ಕಾವೇರಿ ತವರು ಕೊಡಗಿನಲ್ಲಿ ಭಾರಿ ಮಳೆಯ ಖುಷಿ!

KannadaprabhaNewsNetwork |  
Published : Aug 02, 2026, 02:30 AM IST
ಚಿತ್ರ : ಭಾಗಮಂಡಲದಲ್ಲಿ ಪ್ರವಾಹ ಉಂಟಾಗಿರುವುದು.  | Kannada Prabha

ಸಾರಾಂಶ

ಎರಡು ರಾಜ್ಯಗಳ ನಡುವೆ ಉಂಟಾಗಿರುವ ಕಾವೇರಿ ಜಲ ವಿವಾದದ ನಡುವೆಯೇ ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮೂಲಕ ಪ್ರಮುಖ ಜಲಾಶಯಗಳಾದ ಹಾರಂಗಿ, ಚಿಕ್ಲಿಹೊಳೆ ಭರ್ತಿಯಾಗಿದ್ದು, ಆಶಾದಾಯಕ ಭಾವನೆ ಮೂಡಿಸಿದೆ.

ವಿಘ್ನೇಶ್ ಎಂ. ಭೂತನಕಾಡು

ಕನ್ನಡಪ್ರಭ ವಾರ್ತೆ ಮಡಿಕೇರಿ

ಎರಡು ರಾಜ್ಯಗಳ ನಡುವೆ ಉಂಟಾಗಿರುವ ಕಾವೇರಿ ಜಲ ವಿವಾದದ ನಡುವೆಯೇ ಕಾವೇರಿ ತವರು ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಮೂಲಕ ಪ್ರಮುಖ ಜಲಾಶಯಗಳಾದ ಹಾರಂಗಿ, ಚಿಕ್ಲಿಹೊಳೆ ಭರ್ತಿಯಾಗಿದ್ದು, ಆಶಾದಾಯಕ ಭಾವನೆ ಮೂಡಿಸಿದೆ.

ಬ್ರಹ್ಮಗಿರಿ ತಪ್ಪಲಿನ ತಲಕಾವೇರಿ, ಭಾಗಮಂಡಲ ಪರಿಸರದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜೀವ ನದಿ ಕಾವೇರಿ ಮೂಲದಲ್ಲೇ ಉಕ್ಕಿ ಹರಿಯುತ್ತಿದೆ. ಕಾವೇರಿ, ಸುಜ್ಯೋತಿ, ಕನ್ನಿಕೆ ನದಿಗಳು ಸಂಗಮವಾಗುವ ತ್ರಿವೇಣಿ ಸಂಗಮವೂ ಭರ್ತಿಯಾಗಿದ್ದು, ಭಾಗಮಂಡಲ ಈ ವರ್ಷದ ಮಳೆಗೆ ಇದೇ ಮೊದಲ ಬಾರಿಗೆ ಜಲಾವೃತಗೊಂಡಿದ್ದು, ಶ್ರೀ ಭಗಂಡೇಶ್ವರ ದೇವಾಲಯದ ಮೆಟ್ಟಿಲಿನವರೆಗೂ ಕಾವೇರಿ ನೀರು ಆವರಿಸಿಕೊಳ್ಳುವ ಮೂಲಕ ವರುಣ ದೇವ ಕೃಪೆ ತೋರಿಸಿದಂತಾಗಿದೆ.

ಇದೇ ರೀತಿ ಕೊಡಗಿನಲ್ಲಿ ಮಳೆ ಮುಂದುವರಿದಲ್ಲಿ ಹಾರಂಗಿ ಜಲಾಶಯಕ್ಕೆ ಮತ್ತಷ್ಟು ನೀರು ಹರಿದು ಬರುವ ಸಾಧ್ಯತೆ ಇದೆ. ಆ ಮೂಲಕ ಈಗ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಉಂಟಾಗಿರುವ ಜಲ ವಿವಾದಕ್ಕೆ ತೆರೆ ಕಾಣುವ ಲಕ್ಷಣಗಳು ದಟ್ಟವಾಗಿವೆ.

ಜೂನ್ ಹಾಗೂ ಜುಲೈ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಶೇ. 40ರಷ್ಟು ಮಳೆ ಕೊರತೆ ಉಂಟಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ಜಿಲ್ಲೆಯಲ್ಲಿ ಇದೀಗ ತಡವಾಗಿಯಾದರೂ ಉತ್ತಮ ಮಳೆಗಾಲದ ಅನುಭವ ನೀಡಿದೆ. ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಜಲಪಾತಗಳಾದ ಅಬ್ಬಿ, ಮಲ್ಲಳ್ಳಿ, ಚೇಲವಾರ, ಇರ್ಪು ಸೇರಿದಂತೆ ಹಲವು ಜಲಪಾತಗಳು ಮೈದುಂಬಿ ಹರಿಯುತ್ತಿವೆ.

