ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಸದಾಶಿವನಗರದ ರಿಂಗ್ ರಸ್ತೆಯಲ್ಲಿರುವ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಜ್ಯೋತಿರ್ಲಿಂಗಗಳ ರಥಯಾತ್ರೆಗೆ ಸ್ಫೂರ್ತಿ ಡೆವಲಪರ್ಸ್ ಮಾಲೀಕ ಹಾಗೂ ಬಿಜೆಪಿ ಮುಖಂಡರಾದ ಎಸ್.ಪಿ. ಚಿದಾನಂದ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಶಿವರಾತ್ರಿ ಪವಿತ್ರ ಹಬ್ಬ. ನಮ್ಮ ಮನೆಯಲ್ಲಿರುವ ತಂದೆ-ತಾಯಂದಿರನ್ನು ಶಿವ ಪಾರ್ವತಿಯಂತೆ ಕಾಣಬೇಕು. ಹೆತ್ತವರನ್ನು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವುದು ಕಡಿಮೆಯಾಗಬೇಕು ಎಂದು ಹೇಳಿದರು.ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಶಿವರಾತ್ರಿ ಹಬ್ಬದ ಪ್ರಯುಕ್ತ ಜ್ಯೋತಿರ್ಲಿಂಗಗಳ ರಥಯಾತ್ರೆ ನಡೆಸುತ್ತಿರುವುದು ತುಂಬಾ ಒಳ್ಳೆಯ ಕೆಲಸ. ಇಂತಹ ಸತ್ಕಾರ್ಯಕ್ಕೆ ನಗರದ ಜನತೆ ಕೈ ಜೋಡಿಸಬೇಕು ಎಂದರು.
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಬಿ.ಕೆ. ಸುಜಾತ ಮಾತನಾಡಿ, ನಗರದ ರಿಂಗ್ ರಸ್ತೆಯ ನಮ್ಮ ಆಶ್ರಮದ ವತಿಯಿಂದ ಶಿವರಾತ್ರಿ ಅಂಗವಾಗಿ ಪ್ರತಿ ವರ್ಷವೂ 21 ಜ್ಯೋತಿರ್ಲಿಂಗಗಳ ರಥಯಾತ್ರೆ ನಡೆಸುತ್ತೇವೆ. ಅದರಂತೆ ಈ ಬಾರಿಯೂ ನಡೆಸಲಾಗಿದೆ. ಸಂಜೆ ಭದ್ರಮ್ಮ ಸರ್ಕಲ್ ಬಳಿ ಇರುವ ಶಂಕರಮಠದ ಆವರಣದಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುವ ಯುವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಸಂಜೆ 6 ಗಂಟೆಗೆ ಶಾಲಾ ಶಿಕ್ಷಕರಿಗೆ ಈಶ್ವರೀಯ ಗೌರವಾರ್ಪಣೆ ಕಾರ್ಯಕ್ರಮ ಜರುಗಲಿದೆ. ನಂತರ ಸಹಸ್ರ ಲಿಂಗ ದರ್ಶನ, ಪ್ರದಕ್ಷಿಣೆ ಲಿಂಗ, ಕಮಲೋದ್ಭವ ಲಿಂಗ ದರ್ಶನ, ಚೈತನ್ಯ ದೇವಿಯರ ಸಾಕ್ಷಾತ್ಕಾರ ದರ್ಶನ ಇರುತ್ತದೆ. ಇದೇ ವೇಳೆ ಸಾರ್ವಜನಿಕರಿಗೆ ಶಿವರಾತ್ರಿಯ ಸತ್ಯ ರಹಸ್ಯವನ್ನು ತಿಳಿಸಲಾಗುವುದು ಎಂದರು.
