ಧನುರ್ಮಾಸ ಮುಗಿದ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ: ಎಲ್.ಆರ್.ಶಿವರಾಮೇಗೌಡ

KannadaprabhaNewsNetwork | Published : Dec 30, 2024 1:02 AM

ಸಾರಾಂಶ

ಹೆಚ್ಚು ಕಡಿಮೆ ಈಗಾಗಲೇ ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಆದರೆ, ಪಕ್ಷವನ್ನು ನನ್ನ ಮಗ, ನಾನು ಒಟ್ಟಿಗೆ ಸೇರ್ಪಡೆಗೊಳ್ಳುತ್ತೇವೆ. ಈಗಾಗಲೇ ನಾನು ಕಾಂಗ್ರೆಸ್ ಸೇರಬೇಕಿತ್ತು. ಆದರೆ, ಅಧಿವೇಶನ ಬಂತು, ನಂತರ ಚನ್ನಪಟ್ಟಣ ಉಪ ಚುನಾವಣೆ ಘೋಷಣೆಯಾಯಿತು. ಹಾಸನದ ಸಮಾವೇಶದಲ್ಲಿ ಪಕ್ಷ ಸೇರ್ಪಡೆಗೊಳ್ಳಿ ಎಂದರು. ಈಗ ಧನುರ್ಮಾಸ ಬಂದಿದೆ. ಇದು ಮುಗಿದ ಮೇಲೆ ಕಾಂಗ್ರೆಸ್ ಪಕ್ಷ ಸೇರ್ಪಡೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಧನುರ್ಮಾಸ ಮುಗಿದ ಬಳಿಕ ನಾನು ಮತ್ತು ಪುತ್ರ ಇಬ್ಬರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಘೋಷಿಸಿದರು.

ನಗರದ ಹೊರವಲಯದ ಅಮರಾವತಿ ಹೋಟೆಲ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚು ಕಡಿಮೆ ಈಗಾಗಲೇ ನಾನು ಕಾಂಗ್ರೆಸ್‌ನಲ್ಲಿದ್ದೇನೆ. ಆದರೆ, ಪಕ್ಷವನ್ನು ನನ್ನ ಮಗ, ನಾನು ಒಟ್ಟಿಗೆ ಸೇರ್ಪಡೆಗೊಳ್ಳುತ್ತೇವೆ ಎಂದರು.

ಈಗಾಗಲೇ ನಾನು ಕಾಂಗ್ರೆಸ್ ಸೇರಬೇಕಿತ್ತು. ಆದರೆ, ಅಧಿವೇಶನ ಬಂತು, ನಂತರ ಚನ್ನಪಟ್ಟಣ ಉಪ ಚುನಾವಣೆ ಘೋಷಣೆಯಾಯಿತು. ಹಾಸನದ ಸಮಾವೇಶದಲ್ಲಿ ಪಕ್ಷ ಸೇರ್ಪಡೆಗೊಳ್ಳಿ ಎಂದರು. ಈಗ ಧನುರ್ಮಾಸ ಬಂದಿದೆ. ಇದು ಮುಗಿದ ಮೇಲೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುವುದಾಗಿ ಹೇಳಿದರು.

ಜೆಡಿಎಸ್‌ ಪಕ್ಷದಲ್ಲಿ ನಾನಿಲ್ಲ. ಹಾಗಾಗಿ ನಾನು ಆ ಪಕ್ಷದ ಬಗ್ಗೆ ಮಾತನಾಡಲ್ಲ. ಆದರೆ, ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯ ಚೆನ್ನಾಗಿರಲಿ ಎಂಬುದನ್ನು ಆರೈಸುತ್ತೇನೆ ಎಂದರು.

ಶಾಸಕ ಮುನಿರತ್ನ ಅವರು ಒಳ್ಳೆಯ ಕಲಾವಿದ ಹಾಗೂ ನನ್ನ ಸ್ನೇಹಿತ. ಮೊಟ್ಟೆ ಅವನ ತಲೆಗೆ ಗುರಿಯಿಟ್ಟು ಹೊಡೆದ ವ್ಯಕ್ತಿಯನ್ನು ಕಂಡು ಹಿಡಿದು ಅದನ್ನು ಪರಿಪೂರ್ಣ ತನಿಖೆ ನಡೆಸಬೇಕು. ಆಗ ಸತ್ಯ ತಿಳಿಯುತ್ತದೆ. ಆದರೆ, ಪ್ರಕರಣವನ್ನು ಬಿಜೆಪಿಯವರು ಸಿಬಿಐಗೆ ವಹಿಸಿ ಎನ್ನುತ್ತಾರೆ. ಬಿಜೆಪಿಗರಿಗೆ ಯಾವುದು ಅಸಾಧ್ಯವಲ್ಲವೋ ಅಂತಹ ವಿಚಾರವನ್ನೇ ಈ ರೀತಿಯಾಗಿ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.

ಶಾಸಕ ಮುನಿರತ್ನ ಅವರು ವಿಪಕ್ಷ ನಾಯಕ ಆರ್‌.ಅಶೋಕ್‌ ಅವರಿಗೆ ಏಡ್ಸ್‌ ಇಂಜೆಕ್ಷನ್‌ ಚುಚ್ಚಲು ಹೊರಟಿದ್ದರು ಎಂದರೆ ರಾಜಕೀಯ ವ್ಯವಸ್ಥೆ ಎಲ್ಲಿಗೆ ಬಂದಿದೆ ಎಂಬುದು ತಿಳಿಯುತ್ತದೆ. ಇತ್ತೀಚಿನ ರಾಜಕೀಯ ವ್ಯವಸ್ಥೆಗಳನ್ನು ಗಮನಿಸಿದರೆ ನಾವು ರಾಜಕಾರಣಕ್ಕೆ ಏಕೆ ಬಂದಿದಿವಿ ಎಂಬ ಭಾವನೆ ಮೂಡುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾಗಮಂಗಲದಲ್ಲಿ ಸಣ್ಣ ಗಲಾಟೆ ಆದರೆ ಅದನ್ನು ದೊಡ್ಡದಾಗಿ ಬಿಂಬಿಸಲು ಒಂದೊಂದು ದಿನದಂತೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಆರ್‌.ಅಶೋಕ್‌ ಬರುವುದು ಏಕೆ ಎಂದು ಪ್ರಶ್ನಿಸಿದರು. ಅವರು ಬೆಂಕಿ ನಂದಿಸಲು ಬರಲ್ಲ. ಬೆಂಕಿಯನ್ನು ಇನ್ನಷ್ಟು ಹೊತ್ತಿಸಲು ಬರುತ್ತಾರೆ ಎಂದು ದೂರಿದರು.

Share this article