;Resize=(412,232))
ಕಲಬುರಗಿ : ಬಾಗಲಕೋಟೆ ಬಳಿಕ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿಯೂ ಶಿವಾಜಿ ಜಯಂತಿ ಕಾರ್ಯಕ್ರಮದ ವೇಳೆ ಹಿಂದು ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಮೂರ್ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಬಗ್ಗೆ ಉಭಯ ಕೋಮಿನ ಯಾವ ಕಡೆಯಿಂದಲೂ ದೂರು ದಾಖಲಾಗಿಲ್ಲ. ಪೊಲೀಸರು ಹಾಗೂ ಗ್ರಾಮದ ಹಿರಿಯರು ಮಧ್ಯಸ್ಥಿಕೆ ವಹಿಸಿ ಪ್ರಕರಣವನ್ನು ಶಾಂತವಾಗಿ ಪರಿಹರಿಸಿಕೊಂಡಿದ್ದಾರೆ. ಆದರೆ, ಮುಂಜಾಗ್ರತಾ ಕ್ರಮವಾಗಿ ವಾಡಿ ಠಾಣೆಯ ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ವಿಡಿಯೋ ಆಧರಿಸಿ ತನಿಖೆ ಕೈಗೊಂಡಿದ್ದಾರೆ.
ರಾವೂರು ಗ್ರಾಮದ ಗೋಕುಲ ನಗರದಲ್ಲಿನ ಗಣೇಶ ಕಟ್ಟೆಯ ಮೇಲೆ ಶಿವಾಜಿ ಜಯಂತಿಯಂದು ಶಿವಾಜಿಯ ಭಾವಚಿತ್ರ ಇಟ್ಟು ಯುವಕರು ಜಯಂತಿ ಆಚರಣೆ ಮಾಡುತ್ತಿದ್ದರು. ಈ ವೇಳೆ ಸೌಂಡ್ ಬಾಕ್ಸ್‌ನಲ್ಲಿ ಹಾಡು ಹಾಕಿ ಡ್ಯಾನ್ಸ್ ಮಾಡುತ್ತಿದ್ದಾಗ ಮುಸ್ಲಿಂ ಸಮುದಾಯದ ಕೆಲವರು ಸೌಂಡ್ ಕಡಿಮೆ ಮಾಡುವಂತೆ ಹೇಳಿ ಕಿರಿಕ್ ಮಾಡಿದರು. ಇದರಿಂದ ಮಾತಿನ ಚಕಮಕಿ ಉಂಟಾಗಿ, ಎರಡೂ ಸಮುದಾಯಗಳ ಜನ ಕಟ್ಟಿಗೆ ಹಾಗೂ ಕಲ್ಲುಗಳಿಂದ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಮೂರ್ನಾಲ್ಕು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬಳಿಕ, ಗ್ರಾಮದ ಹಿರಿಯರು ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಎರಡೂ ಸಮುದಾಯಗಳ ನಡುವೆ ಸಂಧಾನ ನಡೆದಿದೆ. ಗ್ರಾಮದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.