ಸಾಹಿತಿ ಡಾ.ಸುಚೇತನಾ ಸ್ವರೂಪ ಅವರು ರಚಿಸುವ ಕಾದಂಬರಿ ಕಾಡುದೇವರಬೆಟ್ಟ ವಿವಿಧ ಆಯಾಮ, ಪಾತ್ರಗಳ ಮೂಲಕ ಬದುಕಿನ ತಾತ್ವಿಕ ಶೋಧವನ್ನು ಅನಾವರಣಗೊಳಿಸುತ್ತದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಸಾಹಿತಿ ಡಾ.ಸುಚೇತನಾ ಸ್ವರೂಪ ಅವರು ರಚಿಸುವ ಕಾದಂಬರಿ ಕಾಡುದೇವರಬೆಟ್ಟ ವಿವಿಧ ಆಯಾಮ, ಪಾತ್ರಗಳ ಮೂಲಕ ಬದುಕಿನ ತಾತ್ವಿಕ ಶೋಧವನ್ನು ಅನಾವರಣಗೊಳಿಸುತ್ತದೆ ಎಂದು ಸಂಸ್ಕೃತಿ ಚಿಂತಕ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ತಿಳಿಸಿದರು. ಅವರು ಲೇಖಕಿಯರ ಸಂಘ ತುಮಕೂರು ಜಿಲ್ಲಾ ಶಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಮಹಿಳಾ ಅಧ್ಯಯನ ಕೇಂದ್ರ, ಸಾಮಾಜಿಕ ನ್ಯಾಯಪರ ವಿದ್ಯಾರ್ಥಿ ಒಕ್ಕೂಟ ತುಮಕೂರು ವಿವಿ ಇವರ ಸಹಯೋಗದಲ್ಲಿ ಸುಚೇತನಸ್ವರೂಪ ಅವರ ಕಾಡುದೇವರಬೆಟ್ಟ ಐದು ಸಂಪುಟಗಳ ಲೋಕಕಥನ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದರು. ಯಾವುದೇ ಕಾದಂಬರಿ ಬೃಹತ್ ಆಗಿರುವುದು ಮುಖ್ಯವಲ್ಲ. ಅದರಲ್ಲಿನ ಮೌಲಿಕತೆಯೇ ಅಂತಿಮ. ಕಾಡುದೇವರಬೆಟ್ಟ ಕಾದಂಬರಿ ವಿವಿಧ ಪಾತ್ರಗಳ ಮೂಲಕ ಆತ್ಮ ಸಂವಾದಿಯಾಗಿದೆ. ದ್ವೇಷ ಅಸಹನೆಯೇ ಯುದ್ಧ ಸಂಘರ್ಷಕ್ಕೆ ನಾಂದಿ ಎಂಬುದನ್ನು ಕಾದಂಬರಿ ಆರಂಭದಲ್ಲೆ ಹೇಳಲಾಗಿದ್ದು, ಸಾಮರಸ್ಯದ ಸಂದೇಶವನ್ನು ಮಾತಿನ ಮಂಟಪದ ಮೂಲಕ ಅನುಭವ ಮಂಟಪದೆಡೆಗೆ ಕೊಂಡೊಯ್ಯುವ ವಿಶೇಷ ಕಾದಂಬರಿ ಸಂಪುಟವೆನಿಸಿದೆ ಎಂದರು. ಕಾದಂಬರಿಯಲ್ಲಿ ಬರುವ ವಿವಿಧ ಜನವರ್ಗವನ್ನು ಪ್ರತಿನಿಧಿಸುವ ಪಾತ್ರಗಳು ಸೈದ್ಧಾಂತಿಕ ಸಂಘರ್ಷ, ಸಮಯ ಸಾಧಕತನ, ರಾಜಕೀಯ ತಂತ್ರಗಾರಿಕೆ, ವಿಶ್ವವಿದ್ಯಾನಿಲಯಗಳಲ್ಲಿನ ಲಂಪಟತೆ, ಪ್ರೇಮ ಸಂಬಂಧಗಳನ್ನು ಯಥಾವತ್ ಅನಾವರಣಗೊಳಿಸುತ್ತದೆ. ಜಾತಿ ಧರ್ಮಾಧರಿತ ಸಂಘರ್ಷಗಳು, ಕೋಮುವಾದದ ವಿವಿಧ ಆಯಾಮಗಳನ್ನು ಕಾದಂಬರಿ ಚಿತ್ರಿಸುತ್ತದೆ. ಕನ್ನಡದಲ್ಲಿ ಇಷ್ಟು ಬೃಹತ್ ಪುಟಗಳ ಕಾದಂಬರಿ ಬರೆದ ಸ್ವರೂಪ ಅವರನ್ನು, ಪ್ರಕಾಶಕರನ್ನು ಅಭಿನಂದಿಸುವ ಜೊತೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಿಗೆ ಓದುಗರು ಅಧಿಕ ಸಂಖ್ಯೆಯಲ್ಲಿ ಬರುವಂತೆ ಮಾಡುವುದು ಆಯೋಜಕರ ಪ್ರಮುಖ ಜವಾಬ್ದಾರಿಯಾಗಬೇಕು ಎಂದರು.
