ಬ್ಯಾಡಗಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ 13ನೇ ಸಭೆಯಲ್ಲಿ ಒಟ್ಟು ₹34 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಪ್ರತಿ ವರ್ಷ ಕನಕ ಉತ್ಸವ: ಕಾಗಿನೆಲೆಯಲ್ಲಿ ಪ್ರತಿ ವರ್ಷ ಕನಕ ಉತ್ಸವ ಆಚರಿಸಲು ಕ್ರಮ ಕೈಗೊಳ್ಳಲಾಗುವುದು. ಉತ್ಸವ ಸಂದರ್ಭದಲ್ಲಿ ಜಿಲ್ಲೆಯ ದಾರ್ಶನಿಕರ ಜೀವನಾದರ್ಶಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದರು.
ಸಮನ್ವಯದಿಂದ ಕೆಲಸ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನಕ ಅಧ್ಯಯನ ಪೀಠ ಸಮನ್ವಯದಿಂದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು. ಪ್ರಾಧಿಕಾರದಲ್ಲಿ ಸಂಚಿತ ನಿಧಿ ಸ್ಥಾಪಿಸಿ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು ಮತ್ತು ಪ್ರಾಧಿಕಾರದ ಆದಾಯ ಹೆಚ್ಚಳಕ್ಕೆ ಯೋಜನೆಗಳನ್ನು ರೂಪಿಸಬೇಕು ಎಂದು ಮುಖ್ಯಮಂತ್ರಿ ಸಲಹೆ ನೀಡಿದ್ದಾಗಿ ತಿಳಿಸಿದರು.ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಲಾಭವನ ನಿರ್ಮಾಣ: ಕನಕ ವಸ್ತು ಸಂಗ್ರಹಾಲಯದಲ್ಲಿ ಒಳವಸ್ತು ಶಿಲ್ಪ ಸಂಗ್ರಹಾಲಯ ನಿರ್ಮಾಣ, ಚೆನ್ನಕೇಶವ ದೇವಾಲಯ, ಮೆಟ್ಟಿಲು, ಗೋಪುರ, ಕಮಾನುಗಳ ನಿರ್ಮಾಣ, ಕದರಮಂಡಲಗಿ ವೆಂಕಟೇಶ್ವರ ದೇವಸ್ಥಾನ, ಸಮುದಾಯ ಭವನ ನಿರ್ಮಾಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದರು.
ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಸಚಿವರಾದ ಶಿವಾನಂದ ಪಾಟೀಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ. ರೇವಣ್ಣ, ಶಾಸಕ ಯಾಸಿರಖಾನ ಪಠಾಣ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಸಹ ಭಾಗವಹಿಸಿದ್ದಾಗಿ ತಿಳಿಸಿದರು.