ಕಲಾದಗಿ ಘಟನೆ: ೫೯ ಜನರ ವಿರುದ್ಧ ಪ್ರಕರಣ ದಾಖಲು

KannadaprabhaNewsNetwork |  
Published : Feb 19, 2024, 01:37 AM IST
ಕಲಾದಗಿ | Kannada Prabha

ಸಾರಾಂಶ

ಕಲಾದಗಿ: ಗ್ರಾಮದಲ್ಲಿ ಶನಿವಾರ ನಡೆದ ರಂಭಾಪುರಿ ಶ್ರೀಗಳವರ ವಿರುದ್ಧದ ಪ್ರತಿಭಟನೆಗೆ ಸಂಬಧಿಸಿದಂತೆ ೫೯ ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದ್ದಾರೆ. ಭಾನುವಾರ ಮಧ್ಯಾಹ್ನ ಸ್ಥಳೀಯ ಶ್ರೀ ಗುರುಲಿಂಗೇಶ್ವರ ಮಠಕ್ಕೆ ಆಗಮಿಸಿ ಮಠವನ್ನು ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದುಕೊಂಡರು.

ಕನ್ನಡಪ್ರಭ ವಾರ್ತೆ ಕಲಾದಗಿ

ಗ್ರಾಮದಲ್ಲಿ ಶನಿವಾರದಂದು ನಡೆದ ರಂಭಾಪುರಿ ಶ್ರೀಗಳವರ ವಿರುದ್ಧದ ಪ್ರತಿಭಟನೆಗೆ ಸಂಬಧಿಸಿದಂತೆ ೫೯ ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಬಾಗಲಕೋಟ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದ್ದಾರೆ.

ಭಾನುವಾರ ಮಧ್ಯಾಹ್ನ ಸ್ಥಳೀಯ ಶ್ರೀ ಗುರುಲಿಂಗೇಶ್ವರ ಮಠಕ್ಕೆ ಆಗಮಿಸಿ ಮಠವನ್ನು ಪರಿಶೀಲಿಸಿ ಅಗತ್ಯ ಮಾಹಿತಿ ಪಡೆದುಕೊಂಡರು. ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ರಂಭಾಪುರಿ ಶ್ರೀಗಳ ಸುಗಮ ಸಂಚಾರಕ್ಕೆ ಅಡೆತಡೆ ಮಾಡಿ ಕಾನೂನು ಕೈಗೆ ತೆಗೆದುಕೊಂಡಿದ್ದು, ಸಂಘಟಿತರಾಗಿ ನೂಕು ತಳ್ಳಾಟದ ಪ್ರತಿಭಟನೆ ಮಾಡಿದ ಈ ಎಲ್ಲ ಅಂಶಗಳ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ. ಪ್ರಕರಣದ ತನಿಖೆಯಲ್ಲಿ ಕಂಡು ಬಂದಲ್ಲಿ ಇನ್ನಷ್ಟು ಜನರ ಮೇಲೂ ಪ್ರಕರಣ ದಾಖಲಿಸಲಾಗುತ್ತದೆ, ಈ ಘಟನೆಗೆ ಸಂಬಂಧಿಸಿದಂತೆ ಇನ್ಯಾರದೆ ಪ್ರತಿ ದೂರು ಈವರೆಗೂ ದಾಖಲಾಗಿಲ್ಲ. ಶ್ರೀಮಠದ ಪೀಠಾಧಿಪತಿ ನೇಮಕ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯ ಸದ್ಯಕ್ಕೆ ನೀಡಿರುವ ಆದೇಶದಂತೆ ಎಲ್ಲರೂ ನಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಮೀರಿ ಯಾರೇ ಏನಾದರೂ ಹೇಗಾದರೂ ನಡೆದುಕೊಂಡು ಅಶಾಂತಿ ಉಂಟು ಮಾಡಿದರೆ ಕಾನೂನಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಗ್ರಾಮದಲ್ಲಿ ಸಧ್ಯ ಪರಿಸ್ಥಿತಿ ಶಾಂತವಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಮಠದ ಬಳಿ ಸೂಕ್ತ ಪೋಲಿಸ್ ಬಂದೂಬಸ್ತ ವ್ಯವಸ್ಥೆ ಮಾಡಲಾಗಿದೆ ಎಂದರು. ಡಿವೈಎಸ್ಪಿ ಪಂಪನಗೌಡರ, ಸಿಪಿಐ ಎಚ್.ಆರ್.ಪಾಟೀಲ, ಸ್ಥಳೀಯ ಠಾಣಾಧಿಕಾರಿ ಆರ್.ಎಲ್. ಮನ್ನಾಬಾಯಿ ಈ ಸಂದರ್ಭದಲ್ಲಿದ್ದರು.---