ನವ ತರುಣ ತಲೆಮಾರಾಗಿ ಗುರುತಿಸಲ್ಪಟ್ಟಿರುವ ಜೆನ್‌ಜಿಗಳ ಹೋರಾಟ ತಾತ್ವಿಕ ಹಾದಿಯಲ್ಲಿ ಸಾಗದಿದ್ದರೆ ಶಾಶ್ವತ ಪರಿಹಾರ, ದೀರ್ಘಾವಧಿ ಚಳವಳಿ ಕಟ್ಟಲು ಸಾಧ್ಯವಿಲ್ಲ. ಸಂಘಟನೆಗಳು ಸಾಂಕೇತಿಕ ಪ್ರಾತಿನಿಧ್ಯಕ್ಕೆ, ಅಲ್ಪಾವಧಿಯ ಪ್ರಯೋಜನಗಳಿಗೆ ಸೀಮಿತವಾಗಬಾರದು. ಈ ದಿಸೆಯಲ್ಲಿ ರಾಷ್ಟ್ರದ ಕೇಂದ್ರಬಿಂದುವಾಗಿರುವ ಜೆನ್‌ಜಿಗಳ ಹೋರಾಟ, ಅಭಿವ್ಯಕ್ತಿಗಳ ಬಗ್ಗೆಯೂ ನಿಷ್ಕರ್ಷೆ ಅಗತ್ಯವಿದೆ. ಜಯಪ್ರಕಾಶ್ ನಾರಾಯಣ್ ಅವರು ಪ್ರತಿಪಾದಿಸಿದ ಸಂಪೂರ್ಣ ಕ್ರಾಂತಿ ಇಂದಿಗೂ ಸಾಧ್ಯವಾಗಲಿಲ್ಲ. ಅಸಮಾನತೆ, ಜಾತಿ ಧರ್ಮ ವರ್ಣ ಸಂಕರಗಳು, ಕೋಮುವಾದ ಇಂದಿಗೂ ಭಾರತೀಯರನ್ನು ಜ್ವಲಂತವಾಗಿ ಕಾಡುತ್ತಿದೆ. ಕಾದಂಬರಿ ಕುರಿತು ಮಾತನಾಡಿದ ಲೇಖಕ ಡಾ.ಸಿದ್ಧಗಂಗಯ್ಯ ಹೊಲತಾಳ್ ಅವರು ಕಾಡುದೇವರ ಬೆಟ್ಟ ಕಾದಂಬರಿಯಲ್ಲಿ ಸಮಕಾಲೀನ ವಿಚಾರಧಾರೆ, ಲೋಕಾಭಿವ್ಯಕ್ತಿಯನ್ನು ಬೊಂಬೆರಾಮಯ್ಯ, ಹಿಂಗಾರಯ್ಯ, ಶಕುನೇಗೌಡ, ಅಹಮದ್, ಅಮ್ಮಣ್ಣಮ್ಮ, ಹೀಗೆ ಸುಮಾರು 300 ಪಾತ್ರಗಳ ಮೂಲಕ ಅಭಿವ್ಯಕ್ತಿಗೊಳಿಸುವ ಪ್ರಯೋಗ ಮಾಡಲಾಗಿದೆ ಎಲ್ಲರೂ ಕಾದಂಬರಿ ಕೊಂಡು ಓದಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಹಿರಿಯ ಚಿಂತಕ ಕೆ.ದೊರೈರಾಜು, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಆಶಾ ಬಗ್ಗನಡು, ವಿವಿ ಕಲಾ ಕಾಲೇಜು ಪ್ರಾಂಶುಪಾಲೆ ಪ್ರೊ.ದ್ರಾಕ್ಷಾಯಿಣಿ, ಖಜಾಂಚಿ ರಾಣಿಚಂದ್ರಶೇಖರ್ ,ಮರಿಯಂ ಬಿ ನಿರೂಪಿಸಿದರು. ಪ್ರಕಾಶಕ ನಿಂಗರಾಜು ಚಿತ್ತಣ್ಣವರ್, ಶೈಲಾನಾಗರಾಜ್, ಇಂದಿರಮ್ಮ, ಡಾ.ಟಿ.ಆರ್.ಲೀಲಾವತಿ, ಡಾ. ಲಕ್ಷ್ಮಣದಾಸ್, ಡಾ.ಓ.ನಾಗರಾಜು, ರಘು ಸೇರಿದಂತೆ ಹಲವರು ಪಾಲ್ಗೊಂಡರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.