ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಸೇರಿದ್ದೇನೆ : ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್

KannadaprabhaNewsNetwork |  
Published : Oct 27, 2024, 02:39 AM ISTUpdated : Oct 27, 2024, 12:04 PM IST
ಪೊಟೋ೨೬ಸಿಪಿಟ೨: ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆಯನ್ನು ಡಿ.ಕೆ.ಸುರೇಶ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಸೋಲು-ಗೆಲುವು ಏನೇ ಆದರೂ ತಾಲೂಕಿನ ಸಂಬಂಧ ಕಡಿದುಕೊಳ್ಳಲ್ಲ. ಯಾಕಂದ್ರೆ ನಾವು ಈ ಜಿಲ್ಲೆಯ ಜನ. ಜಿಲ್ಲೆ ಹಾಗೂ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ, ಸ್ವಾರ್ಥ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.  

 ಚನ್ನಪಟ್ಟಣ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇತ್ತು. ಆದರೆ ನಾನು ಸೋಲು ಕಂಡೆ. ಸೋಲು-ಗೆಲುವು ಏನೇ ಆದರೂ ತಾಲೂಕಿನ ಸಂಬಂಧ ಕಡಿದುಕೊಳ್ಳಲ್ಲ. ಯಾಕಂದ್ರೆ ನಾವು ಈ ಜಿಲ್ಲೆಯ ಜನ. ಜಿಲ್ಲೆ ಹಾಗೂ ತಾಲೂಕಿನ ಅಭಿವೃದ್ಧಿ ದೃಷ್ಟಿಯಿಂದ, ಸ್ವಾರ್ಥ ಬಿಟ್ಟು ಕಾಂಗ್ರೆಸ್‌ಗೆ ಬಂದಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಹಳೇ ಬೇರು ಹೊಸ ಚಿಗುರು ಎಂಬಂತೆ ಕಾಂಗ್ರೆಸ್‌ಗೂ ನಮಗೂ ಸಂಬಂಧ ಇದೆ. ಇಂದು ಸಭೆಗೆ ಬಂದಿರೋ ಬಹುತೇಕ ಕಾರ್ಯಕರ್ತರ ಹೆಸರು ನನಗೆ ಗೊತ್ತಿದೆ. ರಾಜಕೀಯ ಪಕ್ವತೆ ಬಂದಾಗ ಕೆಲವೊಂದು ಬದಲಾವಣೆ ಆಗುತ್ತದೆ ಎಂದು ಹೇಳಿದರು.

ನಮ್ಮ ಕುಮಾರಸ್ವಾಮಿ ಹೇಳ್ತಿದ್ರು ಯೋಗೇಶ್ವರ್ ಹಾಗೂ ಡಿಕೆಶಿ ಇಬ್ಬರು ಮೊದಲೇ ಮಾತನಾಡಿಕೊಂಡಿದ್ದರು ಅಂತ. ಆದರೆ ನಾನು ಕೊನೆ ಕ್ಷಣದವರೆಗೂ ಟಿಕೆಟ್‌ಗಾಗಿ ಕಾದೆ. ಕುಮಾರಸ್ವಾಮಿ "ಒಂದಾಗಿ ಉಂಡರು ಅವರೇಕಾಳು ತಿನ್ನಬೇಡ " ಎನ್ನುವ ಜನ. ಅದಕ್ಕಾಗಿ ನಾನು ಕಾಂಗ್ರೆಸ್ ಸೇರ್ಪಡೆ ಆದೆ. ನಾನು ಹಾಗೂ ಡಿಕೆಶಿ ಒಂದೇ ಜಿಲ್ಲೆಯ ಮಕ್ಕಳು. ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿಗೆ ನಾನೇ ಕಾರಣ. ಕುಮಾರಸ್ವಾಮಿ ಎನ್‌ಡಿಎನಲ್ಲಿ ಲಾಭ ಪಡೆಯುತ್ತಿದ್ದರೆ ಅದಕ್ಕೆ ನಾನು ಕಾರಣ. ಅವರ ಭಾವ ಸಂಸದರಾಗಲು ನಾನು ಕಾರಣ ಎಂದು ಹೇಳಿದರು.

ಕುಮಾರಸ್ವಾಮಿ ಮತ್ತು ನಾನು ಪರಸ್ಪರ ವಿರೋಧ ಮಾಡಿಕೊಂಡು ಬಂದವರು. ಮೈತ್ರಿ ಆದ ಮೂರ್ನಾಲ್ಕು ತಿಂಗಳಲ್ಲೇ ಅವರ ಸಹವಾಸ ಸಾಕು ಅನ್ನಿಸ್ತು. ನನಗೆ ಹಾಗೂ ಡಿಕೆಶಿ ನಡುವೆ ಸುಧೀರ್ಘ ಸ್ನೇಹ ಇದೆ. ರಾಜಕೀಯ ಸಿದ್ದಾಂತ ಏನೇ ಇರಬಹುದು, ಅಭಿವೃದ್ಧಿ ವಿಚಾರದಲ್ಲಿ ಒಂದೇ ಎಂದರು.

ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದರೂ ಅಭಿವೃದ್ಧಿ ಮಾಡಲಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಿಲ್ಲ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ಯಾರನ್ನೂ ರಾಜಕೀಯವಾಗಿ ಬೆಳೆಸಿಲ್ಲ. ಎಮೋಷನಲ್ ಆಗಿ ಜನರತ್ರ ಬರ್ತಾರೆ. ಕಣ್ಣೀರು ಹಾಕ್ತಾರೆ, ಡ್ರಾಮ ಮಾಡ್ತಾರೆ. ದೇವೇಗೌಡರು ಬಂದೂ ಭಾವನಾತ್ಮಕವಾಗಿ ಇಲ್ಲಿ ನಾಟಕ ಮಾಡ್ತಾರೆ.

ಇದಕ್ಕೆ ಜನ ಮರುಳಾಗಬಾರದು ಎಂದು ಮನವಿ ಮಾಡಿದರು.

ನಾವು ಸಾಕಷ್ಟು ಬೆಂದು ಹೋದ ಮೇಲೆ ರಾಜಕೀಯ ಸ್ಥಿರತೆ ಬಂದಿದೆ. ನಾನು ಹಾಗೂ ಸುರೇಶ್ ಕೆಲವು ಸಾರಿ ಸೋಲು ಗೆಲುವಿನ ಬಗ್ಗೆ ಮಾತನಾಡುತ್ತಿದ್ದೆವು. ಬೂತ್ ಗೆದ್ದರೆ ತಾಲೂಕು ಗೆದ್ದಹಾಗೆ. ಇಬ್ಬರೂ ಒಂದಾಗುವ ಮೂಲಕ ತಾಲೂಕಿನ ಜನರ ಮನಸ್ಸು ಗೆಲ್ಲಬೇಕು. ಈ ಚುನಾವಣೆ ಗೆಲ್ಲಲು ಎಲ್ಲರೂ ಒಗ್ಗಟ್ಟಾಗಬೇಕು. ಇದು ನನ್ನ ೧೦ನೇ ಚುನಾವಣೆ. ಬೇರೆ ಬೇರೆ ಚುನಾವಣೆಯಲ್ಲಿ, ಬೇರೆ ಬೇರೆ ಪಕ್ಷದಲ್ಲಿ ನಾನು ಗೆದ್ದಿದ್ದೇನೆ. ಕಾಂಗ್ರೆಸ್ ನಿಂದಲೇ ಎರಡು ಬಾರಿ ಗೆದ್ದಿದ್ದೇನೆ ಎಂದರು.

ಸಭೆಯಲ್ಲಿ ಮದ್ದೂರು ಶಾಸಕ ಉದಯ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಶಾಸಕ ಎಂ.ಸಿಅಶ್ವತ್ಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಮುಖಂಡರಾದ ದುಂತೂರು ವಿಶ್ವನಾಥ್, ಲಿಂಗೇಶ್‌ಕುಮಾರ್ ಇತರರಿದ್ದರು.