ಶಿವರಾತ್ರಿಯಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಶಿವಲಿಂಗಗಳ ದರ್ಶನ ಹಾಗೂ ಆಧ್ಯಾತ್ಮಕ ಚಿತ್ರ ಪ್ರದರ್ಶನ ನಡೆಯಲಿದೆ. ಸಂಜೆ ೬ ಗಂಟೆಗೆ ೧೦೦ ಮಂದಿ ಪೊಲೀಸ್ ಸಿಬ್ಬಂದಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಸಲಾಗುವುದು ಎಂದರು.ನಂತರ ರಾತ್ರಿ 8 ರಿಂದ 9 ಗಂಟೆಯವರೆಗೆ ಶಿವರಾತ್ರಿ ಹಬ್ಬದ ಪ್ರವಚನ ನಡೆಯಲಿದೆ ಎಂದು ಅವರು ಹೇಳಿದರು. ಶಿವರಾತ್ರಿ ದಿನ ಉಪವಾಸ ಮಾಡುವುದೆಂದರೆ ಬೆಳಗ್ಗೆಯಿಂದ ರಾತ್ರಿವರೆಗೆ ಊಟ ಬಿಟ್ಟಿರುವುದಲ್ಲ. ಉಪ ಅಂದರೆ ಹತ್ತಿರ, ವಾಸ ಅಂದರೆ ನಿವಾಸ. ಶಿವರಾತ್ರಿ ದಿನ ಪರಮಾತ್ಮನ ಹತ್ತಿರ ವಾಸ ಮಾಡಬೇಕಾಗಿದೆ. ಆಗ ನೈಜ ಉಪವಾಸ ಮಾಡಿದಂತೆ. ಜಾಗರಣೆ ಎಂದರೆ ರಾತ್ರಿಯೆಲ್ಲಾ ನಿದ್ದೆ ಬಿಟ್ಟಿರುವುದಲ್ಲ, ಸತ್ಯ, ಆಧ್ಯಾತ್ಮಿಕತೆಯ ರಹಸ್ಯ. ನಮ್ಮ ಹತ್ತಿರ ಯಾವುದೇ ಕೆಟ್ಟ ಗುಣಗಳು ಸುಳಿಯದಂತೆ ಜಾಗರಣೆಯಿಂದ ಇರುವುದೇ ಶಿವರಾತ್ರಿ ಜಾಗರಣೆ ಎಂದು ತಿಳಿಸಿದರು.
ಸದಾ ಶಿವನಗರದಿಂದ ಪ್ರಾರಂಭವಾದ ಶಿವಲಿಂಗಗಳ ರಥಯಾತ್ರೆಯು ಮರಳೂರು ಸರ್ಕಲ್, ಎಸ್‌ಎಸ್‌ಐ, ಎಸ್‌ಬಿಐ ಬ್ಯಾಂಕ್ ಮುಂಭಾಗ ರಸ್ತೆ ಮೂಲಕ ಕಾಲ್ಟ್ಯಾಕ್ಸ್, ಗುಬ್ಬಿ ವೀರಣ್ಣ ಕಲಾಕ್ಷೇತ್ರ, ಚರ್ಚ್ ಸರ್ಕಲ್, ಬಸ್ ನಿಲ್ದಾಣದ ರಸ್ತೆ, ಮುನ್ಸಿಪಲ್ ಸರ್ಕಲ್, ಎಂ.ಜಿ. ರಸ್ತೆ, ಗುಂಚಿ ಸರ್ಕಲ್, ಟೌನ್‌ಹಾಲ್ ಸರ್ಕಲ್, ಕೆ.ಆರ್. ಬಡಾವಣೆ ಸರ್ಕಲ್, ಸೋಮೇಶ್ವರ ರಸ್ತೆ, ಗಂಗೋತ್ರಿ ರಸ್ತೆ, ಬಿ. ಎಚ್. ರಸ್ತೆ, ಮಿರ್ಜಿ ಪೆಟ್ರೋಲ್ ಬಂಕ್ ತಲುಪಿ ಅಲ್ಲಿಂದ ಮತ್ತೆ ವಾಪಸ್ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸರ್ಕಲ್ ಮೂಲಕ ಸಾಗಿ ಎನ್‌ಇಪಿಎಸ್ ಪೊಲೀಸ್ ಠಾಣೆ ಬಳಿ ಶಿವಲಿಂಗಗಳ ರಥಯಾತ್ರೆಯೂ ಸಂಪನ್ನಗೊಂಡಿತು.