ಕೇಂದ್ರ ಗೃಹ ಸಚಿವ ಅಮೀತ್ ಶಾ ಕೂಡಲೇ ರಾಜಿನಾಮೆ ನೀಡಲಿ: ಎಂ.ಕೃಷ್ಣಮೂರ್ತಿ ಆಗ್ರಹ

KannadaprabhaNewsNetwork | Published : Dec 30, 2024 1:02 AM

ಸಾರಾಂಶ

ಸಂಸತ್‌ನಲ್ಲಿ ಅಂಬೇಡ್ಕರ್ ಎನ್ನುವ ಬದಲು ದೇವರ ನಾಮ ಜಪಿಸಿದರೆ ಸ್ವರ್ಗಕ್ಕೆ ಹೊಗಬಹುದು ಎಂದು ಹೇಳಿ ಅಂಬೇಡ್ಕರ್ ಅವರಿಗೆ ಅಪಮಾನವಾಗುವ ರೀತಿ ನಡೆದುಕೊಂಡಿರುವ ಅಮೀತ್ ಶಾರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ನಾಚಿಗೆಗೇಡಿನ ಸಂಗತಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅಪಮಾನವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಜನತೆಯಲ್ಲಿ ಕ್ಷಮೆಯಾಚಿಸಲಿ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಆಗ್ರಹಿಸಿದರು.

ನಗರದ ಪತ್ರಿಕಾ ಸಭಾಂಗಣದಲ್ಲಿ ಬಹುಜನ ಸಮಾಜ ಪಕ್ಷ ಜಿಲ್ಲಾ ಸಮಿತಿ ಆಯೋಜಿಸಿದ್ದ ಜಿಲ್ಲಾ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಕಳೆದ 10 ದಿನಗಳಿಂದ ದೇಶಾದ್ಯಂತ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಈ ಚರ್ಚೆ ನಡೆಯುವಂತೆ ಮಾಡಿದ್ದು ಕೇಂದ್ರ ಗೃಹ ಸಚಿವ ಅಮೀತ್ ಶಾ ಎಂದರು.

ಸಂಸತ್‌ನಲ್ಲಿ ಅಂಬೇಡ್ಕರ್ ಎನ್ನುವ ಬದಲು ದೇವರ ನಾಮ ಜಪಿಸಿದರೆ ಸ್ವರ್ಗಕ್ಕೆ ಹೊಗಬಹುದು ಎಂದು ಹೇಳಿ ಅಂಬೇಡ್ಕರ್ ಅವರಿಗೆ ಅಪಮಾನವಾಗುವ ರೀತಿ ನಡೆದುಕೊಂಡಿರುವ ಅಮೀತ್ ಶಾರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕಿತ್ತು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದು ನಾಚಿಗೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ದೇಶದ್ರೋಹವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗರಿಗೆ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಕಿಂಚಿತ್ತು ಗೌರವವಿದ್ದರೆ ತಕ್ಷಣವೇ ಅಮೀತ್ ಶಾ ಅವರನ್ನು ಸಂಪುಟದಿಂದ ವಜಾ ಮಾಡಲಿ, ಸಚಿವರು ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಪಕ್ಷದ ಎಸ್ಸಿ, ಎಸ್ಟಿ ಸಮುದಾಯದ ಅಂಬೇಡ್ಕರ್ ಅನುಯಾಯಿ ಜನಪ್ರತಿನಿಧಿಗಳು ರಾಜೀನಾಮೆ ಬಿಸಾಕಿ ಹೊರಬರಲಿ, ಗೌರವ, ಘನತೆಯುಳ್ಳವರು ಈ ಸಂಗತಿ ಖಂಡಿಸುತ್ತಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ದೇಶದ ಜನತೆ ಮತ್ತು ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.ಮನುವಾದಿಗಳಿಗೆ ಅಧಿಕಾರ ನೀಡಿದರೆ ಎನ್ನೆಲ್ಲಾ ಕಷ್ಟ ನೋವು ಅನುಭವಿಸಬೇಕಾಗುತ್ತದೆ ಎನ್ನುವುದು ಜನರಿಗೆ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಜನತೆ ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೋಳ್ಳುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್, ಡಾ.ಹ.ರಾ.ಮಹೇಶ್, ರಾಜ್ಯ ಕಾರ್ಯದರ್ಶಿ ವೆಂಕಟೇಶ್, ಜಿಲ್ಲಾಧ್ಯಕ್ಷ ಶಿವಶಂಕರ್, ಸಂಯೋಜಕ ಮಹದೇವು, ಜಿಲ್ಲಾ ಉಸ್ತುವಾರಿ ಚಲುವರಾಜು, ಉಪಾಧ್ಯಕ್ಷ ಕುಮಾರ್, ಜಿಲ್ಲಾ ಕಾರ್ಯದರ್ಶಿ ಆನಂದ್, ವೀರಭದ್ರಯ್ಯ, ತಾಲೂಕು ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು.

Share this article