ಸಂಡೂರು: ತಾಲೂಕಿನ ಚೋರುನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಬುಧವಾರ ಕನ್ವರ್ಜೆನ್ಸ್ ಮೇಳ ಮತ್ತು 4.0 ನವ ಚೇತನ ಹಾಗೂ ಬಾಲ್ಯ ವಿವಾಹ, ಪೋಕ್ಸೋ, ಮಕ್ಕಳ ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಮಾತನಾಡಿ, ಚೋರುನೂರು ಹೋಬಳಿ ಮಟ್ಟದಲ್ಲಿ ವಿವಿಧ ಇಲಾಖೆಗಳನ್ನು ಒಗ್ಗೂಡಿಸಿ, ಲಭ್ಯವಿರುವ ಯೋಜನೆಗಳನ್ನು ಸಾರ್ವಜನಿಕರಿಗೆ, ಮಹಿಳೆಯರಿಗೆ ಒದಗಿಸುವ ಸಲುವಾಗಿ ಕನ್ವರ್ಜೆನ್ಸ್ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ಅರ್ಹ ಸಾರ್ವಜನಿಕರು ತಮ್ಮ ಅರ್ಜಿಗಳನ್ನು ಸಲ್ಲಿಸಿ, ಯೋಜನೆಗಳ ಸದುಪಯೋಗ ಪಡೆದುಕೊಳ್ಳಬಹುದು. ಈ ಭಾಗದಲ್ಲಿ ಬಾಲ್ಯ ವಿವಾಹಗಳು, ಬಾಲ ಕಾರ್ಮಿಕ ವ್ಯವಸ್ಥೆ, ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳು ಮತ್ತು ಮೂಢನಂಬಿಕೆಗಳು ಕಂಡು ಬರುತ್ತಿವೆ. ಇಂತಹ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಲು ಎಲ್ಲ ಇಲಾಖೆಗಳು ಒಗ್ಗೂಡಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕಿದೆ ಎಂದರು.
ಮಾರ್ಗದರ್ಶಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಗಿರೀಶ್ ಕುಲಕರ್ಣಿ ಅವರು ಸಾಮಾಜಿಕ ಭದ್ರತೆ ವಿಮಾ ಯೋಜನೆಗಳಾದ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ, ಎಪಿವೈ ಯೋಜನೆಗಳ ಮಾಹಿತಿ ನೀಡಿ, ಅವುಗಳ ಮಹತ್ವ ತಿಳಿಸಿದರು. ಪ್ರತಿಯೊಬ್ಬರೂ ವಿಮಾ ಪಾಲಿಸಿಗಳನ್ನು ಹೊಂದಬೇಕು ಎಂದು ಹೇಳಿದರು.ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ರಾಜೇಂದ್ರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ರೇಣುಕಾಚಾರ್ಯ ಸ್ವಾಮಿ, ಮಕ್ಕಳ ರಕ್ಷಣಾಧಿಕಾರಿ ಚೆನ್ನಬಸಪ್ಪ, ಚೋರುನೂರು ಸಬ್ ಇನ್‌ಸ್ಪೆಕ್ಟರ್ ಮುದ್ದು ರಂಗಸ್ವಾಮಿ ಅವರು ಮೇಳದ ಉದ್ದೇಶ, ಮಕ್ಕಳ ಹಕ್ಕುಗಳು, ಬಾಲ್ಯ ವಿವಾಹ ಹಾಗೂ ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ, ಸೈಬರ್ ಕ್ರೈಂ, ಸೋಶಿಯಲ್ ಮಿಡಿಯಾ ದುರುಪಯೋಗ ಮುಂತಾದ ವಿಷಯಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಅಂಜಿನಮ್ಮ, ಉಪಾಧ್ಯಕ್ಷರು, ಸರ್ವ ಸದಸ್ಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗರಾಜ, ಪಶು ವೈದ್ಯಾಧಿಕಾರಿ ಡಾ. ವಲಿಬಾಷ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಆರ್. ಅಕ್ಕಿ, ತಾಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್, ತಾಲೂಕು ಯೋಜನಾಧಿಕಾರಿ ವಸಂತಕುಮಾರ್, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹೊನ್ನೂರಪ್ಪ, ಸಂಜೀವಿನಿ ಯೋಜನೆಯ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಸೋಮಶೇಖರ್ ಕಲ್ಡಳ್ಳಿ, ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಅಧ್ಯಕ್ಷೆ ರೇಣುಕಮ್ಮ, ಮುಖ್ಯ ಶಿಕ್ಷಕ ಮಧುಕುಮಾರ್, ನರೇಗಾ ಯೋಜನೆಯ ಐಇಸಿ ಸಂಯೋಜಕ ಯಂಕಪ್ಪ, ವಿವಿಧ ಗ್ರಾಮ ಪಂಚಾಯ್ತಿ ಪಿಡಿಓ, ಕಾರ್ಯದರ್ಶಿಗಳು, ಸಿಬ್ಬಂದಿ, ವಿವಿಧ ಗ್ರಾಮ ಪಂಚಾಯ್ತಿ ಮಟ್ಟದ ಒಕ್ಕೂಟಗಳ ಸದಸ್ಯರು ಉಪಸ್ಥಿತರಿದ್ದರು.