ಕನ್ನಡಪ್ರಭ ವಾರ್ತೆ ವಿಜಯಪುರ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹಾಗೂ ವಿವಿಧ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯ ಬಳಕೆ ಕುರಿತು ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತದಿಂದ ಹಮ್ಮಿಕೊಂಡ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದ ಅಂಗಡಿ-ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು ಹಾಗೂ ವಿವಿಧ ಸಂಸ್ಥೆಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಯ ಬಳಕೆ ಕುರಿತು ವ್ಯಾಪಾರಸ್ಥರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತದಿಂದ ಹಮ್ಮಿಕೊಂಡ ಜಾಗೃತಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಚಾಲನೆ ನೀಡಿದರು.ನಗರದ ಮಹಾತ್ಮ ಗಾಂಧಿ ವೃತ್ತದಿಂದ ಆರಂಭವಾದ ಅಭಿಯಾನವು ಲಿಂಗದಗುಡಿವರೆಗೆ ನಡೆಯಿತು. ಮಾರ್ಗಮಧ್ಯದ ಅಂಗಡಿ-ಮುಂಗಟ್ಟುಗಳು, ಕೈಗಾರಿಕೆಗಳು, ಹೋಟೆಲ್ಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಟ್ರಸ್ಟ್ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ನಾಮಫಲಕಗಳ ಅಳವಡಿಕೆ ಕುರಿತು ತಿಳಿವಳಿಕೆ ನೀಡಲಾಯಿತು. ಅಭಿಯಾನಕ್ಕೆ ಅಂಗಡಿ ಮಾಲೀಕರು ಸಕಾರಾತ್ಮಕವಾಗಿ ಸ್ಪಂದಿಸಿದರು.
ಸರ್ಕಾರದ ಆದೇಶದಂತೆ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯ ಬಳಕೆ ಕಡ್ಡಾಯವಾಗಿದ್ದು, ಉಳಿದ ಶೇ.40ರಷ್ಟು ಭಾಗದಲ್ಲಿ ಇತರ ಭಾಷೆಗಳನ್ನು ಬಳಸಬಹುದಾಗಿದೆ. ನಾಡಿನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಗೌರವಿಸುವ ನಿಟ್ಟಿನಲ್ಲಿ ವ್ಯಾಪಾರಸ್ಥರು ಈ ನಿಯಮವನ್ನು ಪಾಲಿಸಬೇಕು. ದೈನಂದಿನ ವಹಿವಾಟಿನಲ್ಲಿಯೂ ಕನ್ನಡ ಬಳಸುವ ಮೂಲಕ ಭಾಷೆಯ ಬೆಳವಣಿಗೆಗೆ ಸಹಕರಿಸಬೇಕು ಎಂದು ತಿಳಿಸಿದರು.ನಾಮಫಲಕಗಳಲ್ಲಿ ಶೇ.60ಕ್ಕಿಂತ ಹೆಚ್ಚು ಕನ್ನಡ ಬಳಸಿರುವ ಮಾಲೀಕರನ್ನು ಅಭಿನಂದಿಸಲಾಯಿತು.
ಅಭಿಯಾನದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಫಯಾಜ ಕಲಾದಗಿ, ಮಹಾದೇವ ರಾವಜಿ, ಸುರೇಶ ಬಿಜಾಪುರ, ಕಸ್ತೂರಿ ನಾಗರದಿನ್ನಿ, ಜಯಶ್ರೀ ಕನಶೆಟ್ಟಿ, ಅನುರಾಧ ಕಲಾಲ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.