ಜಗತ್ತಿಗೆ ಮಾದರಿಯಾದ ವಿಶ್ವ ಶ್ರೇಷ್ಠ ಸಂತ ಕೈವಾರ ತಾತಯ್ಯ: ಎಚ್.ಡಿ.ತಮ್ಮಯ್ಯ

KannadaprabhaNewsNetwork |  
Published : Mar 05, 2026, 02:00 AM IST
ಕೈವಾರ | Kannada Prabha

ಸಾರಾಂಶ

ಚಿಕ್ಕಮಗಳೂರುಕೈವಾರ ತಾತಯ್ಯ ಕೇವಲ ಒಂದು ಜಾತಿಗೆ, ಧರ್ಮಕ್ಕೆ ಸೀಮಿತರಾದವರಲ್ಲ, ಅವರು ಇಡೀ ಜಗತ್ತಿಗೆ ಮಾದರಿಯಾದ ವಿಶ್ವ ಶ್ರೇಷ್ಠ ಸಂತರು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಕೈವಾರ ತಾತಯ್ಯನವರ ಜಯಂತಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕೈವಾರ ತಾತಯ್ಯ ಕೇವಲ ಒಂದು ಜಾತಿಗೆ, ಧರ್ಮಕ್ಕೆ ಸೀಮಿತರಾದವರಲ್ಲ, ಅವರು ಇಡೀ ಜಗತ್ತಿಗೆ ಮಾದರಿಯಾದ ವಿಶ್ವ ಶ್ರೇಷ್ಠ ಸಂತರು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಕೈವಾರ ತಾತಯ್ಯನವರ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಪುಣ್ಯಕ್ಷೇತ್ರಕ್ಕೆ ದ್ವಾಪರ ಯುಗದಲ್ಲಿ ‘ಏಕಚಕ್ರ ನಗರ’ ಎಂಬ ಹೆಸರಿತ್ತು. ಪಾಂಡವರು ವನವಾಸದಲ್ಲಿದ್ದಾಗ ಈ ಭಾಗಕ್ಕೆ ಭೇಟಿ ನೀಡಿದ್ದರು. ಅಲ್ಲಿರುವ ಭೀಮಲಿಂಗೇಶ್ವರ ದೇವಸ್ಥಾನವನ್ನು ಭೀಮನೇ ಸ್ಥಾಪಿಸಿದ ಎಂಬ ಇತಿಹಾಸವಿದೆ ಎಂದು ತಿಳಿಸಿದರು.

ತಾತಯ್ಯನವರು ಬಡವರಿಗೆ ಮತ್ತು ಜನಸಾಮಾನ್ಯರಿಗೆ ಭಕ್ತಿ ಹಾಗೂ ಧರ್ಮದ ಶ್ರದ್ಧೆ ಕಲಿಸಿಕೊಟ್ಟಿದ್ದಾರೆ. ಬಲಿಜ ಜನಾಂಗ ದವರು ಅವರನ್ನು ಕುಲದೈವದಂತೆ ಪೂಜಿಸಿದರು. ಅವರ ಬೋಧನೆಗಳು ಮತ್ತು ಕಾಲಜ್ಞಾನದ ನುಡಿಗಳು ಸಾರ್ವಕಾಲಿಕ ವಾಗಿದ್ದು ಎಲ್ಲರಿಗೂ ಅನ್ವಯಿಸುತ್ತವೆ ಎಂದರು.

