ಪ್ರತಿನಿತ್ಯ ಧಾರವಾಡ ಜಿಲ್ಲೆ ಸೇರಿ ಅಕ್ಕಪಕ್ಕದ ಜಿಲ್ಲೆಯ ಐದು ತಾಲೂಕಿನ 1.30 ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇಲ್ಲಿಯೇ ಸಿದ್ಧಪಡಿಸಲಾಗುತ್ತಿದೆ. ಈ ಹಿಂದೆ ಸಿಬ್ಬಂದಿ ಅಡುಗೆ ಸಿದ್ಧಪಡಿಸುತ್ತಿದ್ದರು. ಇದೀಗ ಸುಧಾರಿತ ಬೃಹತ್‌ ಯಂತ್ರೋಪಕರಣಗಳನ್ನು ಅಳವಡಿಕೆ ಮಾಡಿರುವುದರಿಂದ ಎಲ್ಲವೂ ಯಂತ್ರಗಳ ಮೂಲಕವೇ ನಡೆಯುತ್ತಿದೆ.

ಹುಬ್ಬಳ್ಳಿ:

ನಗರದ ರಾಯಾಪುರದ ಇಸ್ಕಾನ್‌ ಮಂದಿರದ ಹಿಂಭಾಗದಲ್ಲಿರುವ ಅಕ್ಷಯ ಪಾತ್ರೆ ಫೌಂಡೇಶನ್‌ನ ಅಡುಗೆ ಮನೆಯಲ್ಲಿ ಶುಕ್ರವಾರ ಆಧುನಿಕ ತಂತ್ರಜ್ಞಾನ ಹೊಂದಿದ ಚಪಾತಿ, ಅನ್ನ ಹಾಗೂ ಸಾಂಬಾರು ತಯಾರಿಸುವ ಬೃಹತ್‌ ಯಂತ್ರಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಮೈಕ್ರೋಫಿನಿಶ್ ಗ್ರುಪ್​ನ ಸಿಎಸ್​ಆರ್ ನೆರವಿನೊಂದಿಗೆ ಅಡುಗೆ ಮನೆಯಲ್ಲಿ 8 ಡಬಲ್ ಜಾಕೆಟ್ಡ್ ಸ್ಟೀಮ್ ಚಾಲಿತ ಸಾಂಬಾರ ಕೌಲ್ಡನ್​ ಮತ್ತು 10 ಸ್ಟೀಮ್ ಚಾಲಿತ ರೈಸ್ ಕೌಲ್ಡನ್​ಗಳನ್ನು ಅಳವಡಿಸಲಾಗಿದೆ.

ಅಕ್ಷಯ ಪಾತ್ರೆ ಆವರಣದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೈಕ್ರೋಫಿನಿಶ್ ಗ್ರೂಪ್ ಅಧ್ಯಕ್ಷ ತಿಲಕ ವಿಕಂಶಿ, ನಿರ್ದೇಶಕ ಮಹೇಂದ್ರ ವಿಕಂಶಿ ಹಾಗೂ ಧಾರವಾಡದ ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ರಾಜೀವ ಲೋಚನದಾಸ ಭಾಗವಹಿಸಿದ್ದರು.

ಅಡುಗೆ ಮನೆಯಲ್ಲಿ ಅಳವಡಿಸಿರುವ ನೂತನ ಸೌಲಭ್ಯಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಇಸ್ಕಾನ್ ಹುಬ್ಬಳ್ಳಿಯ ಕಾರ್ಯದರ್ಶಿ ರಾಮಗೋಪಾಲ ದಾಸ್, ಪ್ರತಿನಿತ್ಯ ಧಾರವಾಡ ಜಿಲ್ಲೆ ಸೇರಿ ಅಕ್ಕಪಕ್ಕದ ಜಿಲ್ಲೆಯ ಐದು ತಾಲೂಕಿನ 1.30 ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಇಲ್ಲಿಯೇ ಸಿದ್ಧಪಡಿಸಲಾಗುತ್ತಿದೆ. ಈ ಹಿಂದೆ ಸಿಬ್ಬಂದಿ ಅಡುಗೆ ಸಿದ್ಧಪಡಿಸುತ್ತಿದ್ದರು. ಇದೀಗ ಸುಧಾರಿತ ಬೃಹತ್‌ ಯಂತ್ರೋಪಕರಣಗಳನ್ನು ಅಳವಡಿಕೆ ಮಾಡಿರುವುದರಿಂದ ಎಲ್ಲವೂ ಯಂತ್ರಗಳ ಮೂಲಕವೇ ನಡೆಯುತ್ತಿದೆ. ಒಂದು ಕ್ವಿಂಟಲ್‌ ಅಕ್ಕಿ 15 ನಿಮಿಷದಲ್ಲಿ ಅನ್ನ ಆಗುತ್ತದೆ. ಅಂದಾಜು 6 ಸಾವಿರ ಮಕ್ಕಳಿಗೆ 45 ನಿಮಿಷದಲ್ಲಿ ಸಾಂಬಾರು ಸಿದ್ಧವಾಗುತ್ತದೆ. ನೂತನ ಯಂತ್ರದಲ್ಲಿ ಒಂದು ತಾಸಿಗೆ 20 ಸಾವಿರ ರೊಟ್ಟಿ, ಚಪಾತಿ ಸಿದ್ಧಪಡಿಸಬಹುದಾಗಿದೆ ಎಂದರು.

ಶಾಲೆಯಲ್ಲಿನ ಮಕ್ಕಳ ಹಾಜರಾತಿಗೆ ಅನುಗುಣವಾಗಿ ಬಿಸಿಯೂಟವನ್ನು ನಮ್ಮದೇ ವಾಹನದಲ್ಲಿ ಕಳುಹಿಸುತ್ತೇವೆ. ಒಂದು ವಾರಕ್ಕಷ್ಟೇ ಬೇಕಾಗುವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತೇವೆ. ತರಕಾರಿ ಕೆಡದಂತೆ ಇಡಲು ಪ್ರತ್ಯೇಕ ಕೋಲ್ಡ್‌ ಸ್ಟೋರೇಜ್‌ ಕೊಠಡಿ ಇದೆ. ಸೊಪ್ಪು-ತರಕಾರಿಗಳನ್ನು ಸ್ಥಳೀಯ ರೈತರಿಂದಲೇ ಖರೀದಿಸಲು ಒಂದು ವರ್ಷಕ್ಕೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಈ ಅಡುಗೆ ಮನೆಯಲ್ಲಿ ಪ್ರತಿ ದಿನ 140 ಸಿಬ್ಬಂದಿ ಅಡುಗೆ ಸಿದ್ಧತೆಯಲ್ಲಿ ತೊಡಗಿಕೊಂಡರೆ, 200 ಸಿಬ್ಬಂದಿ ಆಹಾರ ಸಂಗ್ರಹ ಕೊಠಡಿ, ಲೆಕ್ಕಪತ್ರ, ಚಾಲಕ, ಸ್ವಚ್ಛತೆಯಲ್ಲಿ ನಿರತರಾಗಿರುತ್ತಾರೆ. ಅಡುಗೆ ಮನೆಯಲ್ಲಿ ಪ್ರತಿದಿನ 200ರಿಂದ 300 ಕೆಜಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಬಯೋಗ್ಯಾಸ್‌ ಮೂಲಕ 40 ಲೀಟರ್‌ ಅಡುಗೆ ಅನಿಲ ಮರುಪೂರಣ ಮಾಡಲಾಗುತ್ತಿದೆ ಎಂದು ವಿವರಿಸಿದರು.