ಕನ್ನಡಪ್ರಭ ವಾರ್ತೆ ದಾವಣಗೆರೆ
ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿವಿಯ ಎಂಬಿಎಂ ಸಭಾಂಗಣದಲ್ಲಿ ಬುಧವಾರ ದಾವಿವಿ ಹಾಗೂ ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದಿಂದ ಹಮ್ಮಿಕೊಂಡಿದ್ದ ಭಾರತದ ಮಾನವ ಬಾಹ್ಯಾಕಾಶ ಯಾನ ಸಂಶೋಧನೆಗೆ ಸಹಸ್ರ ಸಾಧ್ಯತೆಗಳು ಕುರಿತ ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಗಗನಯಾನ ಯೋಜನೆಗೆ ದೇಶದ ವಿವಿಗಳ ಸಂಶೋಧನಾ ಸಹಕಾರ ಅಗತ್ಯ ಎಂದರು.
ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ ಸಾಧಿಸುವ ಜತೆಗೆ ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಅಗತ್ಯ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಲವು ಹಂತದ ಸಿದ್ಧತೆ ನಡೆದಿದ್ದು, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿ ಸುಮಾರು 18 ದಿನ ವಿವಿಧ ಸಂಶೋಧನಾ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ದೇಶದ ಬಾಹ್ಯಾಕಾಶ ಸಾಧನೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು.ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದಲ್ಲಿ ನಾಲ್ವರು ಗಗನಯಾತ್ರಿಗಳಿಗೆ ತರಬೇತಿ ನೀಡಲಾಗುತ್ತಿದ್ದು, ಭಾರತೀಯ ತಂತ್ರಜ್ಞಾನದಲ್ಲಿಯೇ ಮಾನವ ಸಹಿತ ಬಾಹ್ಯಾಕಾಶ ನೌಕೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಗಗನಯಾನ ಯೋಜನೆಯಡಿ ಮೊದಲಿಗೆ ಮೂರು ಮಾನವ ರಹಿತ ಪರೀಕ್ಷಾ ಉಡಾವಣೆ ನಡೆಸಿ, ನಂತರ ಮಾನವ ಸಹಿತ ಎಚ್1 ಮಿಷನ್ ಕೈಗೊಳ್ಳುವ ಉದ್ದೇಶವಿದೆ. ಯೋಜನೆ ಯಶಸ್ಸಿಗೆ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಜೀವವಿಜ್ಞಾನ, ಗಣಿತ, ಎಂಜಿನಿಯರಿಂಗ್ ವಿಭಾಗಗಳ ಸಂಶೋಧಕರ ಸಹಕಾರ ಅತ್ಯಗತ್ಯ ಎಂದರು.
ಇಸ್ರೋ ಮಾನವ ಬಾಹ್ಯಾಕಾಶ ಯಾನ ಕೇಂದ್ರದ ಉಪ ನಿರ್ದೇಶಕ ರಾಜೇಂದ್ರ ಸಿಂಗ್ ಬ್ಯಾಳಿ ಮಾತನಾಡಿ, ಗ್ರಾಮೀಣ ಪ್ರದೇಶ, ಸಣ್ಣ ಪಟ್ಟಣಗಳ ವಿದ್ಯಾರ್ಥಿಗಳು ತಮ್ಮನ್ನು ನಗರಗಳ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗಿಂತ ಕಡಿಮೆಯೆಂದು ಭಾವಿಸಬಾರದು. ಪ್ರತಿಭೆ, ಪರಿಶ್ರಮ,ಆತ್ಮವಿಶ್ವಾಸವಿದ್ದರೆ ಐಐಟಿ, ಎನ್‌ಐಟಿ ಸೇರಿದಂತೆ ದೇಶದ ಯಾವುದೇ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿಗಳೊಂದಿಗೆ ಸಮಾನವಾಗಿ ಸ್ಪರ್ಧಿಸಬಹುದು ಎಂದರು.
