ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಂತಶ್ರೇಷ್ಟ ಭಕ್ತ ಕನಕದಾಸರ ಚಿಂತನೆಗಳು, ಸಾಮಾಜಿಕ ಸಮಾನತೆ, ಮಾನವ ಧರ್ಮನಿಷ್ಠೆ, ಬಹುತ್ವದ ದೈವೋಪಾಸನೆ ಮತ್ತು ನೈತಿಕ ಬದುಕಿನ ಕುರಿತು ಅವರ ಸಂದೇಶವು ಇಂದಿನ ಸಮಾಜಕ್ಕೆ ದಾರೀದೀಪ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.ನಗರದ ಹೊಳಲ್ಕೆರೆ ರಸ್ತೆಯ ಕನಕವೃತ್ತದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಜಂಟಿಯಾಗ ಹಮ್ಮಿಕೊಂಡಿದ್ದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತದ ಭಕ್ತಿ ಸಾಹಿತ್ಯ ಪರಂಪರೆಯಲ್ಲಿ ಕನಕದಾಸರದು ಪ್ರಮುಖ ಸ್ಥಾನ. ಪುರಂದರದಾಸರಂತೆ ಕನಕದಾಸರೂ ಮಹಾಜ್ಞಾನಿಗಳು. ಅವರು ಬರೀ ಕವಿಯಷ್ಟೆ ಆಗಿರಲಿಲ್ಲ. ಸಮಾಜ ಸುಧಾರಕ. ಪ್ರಸಿದ್ದ ಕೀರ್ತನಕಾರರು, ಜತೆಗೆ ಕರ್ನಾಟಕದ ಪ್ರಮುಖ ಹರಿದಾಸರು, ದಾರ್ಶನಿಕ ಹಾಗೂ ಮಾನವೀಯತೆಯ ಸಾಕಾರವಾಗಿದ್ದರು ಎಂದರು.ಬೇಡಿಕೆಗಳ ಹಕ್ಕೊತ್ತಾಯ:
ಕುರುಬ ಸಮಾಜವನ್ನು ಎಸ್.ಟಿ. ಸೇರ್ಪಡೆ, ಕುರುಬ ಸಮುದಾಯವರಿಗೆ ಶವ ಸಂಸ್ಕಾರಕ್ಕಾಗಿ ಪ್ರತ್ಯೇಕವಾಗಿ ಜಿಲ್ಲಾ ಕೇಂದ್ರದಲ್ಲಿ 5 ಎಕರೆ ಹಾಗೂ ತಾಲೂಕು ಕೇಂದ್ರ 2 ಎಕರೆ ಜಮೀನು ಮಂಜೂರು, ಸಮಾಜದ ಶೈಕ್ಷಣಿಕ ಚಟುವಟಿಕೆ ಉದ್ದೇಶಕ್ಕೆ ಜಿಲ್ಲೆಯ ಆರು ತಾಲೂಕುಗಳ ಕೇಂದ್ರಸ್ಥಾನದಲ್ಲಿ ತಲಾ 5 ಎಕರೆ ಭೂಮಿಯನ್ನು ಬಡ ವಿದ್ಯಾರ್ಥಿಗಳ ಸೌಲಭ್ಯಕ್ಕಾಗಿ ಮಂಜೂರು ಸೇರಿ ವಿವಿಧ ಬೇಡಿಕೆಗಳ ಹಕ್ಕೊತ್ತಾಯದ ಮನವಿಯನ್ನು ಜಿಲ್ಲಾ ಕುರುಬರ ಸಂಘದ ಕಾರ್ಯದರ್ಶಿ ಬಿ.ಟಿ.ಜಗದೀಶ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾಡಿದರು.ಅದ್ದೂರಿ ಮೆರವಣಿಗೆ:
ಸಂತಶ್ರೇಷ್ಠ ಕನಕದಾಸರ ಜಯಂತಿ ಅಂಗವಾಗಿ ನಗರದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಜಿಲ್ಲಾ ಕುರುಬರ ಸಂಘದ ಕಚೇರಿವರೆಗೆ ವಿವಿಧ ಜಾನಪದ ಕಲಾ ತಂಡಗೊಂದಿಗೆ ಕನಕದಾಸರ ಭಾವಚಿತ್ರದ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ ಮೆರವಣಿಗೆಗೆ ಚಾಲನೆ ನೀಡಿದರು.ಕನಕಶ್ರೀ ಸೇವಾರತ್ನ ಪ್ರಶಸ್ತಿ ಪ್ರದಾನ:
ಜಿಲ್ಲಾ ಕುರುಬರ ಸಂಘದ ವತಿಯಿಂದ ಕಾಶಿವಿಶ್ವನಾಥ ಶೆಟ್ಟಿ, ಬಿ.ಎಸ್.ಸುರೇಶ್ ಬಾಬು, ಕೆ.ಟಿ.ಶಿವಕುಮಾರ್, ಈ.ಅಶೋಕ್, ಎನ್.ಅಶೋಕ್ ಅವರಿಗೆ ಕನಕಶ್ರೀ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ 10 ಜನ ಸಮಾಜದ ಸಾಧಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ತುರುವನೂರಿನ ಕೆ.ಲಿಂಗಯ್ಯ ವಿರಚಿತ ಕನಕದಾಸರ ಚರಿತ್ರೆ ಮತ್ತು ಜ್ಞಾನಾಂಮೃತಸಾರ ಕೃತಿಗಳ ಲೋಕಾರ್ಪಣೆ ನಡೆಯಿತು. ಆಯಿತೋಳು ವಿರೂಪಾಕ್ಷಪ್ಪ ಮತ್ತು ತಂಡದವರು ಗೀತಗಾಯನ ನಡೆಸಿಕೊಟ್ಟರು.ಸಂಸದ ಗೋವಿಂದ ಎಂ ಕಾರಜೋಳ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಕಂಠೀರವ ಸ್ಟುಡಿಯೋ ಅಧ್ಯಕ್ಷ ಮಹೆಬೂಬ್ ಪಾಷಾ, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್, ಕಾರ್ಯದರ್ಶಿ ಬಿ.ಟಿ.ಜಗದೀಶ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆ.ಓಂಕಾರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಹೆಬೂಬ್ ಜಿಲಾನಿ ಖುರೇಷಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಡಿವೈಎಸ್‍ಪಿ ಪಿ.ಕೆ.ದಿನಕರ್, ಮುಖಂಡರಾದ ಸೋಮಶೇಖರ್, ಜಿ.ಬಿ.ವಿನಯ್ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.