ಮಂಗಳೂರು: ಪೊಲೀಸರು ಹಾಗೂ ಪತ್ರಕರ್ತರು ಸದಾ ಒತ್ತಡದ ಮಧ್ಯೆ ಕೆಲಸ ನಿರ್ವಹಿಸುವ ಅನಿವಾರ್ಯತೆ ಇದೆ. ಕ್ರೀಡಾ ಚಟುವಟಿಕೆಗಳಿಗೆ ಸಮಯ ಮೀಸಲಿಡುವುದರಿಂದ ಒತ್ತಡ ನಿವಾರಣೆ ಸಾಧ್ಯ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕದ್ರಿಯ ಕೆ.ಪಿ.ಟಿ. ಮೈದಾನದಲ್ಲಿ ಭಾನುವಾರ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅನ್ನು ಮಂಗಳೂರು, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೆ.ಪೂಜಾರಿ ಇದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ವಂದಿಸಿದರು. ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ನಿರೂಪಿಸಿದರು.
ವಾರ್ತಾಭಾರತಿ-ಬಿ ತಂಡ ವಿನ್ನರ್:ಕ್ರೀಡಾಕೂಟದ ಅಂಗವಾಗಿ ವಿವಿಧ ಮನರಂಜನಾ ಹಾಗೂ ದೈಹಿಕ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಪ್ರಮುಖ ಆಕರ್ಷಣೆಯಾಗಿದ್ದ ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ 10 ತಂಡಗಳು ಪಾಲ್ಗೊಂಡಿದ್ದು, ವಾರ್ತಾಭಾರತಿ- ಬಿ ತಂಡ ಪ್ರಥಮ ಸ್ಥಾನ ಪಡೆಯಿತು. ರನ್ನರ್ ಅಪ್ ಸ್ಥಾನವನ್ನು ವಾರ್ತಾಭಾರತಿ-ಎ ತಂಡ ಪಡೆಯಿತು.
ಇದೇ ಮೊದಲ ಬಾರಿಗೆ ನಡೆದ ಮಹಿಳಾ ಕ್ರಿಕೆಟ್ ಪಂದ್ಯಾಟದಲ್ಲಿ ಹೊಸದಿಗಂತ ತಂಡ ಪ್ರಥಮ ಸ್ಥಾನ ಹಾಗೂ ಸನ್ಮಾರ್ಗ ತಂಡ ರನ್ನರ್ ಅಪ್ ಸ್ಥಾನ ಪಡೆಯಿತು. ಸಮಾರೋಪ ಸಮಾರಂಭದಲ್ಲಿ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಅಧ್ಯಕ್ಷತೆಯಲ್ಲಿ ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ, ಕೆಪಿಟಿ ದೈಹಿಕ ಶಿಕ್ಷಕ ಸೂರಜ್ ಉಪಸ್ಥಿತರಿದ್ದು, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.