ತುಳುನಾಡಿನಲ್ಲಿ ಅಂಕ, ಆಯನ, ನೇಮ, ಜಾತ್ರೆ ಅಂತ್ಯ
ಕನ್ನಡಪ್ರಭ ವಾರ್ತೆ ಮೂಲ್ಕಿತುಳುನಾಡಿನಲ್ಲಿ ಎರ್ಮಾಳು ಜೆಪ್ಪು ಕಂಡೇವು ಅಡೆಪ್ಪು ಎಂಬ ನಾಣ್ಣುಡಿಯಂತೆ ನವೆಂಬರ್‌ನಲ್ಲಿ ಎರ್ಮಾಳು ಜಾತ್ರೆ ಮೂಲಕ ಅಂಕ, ಆಯನ, ನೇಮ, ಜಾತ್ರೆ ಆರಂಭಗೊಂಡು ಮೇನಲ್ಲಿ ವೃಷಭ ಸಂಕ್ರಮಣದಂದು ಖಂಡೇವುನಲ್ಲಿ ನಡೆಯುವ ಜಾತ್ರೆಯ ಮೂಲಕ ಅಂತ್ಯಗೊಳ್ಳುತ್ತದೆ. ಸಂಪ್ರದಾಯದಂತೆ ಬುಧವಾರ ಸಂಕ್ರಮಣದಂದು ಬೆಳಗ್ಗೆ ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ನಂದಿನಿ ನದಿಯಲ್ಲಿ ಮೀನು ಹಿಡಿಯುವ ಜಾತ್ರೆ ನಡೆಯಿತು.
ಬೆಳಗ್ಗೆ ಕಂಡೇವು ಬೀಡಿನ ಮುಕ್ಕಾಲ್ದಿ ದೈವದ ಪ್ರಸಾದ ತಂದು ಹೊಳೆಗೆ ಹಾಕಿದ ಬಳಿಕ ನೀರಿಗಿಳಿಯಲು ಸಿಡಿಮದ್ದು ಸಿಡಿಸಲಾಯಿತು. ನಂತರ ಭಕ್ತರು ಹೊಳೆಗೆ ಇಳಿದು ಮೀನು ಹಿಡಿಯಲು ಆರಂಭಿಸಿದರು. ಮೀನು ಹಿಡಿದವರು ತಮಗೆ ಬೇಕಾದಷ್ಟು ಉಳಿಸಿ ಉಳಿದವುಗಳನ್ನು ಅಲ್ಲಿಯೇ ಮಾರಾಟ ಮಾಡಿದ್ದು, ಗ್ರಾಮಸ್ಥರು ಮೀನುಗಳನ್ನು ಖರೀದಿಸಿದ್ದಾರೆ.ಈ ಬಾರಿ ಮೀನುಗಳ ಅಭಾವದ ಜೊತೆಗೆ ಭಕ್ತರ ಸಂಖ್ಯೆ ಕಡಿಮೆಯಿತ್ತು. ನದಿಯಲ್ಲಿ ತ್ಯಾಜ್ಯ ನೀರು ಹರಿದು ಕಳೆ ಬಂದ ಕಾರಣ ಮೀನುಗಳ ಸಂಖ್ಯೆ ಕಡಿಮೆಯಾಗಿದೆ.
