ಕನ್ನಡಕ್ಕಿದೆ ಈ ನೆಲದ ಶ್ರೇಷ್ಠ ಮೌಲ್ಯ ಉಳಿಸುವ ಶಕ್ತಿ: ಡಿಸಿಎಫ್ ಹರ್ಷಭಾನು

KannadaprabhaNewsNetwork | Published : Nov 4, 2024 12:19 AM

ಸಾರಾಂಶ

ನಾಡಿನ ಶ್ರೇಷ್ಠ ಕಲೆಗಳಲ್ಲೊಂದಾದ ಗಮಕ ಕಲೆಯನ್ನು ಆಸ್ವಾದಿಸಿದ್ದೇನೆ. ಎಂತಹ ಮಧುರತೆ, ಜ್ಞಾನವನ್ನು ನೀಡುತ್ತದೆನ್ನುವುದನ್ನು ಅದನ್ನು ಆಸ್ವಾದಿಸಿದಾಗ ತಿಳಿಯಬಹುದು.

ಯಲ್ಲಾಪುರ: ಕನ್ನಡ ಈ ನೆಲದ ಶ್ರೇಷ್ಠ ಮೌಲ್ಯವನ್ನು ಉಳಿಸಿಕೊಂಡು ಬಂದಿದೆ. ಅಂತಹ ಮೌಲ್ಯ, ಸಂಸ್ಕೃತಿಯ ಪರಂಪರೆಯನ್ನು ಮುಂದಿನ ಜನಾಂಗಕ್ಕಾಗಿ ಉಳಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ. ತಿಳಿಸಿದರು.

ನ. ೨ರಂದು ಗಾಂಧೀ ಕುಟೀರದಲ್ಲಿ ೨ನೇ ದಿನದ ಸಂಕಲ್ಪೋತ್ಸವಕ್ಕೆ ಚಾಲನೆ ನೀಡಿ, ಮಾತನಾಡಿದರು.ಕನ್ನಡಕ್ಕೆ ಭಾವೈಕ್ಯತೆಯ ಮಂತ್ರವನ್ನು ಸಾರುವ ಜೇನಿನ ಸವಿ ನೀಡುವ ಸಾಮರ್ಥ್ಯವಿದೆ. ಆ ನಿಟ್ಟಿನಲ್ಲಿ ಕಳೆದ ೩೮ ವರ್ಷಗಳಿಂದ ಈ ನೆಲದ ಸಂಸ್ಕೃತಿ, ಮೌಲ್ಯದ ಪರಂಪರೆಯನ್ನು ಮುನ್ನಡೆಸಿಕೊಂಡು ಸಂಕಲ್ಪ ಸಂಸ್ಥೆ ಬಂದಿರುವುದು ಅಸಾಧ್ಯದ ಕೆಲಸವಾದರೂ ನಿರಂತರವಾಗಿ ನಡೆಸಿಕೊಂಡು ಬಂದಿರುವುದು ಅತ್ಯಂತ ಮಹತ್ವದ್ದಾಗಿದೆ ಎಂದರು.

