ಜೆಎಸ್‌ಎಸ್‌: 31ರಂದು ಎಐ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

KannadaprabhaNewsNetwork |  
Published : Oct 29, 2026, 02:00 AM IST
ಅ. 31ರಂದು ಜೆಎಸ್ಸೆಸ್‌ನಲ್ಲಿ ನಡೆಯುವ ವಿಚಾರ ಸಂಕಿರಣ ಕುರಿತು ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಮಾತನಾಡಿದರು.  | Kannada Prabha

ಸಾರಾಂಶ

ಜೆಎಸ್‌ಎಸ್‌ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಅ. 31ರಂದು ವ್ಯವಹಾರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಭಾರತದ ಆರ್ಥಿಕತೆಯ ಪರಿವರ್ತನೆ-ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿದೆ.

ಧಾರವಾಡ:

ಇಲ್ಲಿಯ ಜೆಎಸ್‌ಎಸ್‌ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನಲ್ಲಿ ಅ. 31ರಂದು ವ್ಯವಹಾರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಭಾರತದ ಆರ್ಥಿಕತೆಯ ಪರಿವರ್ತನೆ-ಅವಕಾಶಗಳು, ಸವಾಲುಗಳು ಮತ್ತು ಮುಂದಿನ ದಾರಿ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಿದೆ ಎಂದು ಜೆಎಸ್‌ಎಸ್‌ ಆಡಳಿತಾಧಿಕಾರಿ ಅರಿಹಂತ ಪ್ರಸಾದ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 10ಕ್ಕೆ ಸನ್ನಿಧಿ ಕಲಾಕ್ಷೇತ್ರದಲ್ಲಿ ವಿಚಾರ ಸಂಕಿರಣವನ್ನು ವಿಧಾನ ಪರಿಷತ್‌ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸುವರು. ರಾಣಿಚೆನ್ನಮ್ಮ ವಿವಿ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಅತಿಥಿಗಳಾಗಿ ಭಾಗವಹಿಸುವರು. ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತಪ್ರಸಾದ ಅಧ್ಯಕ್ಷತೆ ವಹಿಸಲಿದ್ದು ಗೋವಾದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಾಜಿ ಆ್ಯಂಡ್‌ ಸಾಯಿನ್ಸ್‌ನ ಪ್ರಾಧ್ಯಾಪಕ ಡಾ. ದೆಬಾಸಿಸ್ ಪಟ್ನಾಯಕ್ ಆಶಯ ನುಡಿಗಳನ್ನಾಡಲಿದ್ದಾರೆ ಎಂದರು.

ಏನಿದೆ ವಿಚಾರ ಸಂಕಿರಣದಲ್ಲಿ:

ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿ, ಸಂಶೋಧನಾ ವಿದ್ಯಾರ್ಥಿ ಹಾಗೂ ಉಪನ್ಯಾಸಕರಿಗೆ ಶೈಕ್ಷಣಿಕವಾಗಿ ಅನುಕೂಲ ಆಗುವ ಹಿನ್ನೆಲೆಯಲ್ಲಿ ವ್ಯವಹಾರ, ಉದ್ಯೋಗ, ಕೃಷಿ, ಬ್ಯಾಂಕಿಂಗ್, ಶಿಕ್ಷಣ ಮತ್ತು ಸಾರ್ವಜನಿಕ ಆಡಳಿತ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಅವಕಾಶಗಳು ಮತ್ತು ಸವಾಲುಗಳನ್ನು ಇಲ್ಲಿ ಚರ್ಚಿಸಲಾಗುವುದು. ತಂತ್ರಜ್ಞಾನದ ಅಳವಡಿಕೆ ಸ್ಪರ್ಧಾತ್ಮಕತೆ, ಉತ್ಪಾದಕತೆ, ಆರ್ಥಿಕ ಒಳಗೊಳ್ಳುವಿಕೆ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವಿನ ಸಂಬಂಧಗಳ ಕುರಿತು ಸಂಶೋಧನಾ ಪ್ರಬಂಧಗಳು ಮಂಡನೆ ಆಗಲಿವೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ, ಉದ್ಯಮ ಘೋಷಣೆ, ಉದ್ಯಮಶೀಲತೆ ಹಾಗೂ ಪೂರೈಕೆ ಸರಪಳಿ, ನಿರ್ವಹಣೆ ಮತ್ತು ವಿದೇಶಿ ನೇರ ಹೂಡಿಕೆ, ಅಂತಾರಾಷ್ಟ್ರೀಯ ವ್ಯಾಪಾರದಂತ ಪ್ರಮುಖ ವಿಷಯಗಳು ಚರ್ಚಾ ವಿಷಯಗಳಾಗಿವೆ ಎಂದು ಅರಿಹಂತ ಮಾಹಿತಿ ನೀಡಿದರು.

ವಿಚಾರ ಸಂಕಿರಣದ ಸಂಚಾಲಕ ಡಾ. ಶೌಕತ ಅಲಿ ಮೇಗಲಮನಿ ಮಾತನಾಡಿ, ಈ ವಿಚಾರ ಸಂಕಿರಣದಲ್ಲಿ 300ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ. 107 ಸಂಶೋಧನಾ ಪ್ರಬಂಧಗಳು ಬಂದಿದ್ದು, ಅವುಗಳಲ್ಲಿ 81 ಪ್ರಬಂಧಗಳು ಮಂಡನೆಯಾಗಲು ಮತ್ತು ಪ್ರಕಟಗೊಳ್ಳಲು ಆಯ್ಕೆಗೊಂಡಿವೆ. ಸಮಾರೋಪ ಅದೇ ದಿನ ಸಂಜೆ 4ಕ್ಕೆ ಜೆಎಸ್‌ಎಸ್‌ ಉತ್ಸವ ಸಭಾಭವನದಲ್ಲಿ ನಡೆಯಲಿದೆ. ಗೋವಾ ವಿವಿ ಮಾಜಿ ಅಧ್ಯಾಪಕ ಪ್ರೊ. ಎಂ.ಡಿ. ಐಹೊಳೆ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜು ಪ್ರಾಚಾರ್ಯ ಪ್ರೊ. ವೆಂಕಟೇಶ ಮುತಾಲಿಕ್‌, ವಾಣಿಜ್ಯ ವಿಭಾಗದ ಮುಖ್ಯಸ್ಥ ಶ್ರೀಕಾಂತ ರಾಗಿಕಲ್ಲಾಪೂರ, ಐಟಿಐ ಕಾಲೇಜು ಪ್ರಾಚಾರ್ಯ ಮಹಾವೀರ ಉಪಾದ್ಯೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್