ಪ್ರಮುಖ ಜಲಾಶಯ ಹಾರಂಗಿಯ ಗರಿಷ್ಠ ಮಟ್ಟ 2,859 ಆಗಿದ್ದು, ಪ್ರಸ್ತುತ 2,857 ಅಡಿಗಳಷ್ಟು ನೀರು ತುಂಬಿದೆ. ಶನಿವಾರ ಸಂಜೆ 4 ಗಂಟೆ ವೇಳೆಗೆ ಸುಮಾರು 17 ಸಾವಿರ ಕ್ಯೂಸೆಕ್ ಒಳ ಹರಿವು ಕಂಡುಬಂದಿದೆ. ಇದರಿಂದ ಹಾರಂಗಿಯ ನಾಲ್ಕು ಕ್ರಸ್ಟ್ ಗೇಟ್ ಮೂಲಕ ನದಿಗೆ ಸುಮಾರು 20 ಸಾವಿರ ಕ್ಯೂಸೆಕ್ ನೀರನ್ನು ಹರಿಯ ಬಿಡಲಾಗುತ್ತಿದೆ. ಹಾರಂಗಿ ಜಲಾಶಯದಿಂದ ಬಿಡುಗಡೆ ಮಾಡುವ ನೀರು ನೇರವಾಗಿ ಕಾವೇರಿ ನದಿ ಮೂಲಕ ಹರಿದು ಕೆ.ಆರ್.ಎಸ್. (ಕೃಷ್ಣರಾಜ ಸಾಗರ) ಜಲಾಶಯಕ್ಕೆ ಸೇರುತ್ತದೆ. ಇದರಿಂದ ಕೆಆರ್‌ಎಸ್ ಜಲಾಶಯ ಕೂಡ ಆದಷ್ಟು ಬೇಗ ಭರ್ತಿಯಾಗುವ ಲಕ್ಷಣ ಕಾಣಬರುತ್ತಿದೆ.

ರೈತರಿಗೆ ಸಂತಸ:

ಮಳೆ ಸರಿಯಾಗಿ ಆಗದ ಕಾರಣ ಕೊಡಗು ಸೇರಿದಂತೆ ಹಲವು ಕಡೆಗಳಲ್ಲಿ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದೆ. ಅಲ್ಲದೆ ಜಲಾಶಯದಿಂದ ಕೃಷಿಗೆ ಯಾವುದೇ ಕಾರಣಕ್ಕೆ ನೀರು ಬಳಸದಂತೆ ಸರ್ಕಾರ ಹೇಳಿತ್ತು. ಆದರೆ ಇದೀಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರಲ್ಲಿ ಸಂತಸ ಮೂಡಿದೆ.

ಉತ್ತಮ ಮಳೆಯಾಗುತ್ತಿದ್ದರೂ ನದಿಗೆ ಮಾತ್ರ ನೀರು ಹರಿಸಲಾಗುತ್ತಿದೆ. ಆದರೆ ನಾಲೆಗೆ ನೀರು ಹರಿಸದಿರುವ ಬಗ್ಗೆ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೀರು ಹರಿಸುವಂತೆ ರೈತರಿಂದ ಆಗ್ರಹ ಕೇಳಿಬಂದಿದೆ. ಚಿಕ್ಲಿಹೊಳೆ ಜಲಾಶಯವೂ ಭರ್ತಿ

ಈ ಬಾರಿಯ ಮುಂಗಾರಿಗೆ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯ ನಯನ ಮನೋಹರವಾದ ಚಿಕ್ಲಿಹೊಳೆ ಜಲಾಶಯವೂ ತಡವಾಗಿ ಭರ್ತಿಯಾಗಿದೆ. 0.18 ಟಿಎಂಸಿ ಸಾಮರ್ಥ್ಯವನ್ನು ಹೊಂದಿದೆ. ಇದೀಗ ಭಾರಿ ಮಳೆಯಾಗುತ್ತಿರುವುದರಿಂದ ಚಿಕ್ಲಿ ಹೊಳೆ ತುಂಬಿ ಚಂದ್ರಾಕಾರದಿಂದ ಹರಿಯುತ್ತಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ಜಲಾಶಯ ತುಂಬಿರುವುದರಿಂದ ಆದಷ್ಟು ಬೇಗ ಭತ್ತದ ಕೃಷಿಗೆ ನೀರು ಹರಿಸುವಂತೆ ಈ ಭಾಗದ ರೈತರ ಬೇಡಿಕೆಯಾಗಿದೆ. ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಬಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಒಳ ಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಅಣೆಕಟ್ಟೆಯ ಭದ್ರತಾ ಹಿತದೃಷ್ಟಿಯಿಂದ ಅಣೆಕಟ್ಟೆಯ ಮುಖ್ಯ ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

-ಮಹೇಶ್, ಕಾರ್ಯಪಾಲಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ ಹಾರಂಗಿ ನೀರಾವರಿ ಇಲಾಖೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸ್ತೆಗುರುಳಿದ ಆಲದ ಮರ: ವಾಹನ ಸವಾರರು ಪಾರು
ಜಿಲ್ಲೆಯಲ್ಲಿ ಅತ್ತಾವರ ಯಲ್ಲಪ್ಪ ಪ್ರತಿಮೆ ಸ್ಥಾಪನೆಗೆ ಪ್ರಯತ್ನ: ಅನಂತ್ ಮೈಸೂರು