ರೇಷ್ಮೆ, ತರಕಾರಿ, ಹೈನುಗಾರಿಕೆಯಿಂದ ವಾರ್ಷಿಕ 4-5 ಲಕ್ಷ ರು. ನಿವ್ವಳ ಲಾಭ

KannadaprabhaNewsNetwork | Published : Apr 22, 2025 1:46 AM

ಸಾರಾಂಶ

ಅವರಿಗೆ ನಾಲ್ಕೂವರೆ ಎಕರೆ ಜಮೀನಿದೆ. ಎರಡು ಮುಕ್ಕಾಲು ಎಕರೆಗೆ ಕೊಳವೆ ಬಾವಿಯಿಂದ ನೀರಾವರಿ ಸೌಲಭ್ಯವಿದೆ

ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ಮೂರ್ನಾಲ್ಕು ವರ್ಷಗಳ ಹಿಂದೆ ಇಡೀ ವಿಶ್ವವನ್ನು ಕಾಡಿದ ಕೊರೋನಾ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪಾಠ ಕಲಿಸಿದೆ. ಕೆ.ಆರ್‌. ನಗರ ತಾಲೂಕು ಸಿದ್ದನಕೊಪ್ಪಲಿನ ಎಸ್.ಎಂ. ಮದನ್‌ ಕುಮಾರ್‌ ಬೆಂಗಳೂರಿನ ವಂಡರ್‌ ಲಾ ದಲ್ಲಿ ಉದ್ಯಾನ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಕೊರೋನಾ ಬಂದಿದ್ದರಿಂದ ಎಲ್ಲಾ ಚಟುವಟಿಕೆಗಳು ಬಂದ್‌ ಆಗಿ, ಊರಿಗೆ ಮರಳಿ, ತಾತ- ಮುತ್ತಾತ್ತರ ಕಾಲದಿಂದಲೂ ಮಾಡುತ್ತಿರುವ ಕೃಷಿಯಲ್ಲಿ ತೊಡಗಿಸಿಕೊಂಡರು. ಅದೀಗ ಅವರ ಕೈ ಹಿಡಿದಿದೆ. ವಾರ್ಷಿಕ ನಾಲ್ಕೈದು ಲಕ್ಷ ರು.ಗಳವರೆಗೆ ನಿವ್ವಳ ಆದಾಯ ತರುತ್ತಿದೆ.

ಅವರಿಗೆ ನಾಲ್ಕೂವರೆ ಎಕರೆ ಜಮೀನಿದೆ. ಎರಡು ಮುಕ್ಕಾಲು ಎಕರೆಗೆ ಕೊಳವೆ ಬಾವಿಯಿಂದ ನೀರಾವರಿ ಸೌಲಭ್ಯವಿದೆ. ಇದಲ್ಲದೇ ಚಾಮರಾಜ ಬಲದಂಡೆ ನಾಲೆಯಿಂದ ನೀರಾವರಿ ಸೌಲಭ್ಯವೂ ಇದೆ. ರೇಷ್ಮೆ, ಮೆಣಸಿನಕಾಯಿ, ಟೊಮ್ಯಾಟೋ, ಬೀನ್ಸ್‌ ಮುಖ್ಯ ಬೆಳೆಗಳು. ರೇಷ್ಮೆಗೂಡನ್ನು ರಾಮನಗರ ಹಾಗೂ ಕೊಳ್ಳೇಗಾಲದ ಮುಡಿಗುಡಂ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ತರಕಾರಿಯನ್ನು ಹೆಬ್ಬಾಳು ಮಾರುಕಟ್ಟೆಗೆ ಬಂದು ಖರೀದಿಸುತ್ತಾರೆ. ತರಕಾರಿ ಮಾರಾಟದಿಂದಲೇ 2-3 ಲಕ್ಷ ರು. ಆದಾಯ ಇದೆ. ರೇಷ್ಮೆ ವಾರ್ಷಿಕ ಮೂರು ಬೆಳೆ ಬರುತ್ತದೆ.

