ವಿಪ್ರ ಯುವ ಟ್ರಸ್ಟ್‌ನಿಂದ ವಿಜೃಂಭಣೆಯ ಹನುಮ‌ ಜಯಂತಿ

KannadaprabhaNewsNetwork |  
Published : Dec 30, 2024, 01:02 AM IST
29ಕೆಆರ್ ಎಂಎನ್ 6.ಜೆಪಿಜಿರಾಮನಗರದಲ್ಲಿ ಶ್ರೀರಾಮಚಂದ್ರನ‌ ಪರಮ ಭಕ್ತನಾದ ಹನುಮನ ಜಯಂತಿ ಪ್ರಯುಕ್ತ ವಿಪ್ರ ಬಾಂಧವರು ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ರಾಮಮಂದಿರ ಬಳಿಯಿಂದ ಮೆರವಣಿಗೆ ಆರಂಭವಾಗುತ್ತಿದ್ದಂತೆ ತಂಡೋಪತಂಡವಾಗಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ವಿಪ್ರ ಬಾಂಧವರು ಜಮಾಯಿಸಿದರು. ಮಹಡಿ ಹಾಗೂ ಅಂಗಡಿ ಮಳಿಗೆಗಳ ಮುಂದೆ ನಿಂತು ನಗರದ ನಾಗರಿಕರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ದಾರಿಯುದ್ದಕ್ಕೂ ಭಕ್ತ ಜನರು ಹನುಮ, ಶ್ರೀರಾಮ, ಶ್ರೀನಿವಾಸ ಮೂರ್ತಿಗೆ ಪೂಜೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ವಿಪ್ರ ಯುವ ಸೇವಾ ಟ್ರಸ್ಟ್ ವತಿಯಿಂದ ಶ್ರೀರಾಮಚಂದ್ರನ‌ ಪರಮ ಭಕ್ತ ಹನುಮನ ಜಯಂತಿ ಆಚರಣೆಯು ಭಕ್ತಿ, ಭಾವದ ಜೊತೆಗೆ ಭವ್ಯ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.

ತಾಲೂಕು ವಿಪ್ರ ಯುವ ಟ್ರಸ್ಟ್‌ ನ 19ನೇ ವರ್ಷದ ವಾರ್ಷಿಕೋತ್ಸವ ಹಾಗೂ 12ನೇ ವರ್ಷದ ಶ್ರೀ ಹನುಮ ಜಯಂತಿ ಅಂಗವಾಗಿ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.‌

ನಗರದ ಶ್ರೀರಾಮನ ದೇವಾಲಯದಿಂದ ಪ್ರಾರಂಭವಾದ ಉತ್ಸವಮೂರ್ತಿಯ ಮೆರವಣಿಗೆಯು ಆಂಜನೇಯ ಸ್ವಾಮಿ ದೇಗುಲ, ಅಗ್ರಹಾರ ಬೀದಿ, ಕಾಮಣ್ಣನಗುಡಿ ವೃತ್ತ, ಎಂ.ಜಿ.ರಸ್ತೆ, ರೈಲ್ವೆ ಸ್ಟೇಷನ್ ರಸ್ತೆ, ಕೆಂಗಲ್ ಹನುಮಂತಯ್ಯ ವೃತ್ತ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ರಾಮ ದೇವರು ಶ್ರೀನಿವಾಸ ಹಾಗೂ ಆಂಜನೇಯನ ಉತ್ಸವ ಮೂರ್ತಿ ಹೊತ್ತ ಹಲಗೆಗಳು ಹಾಗೂ ಮೆರವಣಿಗೆಯು ಮತ್ತೆ ಆಂಜನೇಯ ಸ್ವಾಮಿಯ ದೇವಾಲಯದ ಬಳಿ ಬಂದು ಮುಕ್ತಾಯಗೊಂಡಿತು.

ರಾಮಮಂದಿರ ಬಳಿಯಿಂದ ಮೆರವಣಿಗೆ ಆರಂಭವಾಗುತ್ತಿದ್ದಂತೆ ತಂಡೋಪತಂಡವಾಗಿ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ವಿಪ್ರ ಬಾಂಧವರು ಜಮಾಯಿಸಿದರು. ಮಹಡಿ ಹಾಗೂ ಅಂಗಡಿ ಮಳಿಗೆಗಳ ಮುಂದೆ ನಿಂತು ನಗರದ ನಾಗರಿಕರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ದಾರಿಯುದ್ದಕ್ಕೂ ಭಕ್ತ ಜನರು ಹನುಮ, ಶ್ರೀರಾಮ, ಶ್ರೀನಿವಾಸ ಮೂರ್ತಿಗೆ ಪೂಜೆ ಸಲ್ಲಿಸಿದರು.