ಚೇಳ್ಯಾರು ಖಂಡಿಗೆ ಧರ್ಮರಸು ಉಳ್ಳಾಯ ಇಲ್ಲಿಯ ಒಡೆಯನಾಗಿದ್ದು, ಆತನ ಅಧೀನಕ್ಕೊಳಪಟ್ಟ ಪ್ರದೇಶದ ಮೀನುಗಳೂ ಆತನದ್ದೇ ಆಗಿರುತ್ತದೆ. ಆದ್ದರಿಂದ ಆತನ ಒಪ್ಪಿಗೆ ವಿನಃ ಮೀನುಗಳ ಬೇಟೆ ಸಾಧ್ಯವಿಲ್ಲ. ವರ್ಷಕ್ಕೊಮ್ಮೆ ಇಲ್ಲಿನ ಮೀನುಗಳನ್ನು ಹಿಡಿಯಲು ಉಳ್ಳಾಯನೇ ಅನುಮತಿಸುತ್ತಾನೆ. ಈ ದಿನ ಎಲ್ಲರೂ ಜೊತೆಯಾಗಿ ಮೀನು ಹಿಡಿದು ಉಳ್ಳಾಯನ ಪ್ರಸಾದವೆಂದು ಸ್ವೀಕರಿಸುತ್ತಾರೆ.ಕಂಡೇವಿನ ಧರ್ಮರಸು ಉಳ್ಳಾಯ ದೈವಸ್ಥಾನಕ್ಕೆ 800 ವರ್ಷಗಳ ಇತಿಹಾಸವಿದೆ. ಇಲ್ಲಿನ ವರ್ಷಾವಧಿ ಮೀನು ಹಿಡಿಯುವ ಜಾತ್ರೆಗೂ ಅಷ್ಟೇ ಪುರಾತನ ಇತಿಹಾಸವಿದ್ದು, ವರ್ಷಾವಧಿ ಜಾತ್ರೆಯ ನಿರ್ದಿಷ್ಟ ದಿನದ ಹೊರತು ಮಿಕ್ಕ ದಿನಗಳಲ್ಲಿ ಯಾರೂ ಈ ವ್ಯಾಪ್ತಿಯ ನಂದಿನಿ ನದಿಯಲ್ಲಿ ಮೀನು ಹಿಡಿಯುವಂತಿಲ್ಲ. ಸಂಪ್ರದಾಯ ಮೀರಿ ಮೀನು ಹಿಡಿದರೆ ಬಲೆಗೆ ಹಾವು ಬೀಳುತ್ತದೆಯೆಂಬ ನಂಬಿಕೆಯಿದೆ.
ಜಾತ್ರೆ ಪ್ರಯುಕ್ತ ಬೆಳಗ್ಗೆ ಮೀನು ಹಿಡಿಯುವಿಕೆ, ಮೂಲಸ್ಥಾನದಲ್ಲಿ ಗಣಹೋಮ, ಮಧ್ಯಾಹ್ನ, ರಾತ್ರಿ ಅನ್ನ ಸಂತರ್ಪಣೆ, ರಾತ್ರಿ ಬ್ರಹ್ಮಸ್ಥಾನದಲ್ಲಿ ಬ್ರಹ್ಮರಿಗೆ ತಂಬಿಲ, ಕುಮಾರ ಸಿರಿಗಳ ದರ್ಶನ, ಧರ್ಮರಸು ಶ್ರೀ ಉಳ್ಳಾಯ ಹಾಗೂ ಪರಿವಾರ ದೈವಗಳ ಭಂಡಾರ ಮೂಲಸ್ಥಾನಕ್ಕೆ ಆಗಮಿಸಿ ಧ್ವಜಾರೋಹಣ ನೆರವೇರಿತು.ಧರ್ಮರಸು ಉಳ್ಳಾಯ ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ, ಅಧ್ಯಕ್ಷ ದಯಾನಂದ ಬಿ. ಶೆಟ್ಟಿ, ಕಾರ್ಯದರ್ಶಿ ಸುಧಾಕರ ಶೆಟ್ಟಿ, ಕೋಶಾಧಿಕಾರಿ ಚರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.-------------ಖಂಡಿಗೆ ಜಾತ್ರೆಯಲ್ಲಿ ಮೀನು ಹಿಡಿಯುವುದು ಹಿಂದಿನಿಂದ ಬಂದ ಸಂಪ್ರದಾಯ, ಈಗ ಅವನತಿಯ ಸ್ಥಿತಿಗೆ ಬಂದಿದೆ. ಇಲ್ಲಿ ತ್ಯಾಜ್ಯ ನೀರು ಬಿಡುವುದರ ವಿರುದ್ಧ ಪ್ರತಿಭಟನೆ ಮಾಡಲಾಗಿದ್ದು, ಕಳೆಯನ್ನು ಪಾಲಿಕೆ ತೆಗೆದಿದೆ. ಆದರೆ ಇಲ್ಲಿಗೆ ಬರುವ ಕಲುಷಿತ ನೀರು ನಿಲುಗಡೆಯಾಗಿಲ್ಲ. ಇದರಿಂದ ಇಲ್ಲಿ ಮೀನಿನ ಸಂತತಿ ಇಲ್ಲದೆ ಸಮಸ್ಯೆಯಾಗಿದೆ.
। ಜಯಾನಂದ ಚೇಳ್ಯಾರು, ಗ್ರಾ.ಪಂ ಅಧ್ಯಕ್ಷ