ನಿಖಿಲ್ ಆಸ್ತಿ ಡಬ್ಬಲ್ ಆಗಿದ್ದು ಹೇಗೆ: ಬಾಲಕೃಷ್ಣ

ಚನ್ನಪಟ್ಟಣ: ಚನ್ನಪಟ್ಟಣ ಉಪಚುನಾವಣಾ ಯುದ್ಧ ಘೋಷಣೆ ಆಗಿದೆ. ಸೈನಿಕರನ್ನ ತಯಾರು ಮಾಡಬೇಕು. ನೀನು ನಿಂತುಕೋ, ಬಿಜೆಪಿ, ಜೆಡಿಎಸ್‌ನಿಂದ ನಿಂತುಕೋ ಎನ್ನುತ್ತಿದ್ದ ನಾಟಕ ನಿನ್ನೆಯೇ ಮುಗಿದು ಹೋಗಿದೆ. ಬಲವಂತವಾಗಿ ಗಂಡನ್ನ ಕರೆದುಕೊಂಡು ಬಂದು ಚುನಾವಣೆಗೆ ನಿಲ್ಲಿಸಿದ್ದಾರೆ. ನಾನು ಚನ್ನಪಟ್ಟಣ ಬಿಟ್ಟು ಎಲ್ಲೂ ಹೋಗಲ್ಲ ಅಂತ. ನಿಖಿಲ್ ಕುಮಾರಸ್ವಾಮಿ ಕೆಂಗಲ್ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಆಣೆ ಮಾಡಲಿ ಎಂದು ಮಾಗಡಿ ಶಾಸಕ ಬಾಲಕೃಷ್ಣ ಸವಾಲು ಹಾಕಿದರು.ತಾಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಅವರು ಒಂದೊಂದು ಚುನಾವಣೆಗೂ ಬೇರೆ ಕ್ಷೇತ್ರಕ್ಕೆ ಹೋಗುತ್ತಾರೆ. ಬೇರೆಯವರನ್ನ ಕರೆದುಕೊಂಡು ಬಂದು ನಮ್ಮ ಜಿಲ್ಲೆಯಲ್ಲಿ ನಾಟಿ ಹಾಕಿಕೊಂಡಿದ್ದೇವೆ. ಅದನ್ನು ಕೀಳಲು ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ನಿಖಿಲ್ ಅವರು ೧೧೩ ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಎಲ್ಲಿಂದ ಬಂತು ೧೧೩ ಕೋಟಿ ಆಸ್ತಿ. ಬಿಡದಿ ತೋಟದಲ್ಲಿ ಆಲೂಗಡ್ಡೆ ಬೆಳೆದರಾ ಅಥವಾ ಬಿಸಿನೆಸ್ ಮಾಡ್ತಾರಾ. ವರ್ಷಕ್ಕೆ ಹೇಗೆ ಡಬಲ್ ಆಯ್ತು ನಿಖಿಲ್ ಆಸ್ತಿ. ಯಾರ ಹತ್ತಿರಾನೂ ದುಡ್ಡು ಪಡೆಯಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಲಂಚ ಮುಟ್ಟಲ್ಲ ಅಂತ ಚಾಮುಂಡೇಶ್ವರಿ ಮುಂದೆ ಕುಮಾರಸ್ವಾಮಿ ಆಣೆ ಮಾಡಲಿ ಎಂದು ಸವಾಲು ಹಾಕಿದರು.

ಈ ಮೊದಲು ಚನ್ನಪಟ್ಟಣದಲ್ಲಿ ಕೆರೆ ತುಂಬಿಸಿದ್ದು ಯೋಗೇಶ್ವರ್ ಅಂತ ಕುಮಾರಸ್ವಾಮಿ ಹೇಳ್ತಿದ್ರು. ಆದರೆ, ಈಗ ಸದಾನಂದಗೌಡರನ್ನ ಕರೆದುಕೊಂಡು ಬಂದು ಕೆರೆ ತುಂಬಿಸಿದ್ದು ನಾನು ಅಂತ ಹೇಳಿಸಿದ್ದಾರೆ. ಇಲ್ಲಿ ಇದ್ದ ಶಾಸಕರು ಯಾರು ಹಾಗಾದರೆ ಎಂದು ಪ್ರಶ್ನಿಸಿದರು.

ಎನ್‌ಡಿಎ ಅವರೆಲ್ಲ ಸೀಮೆ ಹಸುಗಳು, ನಾವೆಲ್ಲ ನಾಟಿ ಹಸುಗಳು. ನಾವು ಇಲ್ಲಿಯವರೆ, ಆದರೆ ಅವರೆಲ್ಲ ಬೇರೆ ದೇಶದವರು. ಏನೇ ಆದರೂ ನಾವು ಯಾಮಾರೋ ಹಾಗೇ ಇಲ್ಲ. ನಮ್ಮ ಸರ್ಕಾರ ಇನ್ನೂ ೩ ವರ್ಷ ಇದೆ. ನಾವು ಸೈಟ್, ಮನೆ ಕೊಡುತ್ತೇವೆ. ನಿಖಿಲ್ ಗೆಲ್ಲಿಸಿದ್ರೆ ಏನ್ ಕೊಡುತ್ತಾರೆ? ಕುಮಾರಸ್ವಾಮಿ ಒಂದು ದಿನ ಬಂದ್ರೆ ಗೆಲ್ಲಿಸುತ್ತೀರ. ನಾವು ದಿನ ನಿಮ್ಮ ಜತೆ ಸುತ್ತಿದ್ರೆ ನಮ್ಮನ್ನ ಸೋಲಿಸುತ್ತೀರ. ನೀವೆಲ್ಲ ಲೋಕಲ್ ಒಕ್ಕಲಿಗರ ಮಾನ ತೆಗೆಯುತ್ತೀರಾ ಎಂದು ಬೇಸರ ವ್ಯಕ್ತಪಡಿಸಿದರು.

