು. ವಿವಿಧ ಕಲಾ ತಂಡಗಳು ಸೇರಿದಂತೆ ಸ್ಥಳೀಯ ಡೊಳ್ಳು ಕಲಾವಿದರ ಹಲವು ವಾದ್ಯಗಳ ನಡುವೆ ರಥಗಳು ಸಾಗಿದವು.ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ರಥಬೀದಿಯ ಮನೆ ಮುಂದೆ ಮತ್ತು ಮೇಲ್ಬಾಗದಲ್ಲಿ ಜಮಾಯಿಸಿದ್ದರು. ರಥಕ್ಕೆ ಜಯಘೋಷ ಹಾಕುತ್ತ ಹೂವು, ಹಣ್ಣು, ಉತ್ತತ್ತಿ ಎಸೆದು ಭಕ್ತಿಯನ್ನು ಅರ್ಪಿಸಿದರು.
ಈ ಬಾರಿ ಸುವರ್ಣ ಮಹೋತ್ಸವದ ಪುರಾಣ ಪ್ರವಚನ ಶ್ರಾವಣ ಮಾಸದ ತಿಂಗಳ ವರೆಗೆ ನಡೆಯಿತು. ಇತರೆಲ್ಲ ಧಾರ್ಮಿಕ ಕಾರ್ಯಕ್ರಮಗಳು ಜೋಡು ರಥೋತ್ಸವದೊಂದಿಗೆ ಸಂಪನ್ನಗೊಂಡಿತು.
ಬೆಳಗ್ಗೆ ದೇವಸ್ಥಾನದಲ್ಲಿ ಶರಣಬಸವೇಶ್ವರ ಮೂರ್ತಿ, ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವದಲ್ಲಿ ತಾಲೂಕಿ ವಿವಿಧ ಗ್ರಾಮಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದರು.