ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ: ಬರಗೂರು ರಾಮಚಂದ್ರಪ್ಪ

KannadaprabhaNewsNetwork |  
Published : Nov 20, 2025, 12:15 AM IST
ಪೋಟೋ: 19ಎಸ್‌ಎಂಜಿಕೆಪಿ03ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಬುಧವಾರ ಬಸವ ಸಭಾ ಭವನದಲ್ಲಿ ಆಯೋಜಿಸಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡದ ಪ್ರಜ್ಞೆ ಕೇವಲ ಭೌಗೋಳಿಕ ಅಥವಾ ಭಾಷಿಕವಾದುದಷ್ಟೇ ಅಲ್ಲ. ಇದು ಜಾತ್ಯತೀತತೆ, ಸೌಹಾರ್ದತೆ ಮತ್ತು ಸಮಾನತೆಯ ಪ್ರಜ್ಞೆ. ಏಕಕಾಲಕ್ಕೆ ಸ್ಥಳೀಯತೆ, ರಾಷ್ಟ್ರೀಯತೆ ಮತ್ತು ಅಂತಾರಾಷ್ಟ್ರೀಯತೆಯನ್ನು ಒಳಗೊಂಡ ಜಾಗತಿಕ ಪ್ರಜ್ಞೆ ಎಂದು ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡದ ಪ್ರಜ್ಞೆ ಕೇವಲ ಭೌಗೋಳಿಕ ಅಥವಾ ಭಾಷಿಕವಾದುದಷ್ಟೇ ಅಲ್ಲ. ಇದು ಜಾತ್ಯತೀತತೆ, ಸೌಹಾರ್ದತೆ ಮತ್ತು ಸಮಾನತೆಯ ಪ್ರಜ್ಞೆ. ಏಕಕಾಲಕ್ಕೆ ಸ್ಥಳೀಯತೆ, ರಾಷ್ಟ್ರೀಯತೆ ಮತ್ತು ಅಂತಾರಾಷ್ಟ್ರೀಯತೆಯನ್ನು ಒಳಗೊಂಡ ಜಾಗತಿಕ ಪ್ರಜ್ಞೆ ಎಂದು ಚಿಂತಕ ನಾಡೋಜ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಕುವೆಂಪು ವಿವಿಯಲ್ಲಿ ಬುಧವಾರ ಬಸವ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಧರ್ಮ ದ್ವೇಷ ಮತ್ತು ಜಾತಿಯ ಜೈಲುಗಳಲ್ಲಿ ಬಂಧಿತರಾಗಿರುವ ನಮಗೆ ಕನ್ನಡದ ಜಾತ್ಯತೀತತೆ ಪರಂಪರೆ ದಾರಿದೀಪವಾಗಬೇಕು. ಕ್ರಿ. ಶ. 850ರಲ್ಲಿ ರಚಿಸಲ್ಪಟ್ಟ ಕವಿರಾಜಮಾರ್ಗ ಕೃತಿಯಲ್ಲಿಯೇ "ಪರಧರ್ಮ, ಮತ್ತು ಪರರ ವಿಚಾರವನ್ನು ಗೌರವಿಸುವುದೇ ನಿಜವಾದ ಬಂಗಾರ " ಎಂಬ ಜಾತ್ಯತೀತ ನಿಲುವು ಪ್ರತಿಪಾದನೆಯಾಗಿತ್ತು ಎಂದರು.

ಕನ್ನಡಕ್ಕೆ ಸವಾಲುಗಳಿವೆ, ಆದರೆ ಸಾವಿಲ್ಲ. ಯಾಕೆಂದರೆ ಇದು ಜನಭಾಷೆ. ಜಗತ್ತಿನ ಅತ್ಯಂತ ಜೀವಂತ ಭಾಷೆಗಳಲ್ಲಿ ಕನ್ನಡವೂ ಒಂದು. ಆಳಲು ಬಂದವರನ್ನು ಅರಗಿಸಿಕೊಳ್ಳುವ ಶಕ್ತಿ ಕನ್ನಡಕ್ಕಿದೆ. ಇದರ ಶ್ರೇಯ ಜನಸಾಮಾನ್ಯರಿಗೆ ಸಲ್ಲಬೇಕು. ಕನ್ನಡಿಗರಿಗೆ ಶಿಕ್ಷಣ, ಉದ್ಯೋಗ, ಆಹಾರ ನೀಡಿದರೆ ಕನ್ನಡ ತಾನಾಗಿಯೇ ಉಳಿದು ಬೆಳೆಯುತ್ತದೆ ಎಂದರು.

ಕನ್ನಡಕ್ಕೆ ಒಂದು ದೊಡ್ಡ ವಿವೇಕವಿದೆ. ಎಲ್ಲ ಜಾತಿ ಧರ್ಮಗಳ ಮಹನೀಯರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ಹೀಗಾಗಿ ಕನ್ನಡದ ಪ್ರಜ್ಞೆ ಜಾತ್ಯತೀತವಾದುದು, ಮತ್ತು ಪ್ರಜಾಸತ್ತಾತ್ಮಕವಾದುದು. ಕನ್ನಡದ ಸಾಂಸ್ಕೃತಿಕ ಇತಿಹಾಸದಲ್ಲಿ ಪ್ರಭುತ್ವ ವಿರೋಧಿ ಧೋರಣೆ ತಳೆದ, ಸಾಮಾಜಿಕ ಕ್ರಾಂತಿಗೆ ಪೂರಕವಾದ ವಿಚಾರಗಳನ್ನು ಬಿತ್ತಿ ಬೆಳೆಸಿದ ಪಂಪ, ಬಸವಣ್ಣನಂಥಹ ಸಾಂಸ್ಕೃತಿಕ ನಾಯಕರಿದ್ದಾರೆ. ಕನ್ನಡದ ಮುಖಾಂತರ ಮತೀಯವಾದಿಗಳಿಗೆ ಉತ್ತರ ನೀಡಿದ ಸೂಫಿ ಸಂತರಿದ್ದಾರೆ. ಇಂಥಹ ಆದರ್ಶಪ್ರಾಯವಾದ ದೊಡ್ಡ ಪರಂಪರೆಯನ್ನು ನಾವು ಆಚರಣೆಯಲ್ಲಿ ಅಳವಡಿಕೊಳ್ಳಬೇಕಿದೆ ಎಂದು ಕಿವಿಮಾತು ಹೇಳಿದರು.

ಕುಲಪತಿ ಪ್ರೊ. ಶರತ್ ಅನಂತಮೂರ್ತಿ, ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ಕನ್ನಡ ಭಾರತಿಯ ಪ್ರೊ. ನೆಲ್ಲಿಕಟ್ಟೆ ಸಿದ್ಧೇಶ್, ಪ್ರೊ. ಪ್ರಶಾಂತ ನಾಯಕ ಮಾತನಾಡಿದರು. ವಿವಿಧ ವಿಭಾಗಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ವಿಶ್ವವಿದ್ಯಾಲಯದಿಂದ ಈ ವರ್ಷದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರೊ. ಶ್ರೀಕಂಠ ಕೂಡಿಗೆ, ಪ್ರೊ. ಬಸವರಾಜ ನೆಲ್ಲಿಸರ, ಪ್ರೊ. ಕುಮಾರ ಚಲ್ಯ, ಪ್ರೊ. ಸಣ್ಣರಾಮ ಮತ್ತು ಪ್ರೊ. ಕೇಶವ ಶರ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