ಕನ್ನಡಪ್ರಭ ವಾರ್ತೆ ಯಾದಗಿರಿ
ನ್ಯಾ. ಶಿವರಾಜ ಪಾಟೀಲ್ ಅವರು ಬದುಕಿದಂತೆಯೇ, ನುಡಿದಂತೆಯೇ ಈ ಪುಸ್ತಕದಲ್ಲಿ ಬರೆದಿದ್ದಾರೆ. ಜೀವಪರ ಕಾಳಜಿಯಿಂದ ಪ್ರತಿಯೊಬ್ಬರು ಬದುಕಬೇಕೆಂಬ ನಿಟ್ಟಿನಲ್ಲಿ "ಸಂಜೆಗೊಂದು ನುಡಿ ಚಿಂತನ " ಪುಸ್ತಕ ಬರೆದಿದ್ದಾರೆ. ಸಾಧ್ವಿ ಶಿರೋಮಣಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜೀವನ ಕುರಿತು ಬರೆದ ಪುಸ್ತಕವು ಮನನ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೈಕೋರ್ಟ್ ನ್ಯಾ. ವಿ. ಶ್ರೀಶಾನಂದ ಹೇಳಿದರು.ನ್ಯಾ. ಶಿವರಾಜ ಪಾಟೀಲ್ ಪ್ರತಿಷ್ಠಾನವು, ಯಾದಗಿರಿಯ ಸರ್ಕಾರಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ನ್ಯಾ. ಶಿವರಾಜ ಪಾಟೀಲ್ ಅವರು ರಚಿಸಿದ ಸಂಜೆಗೊಂದು ನುಡಿ ಚಿಂತನ 365 ಮತ್ತು ಸಾಧ್ವಿ ಶಿರೋಮಣಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜೀವನದಲ್ಲಿ ಪ್ರತಿಯೊಬ್ಬರು ಸಂಸ್ಕಾರದಿಂದ ಬದುಕಬೇಕು.
ಕಷ್ಟದಲ್ಲಿ ಇದ್ದವರನ್ನು ಮೇಲೆತ್ತುವ ಕೆಲಸ ಮಾಡಬೇಕೆಂದರು. ಪಾಟೀಲರ ಈ ಪುಸ್ತಕಗಳಲ್ಲಿ ಅಮೂಲ್ಯ ಜ್ಞಾನವಿದ್ದು, ಅದನ್ನು ಅಳವಡಿಸಿಕೊಳ್ಳಬೇಕೆಂದರು. ಯಾವುದೇ ಧರ್ಮ ಮತ್ತು ದೇವರನ್ನಾದರೂ ನಂಬಿ, ಆದರೆ ಪೂರ್ತಿಯಾಗಿ ನಂಬಿ ನಡೆಯಿರಿ. ಅಂದಾಗಲೇ ದಡ ಮುಟ್ಟಲು ಸಾಧ್ಯವೆಂದರು.ಸಾನಿಧ್ಯ ವಹಿಸಿದ್ದ ಅಬ್ಬೆತುಮಕೂರಿನ ವಿಶ್ವಾರಾಧ್ಯರ ಮಠದ ಪೀಠಾಧಿಪತಿ ಡಾ.ಗಂಗಾಧರ ಸ್ವಾಮಿಗಳು ಮಾತನಾಡಿ, ನ್ಯಾಯಮೂರ್ತಿ ಶಿವರಾಜ ಪಾಟೀಲ್ ರು ಬದುಕಿನ ಎಲ್ಲ ಮೌಲ್ಯಗಳನ್ನು ಅರಿತುಕೊಂಡವರಾಗಿದ್ದಾರೆ. ಅವರೊಬ್ಬ ನಡೆದಾಡುವ ಜ್ಞಾನ ಕೋಶವಿದ್ದಂತೆ ಎಂದರು. ಅವರು ರಚಿಸಿದ ಈ ಪುಸ್ತಕಗಳು ಅಮೂಲ್ಯ ಚಿಂತನೆಗಳಿಂದ ಕೂಡಿವೆ ಎಂದರು.
ಹೇಮರಡ್ಡಿ ಮಲ್ಲಮ್ಮ ಕೃತಿ ಕುರಿತು ಉಪನ್ಯಾಸಕಿ ಡಾ. ಶೈಲಜಾ ಬಾಗೇವಾಡಿ ಮಾತನಾಡಿದರು. ಪ್ರತಿಷ್ಠಾನದ ಸಂಯೋಜಕ ಡಾ.ಕಲ್ಯಾಣರಾವ ಪಾಟೀಲ್ ಮಾತನಾಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಪ್ರೊ. ಚನ್ನಾರಡ್ಡಿ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿಶ್ರಾಂತ ನ್ಯಾಯಾಧೀಶ ಎಸ್.ಎಂ.ರಡ್ಡಿ ಅಧ್ಯಕ್ಷತೆ ವಹಿಸಿದ್ದರು.ಗೌರವ ಅತಿಥಿಗಳಾಗಿ ಪ್ರಾಚಾರ್ಯರಾದ ಡಾ.ಸುಭಾಷಚಂದ್ರ ಕೌಲಗಿ, ವಿಶ್ರಾಂತ ನ್ಯಾಯಾಧೀಶರಾದ ಎನ್. ಶರಣಪ್ಪ , ಹಿರಿಯ ವಕೀಲ ಎಸ್.ಬಿ.ಪಾಟೀಲ್ ಇದ್ದರು. ಡಾ.ಸಿದ್ದರಾಜ್ ರಡ್ಡಿ ನಿರೂಪಿಸಿದರು. ಸರ್ವಜ್ಞ ಕಾಲೇಜಿನ ಮಕ್ಕಳಿಂದ ಪ್ರಾರ್ಥನೆ ನಡೆಯಿತು.