ಮಂಗಳೂರು: ಕನಕದಾಸರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳು ನೆಲದಲ್ಲೇ ನಿಂತು ಇಡೀ ಸಮಾಜವನ್ನು ಸಾಮಾಜಿಕ ಸಮಾನತೆ ಮತ್ತು ಆಧ್ಯಾತ್ಮಿಕ ಉನ್ನತಿಗೆ ಏರಿಸಿದ ಸಂತರು. ಇವರಿಬ್ಬರೂ ಭಾರತದ ಬಹುತ್ವ ಮತ್ತು ಬಂಧುತ್ವದ ಮಹತ್ವವನ್ನು ಸಾರಿದ ಮಹನೀಯರು ಎಂದು ಲೇಖಕ ಡಾ. ನರೇಂದ್ರ ರೈ ದೇರ್ಲ ಹೇಳಿದ್ದಾರೆ.
ದೇವಸ್ಥಾನದ ಒಳಗಡೆ ಗ್ರಂಥಾಲಯಗಳನ್ನು ತೆರೆದ, ಉದ್ಯಾನವನಗಳನ್ನು ಸ್ಥಾಪಿಸಿದ ನಾರಾಯಣ ಗುರುಗಳ ಪ್ರಯೋಗಗಳು ಶಿಕ್ಷಣ ಮತ್ತು ಪ್ರಕೃತಿ ಮೇಲಿನ ಅವರ ಲೋಕದೃಷ್ಟಿಯನ್ನು ತೋರಿಸುತ್ತದೆ ಎಂದರು.
ಶ್ರೀಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಸಂತ ಕಾರಂದೂರು ಉದ್ಘಾಟಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಗೋಕರ್ಣನಾಥೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ಸಮಾನತೆ ಮತ್ತು ಮನುಷ್ಯತ್ವದ ಆಶಯಗಳನ್ನು ಇಬ್ಬರು ಸಂತರು ಹೊಂದಿದ್ದರು ಎಂದು ಹೇಳಿದರು.
ಆಶಯ ಭಾಷಣ ಮಾಡಿದ ಕನಕದಾಸ ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ, ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಒಳಿತು ಇರುವಂತೆ ಅಸಮಾನತೆ ಸಾರುವ ಕೆಡುಕುಗಳು ಇವೆ. ಸಂತರು ಭಾರತದ ಅಧ್ಯಾತ್ಮಿಕ ಒಳಿತನ್ನು ಎತ್ತಿಹಿಡಿದು ಜಾತಿ, ಮೌಢ್ಯಗಳಂತಹ ಕೆಡುಕುಗಳ ವಿರುದ್ಧ ಹೋರಾಡಿದರು ಎಂದರು. ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಾಧವ ಎಂ.ಕೆ ಉಪಸ್ಥಿತರಿದ್ದರು.ಶ್ರೀ ಗೋಕರ್ಣನಾಥೇಶ್ವರ ಪಿಯು ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕಿ ಭಾರತಿ ಸ್ವಾಗತಿಸಿದರು, ಎಸ್. ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ದ್ವಿತೀಯ ಎಂ.ಎ.ವಿದ್ಯಾರ್ಥಿ ದುಶ್ಯಂತ್ ವಂದಿಸಿದರು, ಶ್ರೀ ಗೋಕರ್ಣನಾಥೇಶ್ವರ ಪಿಯು ಕಾಲೇಜು ವಾಣಿಜ್ಯಶಾಸ್ತ್ರ ಉಪನ್ಯಾಸಕಿ ದಿವ್ಯ ಯು. ನಿರೂಪಿಸಿದರು.