ಏನಿದು ಪ್ರಕರಣ ?

ಎಂಟು ವರ್ಷಗಳ ಹಿಂದೆ ಸ್ವಾಮೀಜಿ ನಿಧನರಾಗಿದ್ದರು. ರಂಭಾಪುರಿ ಶ್ರೀಗಳು ಮಠಕ್ಕೆ ಗಂಗಾಧರ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಿದ್ದರು. ಆದರೆ, ಈ ನೇಮಕಕ್ಕೆ ಗ್ರಾಮದ ಕೆಲವು ಭಕ್ತರು ವಿರೋಧಿಸಿದ್ದರು. ಹೀಗಾಗಿ ವಿವಾದ ಕೋರ್ಟ್‌ ಮೆಟ್ಟಿಲೇರಿತ್ತು. ಮಧ್ಯಂತರ ಆದೇಶ ನೀಡಿದ್ದ ಕೋರ್ಟ್ ಗಂಗಾಧರ ಸ್ವಾಮೀಜಿಗೆ ಪೂಜಾ ಕಂಕರ್ಯ ಮಾತ್ರ ನೆರವೇರಿಸಿಕೊಂಡು ಹೋಗಲು ಅನುಮತಿ ನೀಡಿತ್ತು. ಮಠದ ದುರಸ್ತಿ, ಆಸ್ತಿ ಸಾಗುವಳಿ ಸೇರಿದಂತೆ ಇತರ ವ್ಯವಹಾರಗಳಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆ ನಿರ್ದೇಶನ ನೀಡಿತ್ತು. ಆದರೆ, ಈಚೆಗೆ ಮಠದ ನವೀಕರಣ ಕಾಮಗಾರಿ ಆರಂಭಿಸಿರುವುದು ವಿವಾದಕ್ಕೆ ಕಾರಣ ಎನ್ನಲಾಗಿದೆ. ಶನಿವಾರ ಉದಗಟ್ಟಿಯಲ್ಲಿನ ಕಾರ್ಯಕ್ರಮಕ್ಕೆ ಹೊರಟಿದ್ದರ ರಂಭಾಪುರಿ ಶ್ರೀಗಳ ಕಾರಿಗೆ ಕೆಲವು ಭಕ್ತರು ಅಡ್ಡಗಟ್ಟಿ ಆಕ್ರೋಶ ಹೊರಹಾಕಿದ್ದರು. ಈ ವೇಳೆ ಮಹಿಳೆಯೋರ್ವಳು ಶ್ರೀಗಳ ಕಾರಿನತ್ತ ಚಪ್ಪಲಿ ಎಸೆದ ವಿಡಿಯೋ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ರಂಭಾಪುರಿ ಜಗದ್ಗುಗಳು ಈ ಘಟನೆ ನಡೆದಿರುವುದನ್ನು ತಳ್ಳಿಹಾಕಿದ್ದರು. ಈಗ 59 ಜನರ ವಿರುದ್ಧ ಕಲಾದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1ನೇ ಕ್ಲಾಸ್‌ಗೆ ವಯೋಮಿತಿ 5.5 ವರ್ಷಕ್ಕಿಳಿಸಲು ಪೋಷಕರ ಹೋರಾಟ
ಆಟೋ ಎಲ್‌ಪಿಜಿ ಕೊರತೆ ಇಲ್ಲ : ಗ್ರಾಹಕರ ವ್ಯವಹಾರ ಇಲಾಖೆ