ಯೋಗೇಶ್ವರ್ ಕಣ್ಣು ಬಿಟ್ಟು ಜನರನ್ನ ಎದುರಿಸುತ್ತಾರೆ ಎನ್ನುತ್ತಾರೆ. ಆದರೆ, ಅದನ್ನ ನಾನು ಇಲ್ಲಿವರೆಗೂ ನೋಡಿಲ್ಲ. ಕಣ್ಣು ಬಿಡೋದು ಏನಾದರು ಇದ್ದರೆ ಅದನ್ನು ಅವರು ಬಿಡಬೇಕು. ಯಾರು ನಮ್ಮ ಜೊತೆ ಇದ್ದು ದೂರಾಗಿದ್ದಾರೋ ಅವರ ಮನವೋಲಿಸಿ ಚುನಾವಣೆ ಮಾಡಬೇಕು ಎಂದು ಸಲಹೆ ನೀಡಿದರು.

ಟೂರಿಂಗ್ ಟಾಕೀಸ್‌ಗೆ ಮತಹಾಕಬೇಕಾ?

ಯೋಗೇಶ್ವರ್ ಮಂಡ್ಯ, ಹುಣಸೂರಿಗೆ ಹೋದರು ಅವರನ್ನ ಬಿಟ್ಟುಕೊಳ್ಳಲಿಲ್ಲ. ಬೇರೆಯವರನ್ನ ಕರೆದುಕೊಳ್ಳುವುದು, ಕ್ಷೇತ್ರದಲ್ಲಿ ಗೆಲ್ಲಿಸೋದು ನಾವು ಮಾತ್ರ. ಇದಕ್ಕೆ ಬಲಿಯಾದ ವ್ಯಕ್ತಿ ಅಂದರೆ ಅದು ನಾನು. ಟೂರಿಂಗ್ ಟಾಕೀಸ್ ಗೆ ಮತ ಹಾಕಬೇಕಾ?. ಸ್ವಾಭಿಮಾನಿ ಯೋಗೇಶ್ವರ್‌ಗೆ ಮತ ಹಾಕಬೇಕ ಅಂತ ತೀರ್ಮಾನ ಮಾಡಿ. ಯೋಗೇಶ್ವರ್‌ಗೆ ಇರೋದು ಇದೊಂದೆ ಕ್ಷೇತ್ರ, ನಿಖಿಲ್‌ಗೆ ಬೇರೆ ಕ್ಷೇತ್ರ ಇದೆ. ಕುಮಾರಸ್ವಾಮಿ ಕಣ್ಣೀರಾಕುತ್ತಾರೆ ಅಷ್ಟೇ ಎಂದರು.

ಉದ್ಯೋಗ ಮೇಳ ಏಕೆ ಮಾಡಲಿಲ್ಲ:

ಕುಮಾರಸ್ವಾಮಿ ಮಂಡ್ಯದಲ್ಲಿ ಉದ್ಯೋಗ ಮೇಳ ಮಾಡಿದ್ರು. ರಾಮನಗರದಲ್ಲಿ ಯಾಕೆ ಉದ್ಯೋಗ ಮೇಳ ಮಾಡಲಿಲ್ಲ. ಅವರಿಗೆ ನಮ್ಮ ಜಿಲ್ಲೆ ಮೇಲೆ ಪ್ರೀತಿ ಇಲ್ಲ. ಬರೀ ಚುನಾವಣೆಗಾಗಿ ಮಾತ್ರ ರಾಮನಗರ ಜಿಲ್ಲೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಸ್ವಂತ ಹಾಸನ ಮಾತ್ರ ಎಂದು ಹೇಳಿದರು.

ನನ್ನನ್ನ ಬ್ಯಾಗ್ ಹಿಡಿದುಕೊಂಡು ಮನೆ ಮನೆಗೆ ಹೋಗುತ್ತಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಅವರು ನನ್ನ ಪಿಡ್ಲ್ಯೂಡಿ ಮಿನಿಸ್ಟರ್ ಮಾಡಿದ್ರೂ ನೋಡಿ. ಅದಕ್ಕೆ ನಾನು ಮನೆ ಮನೆಗೆ ಹೋಗುತ್ತೇನೆ ಎಂದು ಕಿಡಿಕಾರಿದರು.

ಸುರೇಶ್ ಮೇಲೆ ಕೋಪದಿಂದ ಯೋಗೇಶ್ವರ್ ಕುಮಾರಸ್ವಾಮಿ ಜತೆ ಹೋಗಿದ್ರು. ಮತ್ತೆ ನಮ್ಮ ಮನೆಗೆ ಕರೆದುಕೊಂಡು ಬಂದಿದ್ದೇವೆ. ಬಿಜೆಪಿ ಜೆಡಿಎಸ್ ಒಟ್ಟಿಗೆ ಇರಲ್ಲ ಅಂತ ನಾನು ಮೊದಲೆ ಹೇಳಿದ್ದೆ. ಅದು ಇಲ್ಲಿ ಫ್ರೂವ್‌ ಆಯ್ತು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''