ಲೋಕದ ನಡವಳಿಕೆ ವಿಡಂಬಿಸುತ್ತಿದ್ದ ತಾತಯ್ಯನವರು ಮನುಷ್ಯ ಕೆಟ್ಟದ್ದಕ್ಕೆ ಬೇಗ ಆಕರ್ಷಿತನಾಗುತ್ತಾನೆ ಎಂಬುದನ್ನು ಮಾರ್ಮಿಕವಾಗಿ ಹೇಳುತ್ತಿದ್ದರು. ಮದ್ಯದ ಅಂಗಡಿ ಮುಂದೆ ಜನ ಜಂಗುಳಿ ಸೇರುತ್ತದೆ. ಆದರೆ ಜೀವ ಉಳಿಸುವ ಮಜ್ಜಿಗೆ, ಹಾಲು ಮಾರುವ ಜಾಗದಲ್ಲಿ ಯಾರೂ ಸುಳಿಯಲ್ಲ. ಅಂದರೆ ಲೋಕದಲ್ಲಿ ಒಳ್ಳೆಯ ವಸ್ತುಗಳು ತಿರಸ್ಕಾರಕ್ಕೆ ಒಳಗಾಗಿ, ಕೆಟ್ಟದ್ದೇ ಮುಖ್ಯವಾಗುತ್ತಿದೆ ಎಂದು ಕೈವಾರ ತಾತಯ್ಯ ಅಂದೇ ಖೇದ ವ್ಯಕ್ತಪಡಿಸಿದ್ದರು. ಮನುಷ್ಯನ ಅಂತರಾತ್ಮವನ್ನು ಎಚ್ಚರಿಸುವ ತಾತಯ್ಯನವರ ತತ್ವಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿ ಎಂದು ಹೇಳಿದರು.

ಕೈವಾರ ತಾತಯ್ಯ ಕುರಿತು ಉಪನ್ಯಾಸ ನೀಡಿದ ಸಾಹಿತಿ ಬಿ.ತಿಪ್ಪೇರುದ್ರಪ್ಪ, ತಾತಯ್ಯನವರ ಜೀವನದ ಮಹತ್ವದ ಘಟ್ಟಗಳನ್ನು ವಿವರಿಸಿದರು. ಜೀವನದ ಸಂಕಷ್ಟದ ಸಮಯದಲ್ಲಿ ಅಮರೇಶ ನಾರಾಯಣನನ್ನು ಪ್ರಾರ್ಥಿಸಿದ ನಾರಾಯಣಪ್ಪ ನವರಿಗೆ ಪರದೇಶಪ್ಪ ಸ್ವಾಮಿಗಳ ದರ್ಶನವಾಗಿ, ಅವರಿಂದ ಅಷ್ಟಾಕ್ಷರಿ ಮಂತ್ರೋಪದೇಶ ಲಭಿಸಿತು.

ಸಂಸಾರ ಎಂಬುದು ಗಾಳಿಗೆ ಸಿಕ್ಕ ದೀಪದಂತೆ ಅಸ್ಥಿರವೆಂದು ಭಾವಿಸಿದ ಅವರು, ಲೌಕಿಕ ಜೀವನದಿಂದ ದೂರವಾಗಿ ಕೈವಾರದ ನರಸಿಂಹ ಗುಹೆಯಲ್ಲಿ 3 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿದರು. ಅವರ ಕಾಲಜ್ಞಾನ ೨೧ನೇ ಶತಮಾನದಲ್ಲೂ ನಿಜವಾಗುತ್ತಿವೆ ಎಂದು ಪ್ರತಿಪಾದಿಸಿದರು.

ಬಲಿಜ ಸಮಾಜದ ಜಿಲ್ಲಾಧ್ಯಕ್ಷ ಆನಂದ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್.ಶೆಟ್ಟಿ, ಟ್ರಸ್ಟಿನ ಖಜಾಂಚಿ ಪೂಜಾರ ಮಂಜಪ್ಪ, ತಾಲೂಕು ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಮಹೇಶ್ ಬಾಬು, ಕಾರ್ಯದರ್ಶಿ ಕೆ.ಬಿ.ಗಿರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಸದಸ್ಯ ಎಚ್.ವೈ.ಮೋಹನ್ ಕುಮಾರ್, ಉಪ ತಹಸೀಲ್ದಾರ್ ರಾಮರಾವ್ ದೇಸಾಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಣ್ಣದೋಕುಳಿಯಲ್ಲಿ ಮಿಂದೆದ್ದ ಧಾರವಾಡಿಗರು!
ಸಮಾನತೆ ತರಲು ಶ್ರಮಿಸಿದವರು ಕೈವಾರ ತಾತಯ್ಯ: ಅರವಿಂದ