ಕೇಸರಿ ಶಾಲು ಹಾಕಿಕೊಂಡು ಮೆರವಣಿಗೆಯುದ್ದಕ್ಕೂ ಮಂಗಳವಾದ್ಯದೊಂದಿಗೆ‌ ರಾಮ, ಲಕ್ಷ್ಮಣ, ಜಾನಕಿ, ಜೈ ಬೋಲೊ ಹನುಮಾನ್ ಕಿ . ಜೈ ಭಜರಂಗಿ, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದವು.

ಮೆರವಣಿಗೆ ಬಳಿಕ ಶ್ರೀರಾಮ ಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಜರುಗಿತು. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭರತನಾಟ್ಯ, ಭಕ್ತಿಗೀತೆ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ತಾಲೂಕು ವಿಪ್ರ ಯುವ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಕೇಶವ ವೈದ್ಯ ಮಾತನಾಡಿ, ವಿಪ್ರ ಬಾಂಧವರು ಸಂಘಟಿತರಾಗಬೇಕು. ಸಮಾಜದ ಬಾಂಧವರು ಮುಂದಿನ ದಿನಗಳಲ್ಲೂ ಸಂಘ ನಡೆಸುವ ಕಾರ್ಯಕ್ರಮಗಳಿಗೆ ಪ್ರೋತ್ಸಾಹ, ಸಹಕಾರ ನೀಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕೆಂದು ಹೇಳಿದರು.

ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಆರ್‌.ಜಿ. ಚಂದ್ರಶೇಖರ್ ಮಾತನಾಡಿ, ಹನುಮ ಜಯಂತಿ ಕಾರ್ಯಕ್ರಮಕ್ಕೆ ಬಹುಸಂಖ್ಯೆಯಲ್ಲಿ ಸಮಾಜದ ಬಾಂಧವರು ಸೇರಿರುವುದು ಸಂತಸದ ಸಂಗತಿ. ನಮ್ಮ ಸಮುದಾಯದ ಜನರನ್ನು ಒಟ್ಟುಗೂಡಿಸುವುದೇ ತ್ರಾಸದಾಯಕ ವಿಚಾರ. ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುವ ಯೋಚನೆ ಇದ್ದು, 2025 ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಶುಭ ಹಾರೈಸಿದರು.

ವಿಪ್ರ ಮಹಿಳಾ ಮಂಡಳಿ ಅಧ್ಯಕ್ಷೆ ರತ್ನಪ್ರಸಾದ್ ಮಾತನಾಡಿ, ಪ್ರತಿ ಮಂಗಳವಾರ ಶಂಕರ ಮಠದಲ್ಲಿ ಮಹಿಳಾ ಮಂಡಳಿ ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿಪ್ರ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಕರೆ ನೀಡಿದರು. ಹನುಮ ಜಯಂತಿ ಅಂಗವಾಗಿ ಶ್ರೀ ಆಂಜನೇಯ ಸ್ವಾಮಿಗೆ ಪಂಚಾಮೃತ ಅಭಿಷೇಕ, ಶ್ರೀ ರಾಮ ದೇವರಿಗೆ ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಮಂಗಳಾರತಿ ಹಾಗೂ ಅನ್ನ ಸಂತರ್ಪಣೆ ಸಹ ಏರ್ಪಡಿಸಲಾಗಿತ್ತು.

ವಿಪ್ರ ಟ್ರಸ್ಟನ ಮಾಜಿ ಅಧ್ಯಕ್ಷ ಎಸ್. ಬಾಲಸುಬ್ರಹ್ಮಣ್ಯ ಅಯ್ಯರ್. ಫ್ರಧಾನ ಕಾರ್ಯದರ್ಶಿ ಬಿ. ಆರ್. ಉಮೇಶ್ ಶಾಸ್ತ್ರಿ. ಮಾಜಿ ಪ್ರಧಾನ ಕಾರ್ಯದರ್ಶಿ ಪಿ. ವೈ ರವಿಂದ್ರ ಹೇರ್ಳೆ, ಖಜಾಂಚಿ ಕೆ. ಆರ್. ವಿಜಯಕುಮಾರ್, ಸಮಾಜದ ಮುಖಂಡರಾದ ಎಸ್. ಜಿ. ಪ್ರಸಾದ್. ಎಮ್. ಪಿ. ಗಣೇಶ್ ಭಟ್, ಆರ್ ವಿಶ್ವನಾಥ್, ಸಂದೀಪ್ ಕೆ.ಎನ್., ಶ್ರೀನಿವಾಸ್ ರಾವ್ , ವಿಪ್ರ ಮಹಿಳಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸುಧಾ ದೇಶಪಾಂಡೆ, ಖಜಾಂಚಿ ಪದ್ಮ ಮಂಜುನಾಥ್, ವಿಪ್ರ ಸಮಾಜದ ಹಿರಿಯರಾದ ಸರಸ್ವತಿ ರಾಮಗೋಪಾಲ್, ಶಾಂತಾಬಾಯಿ ಮತ್ತಿತರರು ಉಪಸ್ಥಿತರಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