ಉಪಗ್ರಹಗಳ ಚಲನೆ ಮಾರ್ಗ ನಿರ್ಧಾರ, ಸೂರ್ಯ ಮತ್ತು ನಕ್ಷತ್ರ ಸಂವೇದಕಗಳ ಮೂಲಕ ದಿಕ್ಕು ಗುರುತಿಸುವಿಕೆ, ಗಣಿತದ ಮಾದರಿಗಳ ಸಿದ್ಧತೆ ಹಾಗೂ ಕಂಪ್ಯೂಟರ್ ಸಾಫ್ಟ್‌ವೇರ್ ಅಭಿವೃದ್ಧಿಯಲ್ಲಿ ಮೂಲ ವಿಜ್ಞಾನಗಳ ಜ್ಞಾನ ಬಳಕೆಯಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಪದವಿ ಹಂತದ ಮೂಲ ವಿಷಯಗಳಲ್ಲಿ ಉತ್ತಮ ಜ್ಞಾನ ಸಂಪಾದಿಸಬೇಕು. ಭಾರತದ ಗಗನಯಾನ ಯೋಜನೆ ಸುಮಾರು 400 ಕಿಮೀ ಎತ್ತರದ ಕಕ್ಷೆಗೆ ಇಬ್ಬರು ಗಗನಯಾತ್ರಿಗಳನ್ನು ಕಳುಹಿಸಿ, ಸುಮಾರು 2-3 ದಿನ ಬಾಹ್ಯಾಕಾಶದಲ್ಲಿರಿಸಿ ಸುರಕ್ಷಿತವಾಗಿ ಭೂಮಿಗೆ ಮರಳಿ ಕರೆ ತರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಎಂದರು.
2040ಕ್ಕೆ ಚಂದ್ರನ ಮೇಲೆ ಗಗನಯಾತ್ರಿ ಯೋಜನೆ: ರಾಜೇಂದ್ರ ಸಿಂಗ್ ಬ್ಯಾಳಿ
ತಾಲೂಕಿನ ತೋಳಹುಣಸೆ ಶಿವಗಂಗೋತ್ರಿಯ ದಾವಣಗೆರೆ ವಿವಿ ಎಂಬಿಎಂ ಸಭಾಂಗಣದಲ್ಲಿ ಗುರುವಾರ ಭಾರತದ ಮಾನವ ಬಾಹ್ಯಾಕಾಶ ಯಾನ ಸಂಶೋಧನೆಗೆ ಸಹಸ್ರ ಸಾಧ್ಯತೆಗಳು ಕುರಿತ ವಿಶೇಷ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, 2023ರಲ್ಲಿ ನಡೆದ ಟಿವಿ-ಡಿ1 ಪರೀಕ್ಷೆಯೂ ಈ ಪ್ರಕ್ರಿಯೆಯ ಪ್ರಮುಖ ಭಾಗವಾಗಿದೆ ಎಂದರು.
2040ರ ವೇಳೆಗೆ ಭಾರತೀಯ ಗಗನಯಾತ್ರಿಗಳನ್ನು ಚಂದ್ರನ ಮೇಲೆ ಇಳಿಸುವ ಮಹತ್ವಾಕಾಂಕ್ಷೆಯ ಯೋಜನೆಯೂ ಸಹ ಇದೆ. ಮುಂದಿನ ದಿನಗಳಲ್ಲಿ ಮಂಗಳ ಗ್ರಹದ ಅನ್ವೇಷಣೆಗೂ ಭಾರತ ಸಿದ್ಧತೆ ನಡೆಸಲಿದೆ. ಉನ್ನತಿ ಕಾರ್ಯಕ್ರಮದಡಿ ಕಾಲೇಜು ವಿದ್ಯಾರ್ಥಿಗಳು ಇಸ್ರೋ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಸಣ್ಣ ಉಪಗ್ರಹ ನಿರ್ಮಿಸುವ ತರಬೇತಿ ಪಡೆಯಬಹುದು. ವಿದ್ಯಾರ್ಥಿಗಳಿಗೆ ತಮ್ಮ ವಿಷಯಗಳಿಗನುಗುಣವಾಗಿ ಇಂಟರ್ನ್‌ಶಿಪ್, ಸಂಶೋಧನಾ ಯೋಜನೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಇಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.