ಕೆ.ಎಸ್. ಭಗವಾನ್ ಕ್ಷಮೆ ಯಾಚಿಸಲಿ: ವಿ.ಎಸ್. ಉಗ್ರಪ್ಪ

KannadaprabhaNewsNetwork |  
Published : Jun 14, 2026, 02:30 AM IST
ಸುದ್ದಿಗೋಷ್ಠಿಯಲ್ಲಿ ವಿ.ಎಸ್. ಉಗ್ರಪ್ಪ ಮಾತನಾಡಿದರು. | Kannada Prabha

ಸಾರಾಂಶ

24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ಹಾಗೂ 390ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರುವ ರಾಮಾಯಣವು ರಾಜಧರ್ಮ, ಆಡಳಿತ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ತತ್ವಗಳ ಮಹಾಗ್ರಂಥವಾಗಿದೆ. ಅದರ ಬಗ್ಗೆ ಲಘುವಾಗಿ ಮಾತನಾಡಿರುವ ಭಗವಾನ್ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ವಿ.ಎಸ್. ಉಗ್ರಪ್ಪ ಆಗ್ರಹಿಸಿದರು.

ಗದಗ: ರಾಮಾಯಣ ಕುರಿತು ಚಿಂತಕ ಪ್ರೊ. ಕೆ.ಎಸ್. ಭಗವಾನ್ ನೀಡಿರುವ ಹೇಳಿಕೆ ಆಕ್ಷೇಪಾರ್ಹವಾಗಿದೆ. ಶಂಭೂಕನ ಪ್ರಸಂಗವೊಂದನ್ನೇ ಆಧರಿಸಿ ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣವನ್ನು ಟೀಕಿಸುವುದು ಸರಿಯಲ್ಲ ಎಂದು ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವೇದಿಕೆ ಅಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ಹಾಗೂ 390ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರುವ ರಾಮಾಯಣವು ರಾಜಧರ್ಮ, ಆಡಳಿತ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ತತ್ವಗಳ ಮಹಾಗ್ರಂಥವಾಗಿದೆ. ಅದರ ಬಗ್ಗೆ ಲಘುವಾಗಿ ಮಾತನಾಡಿರುವ ಭಗವಾನ್ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದರು.

ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಅಧಿನಿಯಮ 2022ಅನ್ನು ಸಂವಿಧಾನದ 9ನೇ ಅನುಸೂಚಿಗೆ ಸೇರಿಸಿ, ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿಯಲ್ಲಿ 101 ಹಾಗೂ ಪರಿಶಿಷ್ಟ ಪಂಗಡದಲ್ಲಿ 51 ಉಪಜಾತಿಗಳಿದ್ದು, ಹಿಂದುಳಿದ ವರ್ಗಗಳನ್ನೂ ಸೇರಿಸಿ ರಾಜ್ಯದಲ್ಲಿ 4 ಕೋಟಿ ಜನರು ಈ ವರ್ಗಗಳಿಗೆ ಸೇರಿದವರಾಗಿದ್ದಾರೆ. ಆದರೂ ಮೀಸಲಾತಿ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ಸೂಕ್ತ ಪ್ರಾತಿನಿಧ್ಯ ನೀಡುವಂತೆ ಸುಪ್ರೀಂಕೋರ್ಟ್ ಹಾಗೂ ವಿವಿಧ ಆಯೋಗಗಳು ಶಿಫಾರಸು ಮಾಡಿದ್ದರೂ, ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಮೀಸಲಾತಿ ಕ್ಷೇತ್ರದಿಂದ ಆಯ್ಕೆಯಾದ ಜನಪ್ರತಿನಿಧಿಗಳು ಈ ಕುರಿತು ಗಟ್ಟಿಯಾದ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಪ್ರಕರಣಗಳಿಂದ ಉಂಟಾಗಿರುವ ತಡೆಯಾಜ್ಞೆ ತೆರವುಗೊಳಿಸಲು ರಾಜ್ಯ ಸರ್ಕಾರ ಹೆಚ್ಚಿನ ಪ್ರಯತ್ನ ಮಾಡಬೇಕು. ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಮಂತ್ರಿಗಳ ಬಳಿ ಕೊಂಡೊಯ್ದು 2022ರ ಅಧಿನಿಯಮಕ್ಕೆ ಮಾನ್ಯತೆ ದೊರಕಿಸಬೇಕು. ನಮ್ಮ ಬೇಡಿಕೆಗಳು ಈಡೇರದಿದ್ದರೆ ರಾಜ್ಯಾದ್ಯಂತ ಧರಣಿ, ಪತ್ರ ಚಳವಳಿ, ಬೆಂಗಳೂರಿನವರೆಗೆ ರಥಯಾತ್ರೆ ಹಾಗೂ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಬೆಳದಡಿ, ಅನಿಲಕುಮಾರ ಸಿದ್ಧಮ್ಮನಹಳ್ಳಿ, ಎಂ. ನರಸಿಂಹಯ್ಯ, ವೆಂಕಟೇಶ ನಾಯಕ ಅಸ್ಕಿಹಾಳ, ಪ್ರಕಾಶ ದೇಸಾಯಿ, ಆದಪ್ಪ ಮಾರೆಪ್ಪನವರ, ಬಸವರಾಜ ತಳವಾರ, ಭೀಮಣ್ಣ ತಳವಾರ, ಭೀಮಪ್ಪ ಯಂಗಾಡಿ, ರಾಮಣ್ಣ ಕೋಳಿ, ಗೋವಿಂದಪ್ಪ ಬಾಗೇವಾಡಿ ಹಾಗೂ ವೈ.ಎಫ್. ಸುಗ್ರೇಶ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಅತಂತ್ರ
ಸಂವಿಧಾನದಿಂದ ಬಾಲ ಕಾರ್ಮಿಕ ಪದ್ಧತಿ ದೂರವಿಡಲು ಸಾಧ್ಯ