ಮದನ್‌ ಕುಮಾರ್‌ ಅವರು ಹೈನುಗಾರಿಕೆಯನ್ನು ಉಪಕಸುಬಾಗಿ ಕೈಗೊಂಡಿದ್ದಾರೆ. ಮೂರು ಹಸುಗಳಿದ್ದು, ನಿತ್ಯ 30 ಲೀಟರ್‌ ಹಾಲನ್ನು ಡೈರಿಗೆ ಪೂರೈಸುತ್ತಾರೆ. ಇದರಿಂದಲೇ ಮಾಸಿಕ ಅಂದಾಜು 30 ಸಾವಿರ ರು. ಆದಾಯ ಬರುತ್ತದೆ.

ಕೃಷಿ, ತೋಟಗಾರಿಕೆ ಇಲಾಖೆಯಿಂದ ಕೆಲವೊಂದು ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಪ್ರಮುಖವಾಗಿ ಹನಿ ನೀರಾವರಿ ಸೌಲಭ್ಯಕ್ಕೆ ಸಹಾಯಧನ ಪಡೆದಿದ್ದಾರೆ.

ಜಮೀನಿನಲ್ಲಿ ತೇಗ, ಸಿಲ್ವರ್‌, ಬೇವು ಸೇರಿ 100 ಮರಗಳಿವೆ. ಮುಂಚೆ ಬಾಳೆಯನ್ನು ಕೂಡ ಬೆಳೆದಿದ್ದರು. ಮೀನುಗಾರಿಕೆ ಮಾಡಬೇಕು ಎಂದುಕೊಂಡರೂ ಯಾಕೇ ಸರಿ ಬರುತ್ತಿಲ್ಲ. ನಾಗನಹಳ್ಳಿ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಸಿ. ರಾಮಚಂದ್ರ ಅವರಿಂದ ಸಾಕಷ್ಟು ಮಾಹಿತಿಯನ್ನು ಪಡೆಯುತ್ತಿರುತ್ತಾರೆ.

ಇವರಿಗೆ 2023 ರಲ್ಲಿ ಬೆಂಗಳೂರಿನ ಜಿಕೆವಿಕೆಯಲ್ಲಿ ಕೆ.ಆರ್‌. ನಗರ ತಾಲೂಕು ಮಟ್ಟದ ಅತ್ಯುತ್ತವ ಯುವ ರೈತ ಪ್ರಶಸ್ತಿ ದೊರೆತಿದೆ. ಸಂಪರ್ಕ ವಿಳಾಸಃ

ಎಸ್‌.ಎಂ. ಮದನ್‌ ಕುಮಾರ್‌ ಬಿನ್‌ ಮುರುಳಿ

ಸಿದ್ದನಕೊಪ್ಪಲು

ಹೆಬ್ಬಾಳು ಹೋಬಳಿ,

ಕೆ.ಆರ್‌.ನಗರ ತಾಲೂಕು.

ಮೈಸೂರು ಜಿಲ್ಲೆ

ಮೊ. 81520 90149

--

ಕೋಟ್‌

ವ್ಯವಸಾಯ ಕಷ್ಟ ಏನಿಲ್ಲ. ನಾವು ಯಾವ ರೀತಿ ಮಾಡ್ತೀವಿ ಅದರೆ ಮೇಲೆ ನಿಂತಿರುತ್ತದೆ. ಒಂದು ಬೆಳೇಲಿ ಬಂದ್ರೆ ಮತ್ತೊಂದು ಬೇಳೇಲಿ ಹೋಯ್ತದೆ. ಇದಕ್ಕೆಲ್ಲಾ ತಲೆ ಕಡಿಸಿಕೊಳ್ಳದೇ ಮುಂದೆ ಹೋಯ್ತಾ ಇರಬೇಕು.

- ಎಸ್‌.ಎಂ. ಮದನ್‌ ಕುಮಾರ್‌, ಸಿದ್ದನಕೊಪ್ಪಲು

Share this article