ಕನ್ನಡಪ್ರಭ ವಾರ್ತೆ ಮಳವಳ್ಳಿ
ದೀಪಾವಳಿಯಲ್ಲಿ ಪರಿಸರಕ್ಕೆ ಮಾರಕವಾಗುವ ಪಟಾಕಿಗಳನ್ನು ತಿರಸ್ಕರಿಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಲು ಕೈಜೋಡಿಸಬೇಕು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಸಿಎಸ್‌ಆರ್ ಯೋಜನೆಯಡಿ ತಾಲೂಕಿನ ಸರ್ಕಾರಿ ಶಾಲೆಗಳಿಗೆ ಟಿವಿ ಟ್ಯಾಬ್, ಯುಪಿಎಸ್ ಬ್ಯಾಟರಿಗಳನ್ನು ವಿತರಿಸಿ ಮಾತನಾಡಿ, ಪರಿಸರಕ್ಕೆ ಹಾನಿ ಮಾಡದ ಹಸಿರು ಪಟಾಕಿಗಳನ್ನು ಮಾತ್ರ ಹೊಡೆಯುತ್ತೇವೆಂದು ವಿದ್ಯಾರ್ಥಿಗಳು ಪ್ರತಿಯೊಂದು ಶಾಲೆಗಳಲ್ಲಿ ಪ್ರತಿಜ್ಞೆ ಕೈಗೊಳ್ಳುವಂತೆ ಮಾಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಸರ್ಕಾರಿ ಶಾಲೆಗಳಿಗೆ ಸಿಎಸ್‌ಆರ್ ಅನುದಾನದಲ್ಲಿ ಸುಸರ್ಜಿತ ಕಟ್ಟಡ, ಶೌಚಾಲಯ, ಅಡುಗೆಮನೆ ಸೇರಿದಂತೆ ಆಧುನಿಕ ಶಿಕ್ಷಣಕ್ಕೆ ಸಹಾಯಕವಾಗುವಂತೆ ಡಿಜಿಟಲ್ ಶಿಕ್ಷಣ ನೀಡಲಾಗುತ್ತಿದೆ. ಶಿಕ್ಷಕರು ಪೋಷಕರನ್ನು ಮನವೊಲಿಸಿ ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲಾಗುತ್ತಿದೆ ಎನ್ನುವುದನ್ನು ಮನವರಿಕೆ ಮಾಡಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದರು.ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಜೊತೆಯಲ್ಲಿಯೇ ಉತ್ತಮ ವೈದ್ಯಕೀಯ ಸೇವೆ ಒದಗಿಸಲಾಗಿದೆ. ಕೆಆರ್‌ಎಸ್ ಕೊನೆ ಭಾಗಕ್ಕೆ ಸಮರ್ಪಕ ನೀರು ಪೂರೈಕೆಯಾಗುವಂತೆ ನಾಲಾ ಆಧುನೀಕರಣ ಕೈಗೊಳ್ಳಲಾಗಿದೆ ಎಂದರು.
ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣ, ಪ್ರಜಾಸೌಧ ನಿರ್ಮಾಣಕ್ಕೆ ಒತ್ತು ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳುವ ಮೂಲಕ ಟೀಕೆಗಳಲ್ಲಿ ಅಭಿವೃದ್ಧಿ ಉತ್ತರವನ್ನು ನೀಡಲಾಗುತ್ತಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಇ.ಉಮಾ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಡಿಜಿಟಲ್ ಶಿಕ್ಷಣಕ್ಕೆ ಬೇಕಾದ ಟಿವಿ ಟ್ಯಾಬ್, ಯುಪಿಎಸ್ ಬ್ಯಾಟರಿಗಳನ್ನು ಶಾಸಕರ ಸಹಕಾರದಿಂದ ನೀಡಲಾಗುತ್ತಿದೆ. ಮಲ್ಪಿಮೀಡಿಯಾ ಸೆಂಟರ್ ನಿರ್ಮಾಣದ ಕಾಮಗಾರಿಯೂ ಅಂತಿಮ ಘಟ್ಟದಲ್ಲಿದೆ. ಹಲವು ಕಂಪನಿಗಳ ಅಧಿಕಾರಿಗಳು ತಾಲೂಕಿನ ಸರ್ಕಾರಿ ಶಾಲೆಗಳ ಕಟ್ಟಡವನ್ನು ವೀಕ್ಷಣೆ ಮಾಡಿ ಅವಶ್ಯಕತೆ ಇರುವ ಶಾಲೆಗಳಲ್ಲಿ ಕೊಠಡಿ ನಿರ್ಮಿಸಿಕೊಡುವ ಜೊತೆಗೆ ಶಿಥಿಲಗೊಂಡಿರುವ ಕಟ್ಟಡಗಳನ್ನು ಸರಿಪಡಿಸುವ ಭರವಸೆ ನೀಡಿದ್ದಾರೆಂದು ವಿವರಿಸಿದರು.
ಇದೇ ವೇಳೆ ತಾಲೂಕಿನ ವಿವಿಧ ಶಾಲೆಗಳಿಗೆ ಟಿವಿ ಟ್ಯಾಬ್, ಯುಪಿಎಸ್ ಬ್ಯಾಟರಿಗಳನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಗ್ರಾಸೀಮ್ ಜನಸೇವಾ ಟ್ರಸ್ಟ್ ಮನೋಹರ್, ಶಿಲ್ಪ, ಪ್ರಮುಖರಾದ ಡಾ.ಪ್ರಕಾಶ್, ಸುರೇಶ್, ಪುರಸಭೆ ಸದಸ್ಯ ನೂರುಲ್ಲಾ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ಇದ್ದರು.