ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಪೊಲೀಸ್ ಠಾಣೆ ಬಳಿಯ ಖಾಸಗಿ ಕಟ್ಟಡದ ಜಾಗದಲ್ಲಿ ಗಣವೇಷಧಾರಿಗಳಾಗಿ ಸೇರಿದ ಆರ್.ಎಸ್.ಎಸ್ ಕಾರ್ಯಕರ್ತರು ಸದಾ ವತ್ಸಲೇ ಮಾತೃಭೂಮಿ ಎನ್ನುವ ಆರ್.ಎಸ್.ಎಸ್ ಗೀತೆ ಹಾಡಿ ಧ್ವಜವಂದನೆ ಸಲ್ಲಿಸುವ ಮೂಲಕ ಪಥಸಂಚಲನ ಆರಂಭಿಸಿದರು.
ಧ್ವಜವಂದನೆ ಗೀತೆಯಲ್ಲಿ ಭಾಗವಹಿಸಿ ಭಾರತ ಮಾತೆಗೆ ಪ್ರಜೆ ಸಲ್ಲಿಸುವ ಮೂಲಕ ಶಾಸಕ ಎಚ್.ಟಿ.ಮಂಜು ಪಥ ಸಂಚಲನಕ್ಕೆ ತಮ್ಮ ನೈತಿಕ ಬೆಂಬಲ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಶಾಸಕರು, ಆರ್.ಎಸ್.ಎಸ್ ಯಾವುದೇ ರಾಜಕೀಯ ಸಂಘಟನೆಯಲ್ಲ. ಅದೊಂದು ಸಾಂಸ್ಕೃತಿಕ ಸಂಘಟನೆಯಾಗಿದೆ ಎಂದರು.ದೇಶದ ಸನಾತನ ಸಂಸ್ಕೃತಿ ಮತ್ತು ಧರ್ಮದ ರಕ್ಷಣೆಗಾಗಿ ಅದು ಕಳೆದ ಒಂದು ಶತಮಾನದಿಂದ ನಿರಂತರವಾಗಿ ಕೆಲಸ ಮಾಡುತ್ತಾ ದೇಶದ ಯುವಕರಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುತ್ತಿದೆ. ಪಥ ಸಂಚಲನದ ಮೂಲಕ ಆರ್.ಎಸ್.ಎಸ್ ದೇಶದ ಜನರಲ್ಲಿ ರಾಷ್ಟ್ರೀಯತೆ ಮತ್ತು ಭಾವೈಕ್ಯತೆ ಸಂದೇಶ ಸಾರುತ್ತಿದೆ ಎಂದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಗಣವೇಷಧಾರಿಯಾಗಿ ಕೈಯಲ್ಲಿ ದಂಡ ಹಿಡಿದು ಪಥಸಂಚಲನದಲ್ಲಿ ಭಾಗವಹಿಸುವ ಮೂಲಕ ಜನರ ಗಮನ ಸೆಳೆದರು. ಪಥ ಸಂಚಲನದ ವೇಳೆ ಮಾರ್ಗದಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳು ಯಾವುದೇ ರೀತಿಯ ಘೋಷಣೆ ಕೂಗಿದರೂ ಕಾರ್ಯಕರ್ತರು ಅದಕ್ಕೆ ಕಿವಿಗೊಡದೆ ಪಥ ಸಂಚಲನದ ಶಿಸ್ತು ಕಾಪಾಡುವಂತೆ ಆರಂಭದಲ್ಲಿಯೇ ಸಂಘಟಕರು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು. ಪಥ ಸಂಚಲನದ ವೇಳೆ ಅನುಸರಿಸಬೇಕಾದ ಶಿಸ್ತಿನ ನಿಯಮಗಳನ್ನು ಬೋಧಿಸಿದರು.
ಪಥ ಸಂಚಲನ ಆರಂಭಗೊಂಡ ಜಾಗದಲ್ಲಿ ಮತ್ತೆ ಭಗವಾಧ್ವಜಕ್ಕೆ ವಂದನೆ ಸಲ್ಲಿಸುವ ಮೂಲಕ ಪಥ ಸಂಚಲನ ಅಂತ್ಯಗೊಂಡಿತು. ಮಾರ್ಗದುದ್ದಕ್ಕೂ ಸಾರ್ವಜನಿಕರು ರಸ್ತೆ ಬದಿಯಲ್ಲಿ ನಿಂತು ಹೂಮಳೆ ಸುರಿಸುವ ಮೂಲಕ ಪಥ ಸಂಚಲನಕ್ಕೆ ಶುಭಕೋರಿದರು. ಮಳೆ ಬೀಳಲಾರಂಭಿಸಿದರೂ ವಿಚಲಿತರಾಗದೆ ಆರ್.ಎಸ್.ಎಸ್ ಕಾರ್ಯಕರ್ತರು ಪಥ ಸಂಚಲನ ನಡೆಸಿದರು. ಯಾವುದೇ ಅಹಿತರ ಘಟನೆಗಳಿಗೆ ಆಸ್ಪದವಾಗದಂತೆ ಪಟ್ಟಣ ಪೊಲೀಸರು ಮುನ್ನೆಚ್ಚರಿಕಾ ಕ್ರಮಮಗಳನ್ನು ಕೈಗೊಂಡಿದ್ದರು.
ಭವ್ಯ ಬಲಿಷ್ಠ ಭಾರತದ ಸ್ವಯಂ ಸೇವಕರು ಎನ್ನುವ ಬ್ಯಾನರ್ ಹಿಡಿದು ಗಣವೇಷಧಾರಿಗಳಾಗಿ ಪಥಸಂಚಲನಕ್ಕೆ ಪುಟಾಣಿ ಮಕ್ಕಳು ಭಾಗವಹಿಸಿ ಗಮನ ಸೆಳೆದರು.