ಕಾರಟಗಿ: ದಾಸ ಸಾಹಿತ್ಯ ಶ್ರೀಮಂತಗೊಳಿಸಿ ದಾಸ ಸಾಹಿತ್ಯದ ಮೂಲಕ ಜಾತಿ ಮತ, ಕುಲಗಳ ಬೇಧಭಾವ ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿ ಮಾಡಿ ಭಕ್ತಿಯ ಮೂಲಕ ಶ್ರೀಕೃಷ್ಣ ಪರಮಾತ್ಮನ ಅನುಗ್ರಹ ಪಡೆದ ಸಂತ ಭಕ್ತ ಕನಕದಾಸರು ಎಂದು ತಹಸೀಲ್ದಾರ್ ಎಂ.ಕುಮಾರಸ್ವಾಮಿ ಹೇಳಿದರು.
ಸಮಾಜ ಸುಧಾರಣೆಗಾಗಿ ಈ ನಾಡಿನಲ್ಲಿ ಹಲವಾರು ಸಂತ ಶರಣರು ಶ್ರಮಿಸಿದ್ದಾರೆ. ಅಂತಹ ಮಹನೀಯರಲ್ಲಿ ಭಕ್ತ ಕನಕದಾಸರು ಒಬ್ಬರಾಗಿದ್ದಾರೆ. ೧೫-೧೬ನೇ ಶತಮಾನದಲ್ಲಿ ಜನಪ್ರೀಯರಾಗಿದ್ದ ಭಕ್ತಿಪಂಥದಲ್ಲಿ ಮುಖ್ಯ ಹರಿದಾಸರ ಭಕ್ತ ಕನಕದಾಸರು ಒಬ್ಬರು. ಭಕ್ತ ಕನಕದಾಸರು ಅಂದು ಜಟಿಲವಾಗಿ ಬೇರೂರಿದ್ದ ಸಾಮಾಜಿಕ ಮೌಢ್ಯ ಹೋಗಲಾಡಿಸಲು ಹರಿಭಕ್ತಸಾರ, ರಾಮಧ್ಯಾನಚರಿತೆ, ಕೃಷ್ಣ ಚರಿತೆ, ನಳಚರಿತೆ, ಮೋಹನ ತರಂಗೀಣಿ, ಕನಕಮಂಡಿಗೆ ನರಸಿಂಹಸ್ತೋತ್ರ ಹೀಗೆ ಹಲವಾರು ಕೃತಿ ರಚಿಸುವ ಮೂಲಕ ಜಗತ್ತಿಗೆ ಬೆಳಕು ಚೆಲ್ಲಿದರು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಸಾಬಣ್ಣ ಕಟ್ಟೇಕಾರ ಮಾತನಾಡಿ, ಸಂತ ಕನಕದಾಸರು ತಾವು ಕಂಡ ಸಮಾಜದ ಹಲವಾರು ವಿಚಾರ,ತತ್ವ ತಮ್ಮ ಆಡು ಭಾಷೆಯಲ್ಲಿ ಒಗಟುಗಳ ರೂಪದಲ್ಲಿ ಜಗತ್ತಿಗೆ ಸಾರಿದರು. ಸಮಾಜ ಸುಧಾರಕರಾಗಿ ಮೇಲು ಕೀಳು ಎಂಬ ಭಾವ ಮೆಟ್ಟಿ ಭಾವ್ಯಕ್ಯತೆಯನ್ನು ೫೦೦ ವರ್ಷಗಳ ಹಿಂದೆಯೇ ಸಾರಿದ ಕನಕದಾಸರು ಮಹಾನ್ ಸಂತರು ಎಂದರು.ಇದಕ್ಕೂ ಮುನ್ನ ಕನಕದಾಸರ ನಾಮಫಲಕಕ್ಕೆ ಸಮಾಜದ ಮುಖಂಡ ರಾಜಶೇಖರ ಆನೆಹೊಸುರ ಶ್ರದ್ಧಾಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಪುಷ್ಪಹಾರ ಹಾಕಿದರು. ನಂತರ ಕನಕದಾಸರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಾಲುಮತ ಸಮಾಜದ ಹಿರಿಯರು, ಯುವ ಮುಖಂಡರು, ಯುವಕ ಸಂಘಟನೆ ಪದಾಧಿಕಾರಿಗಳು, ತಾಲೂಕಾಡಳಿತದ ಅಧಿಕಾರಿಗಳು, ಸಿಬ್ಬಂದಿ ನಾಮಫಲಕಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ಭೂಮಿ ಪೂಜೆ:
ಬಳಿಕ ಹಾಲುಮತ ಸಮಾಜದ ಶರಣಪ್ಪ ಪರಕಿ ಮಾತನಾಡಿ, ಕನಕದಾಸ ವೃತ್ತದಲ್ಲಿ ಭಕ್ತ ಕನಕದಾಸರ ಭವ್ಯ ಪುತ್ಥಳಿ ಪ್ರತಿಷ್ಠಾಪನೆ ಮಾಡುವ ನಿಟ್ಟಿನಲ್ಲಿ ಕನಕದಾಸರ ೫೩೮ ನೇಯ ಜಯಂತಿ ದಿನದಂದೇ ಅರ್ಚಕರ ಪೌರೋಹಿತ್ಯದಲ್ಲಿ ಸ್ಥಳದ ಭೂಮಿ ಪೂಜೆ ಶ್ರದ್ಧಾಭಕ್ತಿಪೂರ್ವಕವಾಗಿ ನಡೆಸಲಾಗಿದೆ. ಪುತ್ಥಳಿ ಸ್ಥಾಪನೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ₹ ೧೦ ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ. ಬರುವ ಜನವರಿಯಲ್ಲಿ ಮೂರ್ತಿ ಸ್ಥಾಪನೆಯಂದು ಕನಕ ಸಂದೇಶ ಸಮಾವೇಶ ಹಮ್ಮಿಕೊಂಡಿದ್ದು ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಹ್ವಾನಿಸಿ ಪುತ್ಥಳಿ ಅನಾವರಣ ಕಾರ್ಯಕ್ರಮ ಅದ್ಧೂರಿಯಾಗಿ ನಡೆಸಲಾಗುವುದು ಎಂದರು.