ನಾಡಿನ ಶ್ರೇಷ್ಠ ಕಲೆಗಳಲ್ಲೊಂದಾದ ಗಮಕ ಕಲೆಯನ್ನು ಆಸ್ವಾದಿಸಿದ್ದೇನೆ. ಎಂತಹ ಮಧುರತೆ, ಜ್ಞಾನವನ್ನು ನೀಡುತ್ತದೆನ್ನುವುದನ್ನು ಅದನ್ನು ಆಸ್ವಾದಿಸಿದಾಗ ತಿಳಿಯಬಹುದು. ಇಲ್ಲಿ ನಿರಂತರ ಗೀತೆಯ ಪಠಣ ಕೂಡಾ ಅಷ್ಟೇ ಮಹತ್ವದ್ದಾಗಿದೆ. ಅದರಲ್ಲೂ ದೀಪಾವಳಿಯ ನಮ್ಮ ಪವಿತ್ರ ಹಬ್ಬದ ಸಮಯದಲ್ಲಿ ನಮಗೆಲ್ಲ ಭಾಗವಹಿಸುವ ಅವಕಾಶ ಸಂತಸ ತಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವಿ. ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ನಮ್ಮ ಕಲೆ, ಸಂಸ್ಕೃತಿ ಉಳಿಯಬೇಕಾದರೆ ಕಲಾಸಕ್ತರ ತನು-ಮನ- ಧನ ಸಹಕಾರವಿದ್ದಾಗ ಮಾತ್ರ ಸಾಧ್ಯ. ಇಂತಹ ಉತ್ಸವ ನಡೆಸುವುದು ಜನರ ತುಂಬು ಹೃದಯದ ಸಹಕಾರದಿಂದ ಮಾತ್ರ ಸಾಧ್ಯವಾದೀತು. ಯುವ ಪೀಳಿಗೆಗಳಿಗಾಗಿ ನಮ್ಮ ಪ್ರಾಚೀನರು ನೀಡಿದ ಸಂಸ್ಕೃತಿಯ ಮೌಲ್ಯವನ್ನು ಮುಂದುವರಿಸಲೇಬೇಕಾಗಿದೆ. ಅದರಲ್ಲೂ ಶ್ರೇಷ್ಠವಾದ ಕನ್ನಡದ ಭಾಷೆಯ ಸಾಕಾರಗೊಂಡ ಯಕ್ಷಗಾನಕ್ಕೆ ಇಲ್ಲಿ ವಿಶೇಷ ಸ್ಥಾನವಿದೆ. ಆ ನಿಟ್ಟಿನಲ್ಲಿ ಸಂಕಲ್ಪದ ರೂವಾರಿಗಳಿಗೆ ಗೌರವಿಸಲೇಬೇಕು ಎಂದರು.ಹಿರಿಯ ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿ ಮಾತನಾಡಿ, ಸಂಕಲ್ಪ ಉತ್ಸವದ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ ನಮಗೆ ಅವಕಾಶ ಕಲ್ಪಿಸಿದ ಪ್ರಮೋದ ಹೆಗಡೆಯವರ ಬಳಗವನ್ನು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಅದರಲ್ಲೂ ಯಕ್ಷಗಾನಕ್ಕೆ ಮಹತ್ವದ ಸ್ಥಾನ ನೀಡಲಾಗುತ್ತಿದೆ. ಅದು ನಮ್ಮ ಜಿಲ್ಲೆಯ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತದೆ. ಯಾವುದೇ ಒಂದು ಮೇಳದ ಯಕ್ಷಗಾನ ಮಾಡದೇ ದಕ್ಷಿಣೋತ್ತರ ಕನ್ನಡದ ಕಲಾವಿದರನ್ನು ಸಂಯೋಜಿಸಿ, ಇಲ್ಲಿ ಯಕ್ಷಗಾನ ಪ್ರದರ್ಶಿಸುತ್ತಿರುವುದು ಇನ್ನೂ ಹೆಚ್ಚಿನ ಕಾರ್ಯವಾಗಿದೆ ಎಂದರು.ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಮನುಷ್ಯನು ಬದುಕುವುದಕ್ಕೂ, ಬಾಳುವುದಕ್ಕೂ ಅಂತರವಿದೆ. ಜಗತ್ತಿನಲ್ಲಿ ಜೀವಿಸುವ ಮನುಷ್ಯರ ಜೀವನವನ್ನು ಗಮನಿಸಿದರೆ ನಮ್ಮ ಹಿರಿಯರು ನೀಡಿದ ಸಂಸ್ಕೃತಿಯ ಮೌಲ್ಯದ ಬದುಕು ಭಾರತೀಯರದ್ದಾಗಿದೆ. ಅಂತಹ ಶ್ರೇಷ್ಠ ಭಾರತದಲ್ಲಿ ನಾವಿದ್ದೇವೆ ಎನ್ನುವುದೇ ಮಹಾಭಾಗ್ಯ. ಇಂದು ವಿಶ್ವದ ಬಹುತೇಕ ಕಡೆಗಳಲ್ಲಿ ನೆಮ್ಮದಿ ಕಳೆದುಹೋಗಿದೆ. ಆದರೆ, ಭಾರತದಲ್ಲಿ ನೆಮ್ಮದಿ ಇಂದಿಗೂ ಉಳಿಯಲು ನಮ್ಮ ಸನಾತನ ಸಂಸ್ಕೃತಿಯೇ ಮೂಲ ಕಾರಣ ಎಂದರು.ಈ ಸಂದರ್ಭದಲ್ಲಿ ಸಾಮಾಜಿಕ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತಿದ್ದ ಶಂಕರ ಭಟ್ಟ ತಾರೀಮಕ್ಕಿ, ವಿಜ್ಞಾನ ಶಿಕ್ಷಕ ಎಂ. ರಾಜಶೇಖರ, ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹೇಶ ಹೊಸಕೊಪ್ಪ ಅವರಿಗೆ ಸಂಕಲ್ಪ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನಿತರ ಪರವಾಗಿ ಹಿರಿಯ ಪತ್ರಕರ್ತ ಶಂಕರ ಭಟ್ಟ ತಾರೀಮಕ್ಕಿ ಮಾತನಾಡಿದರು. ರಾಜಸ್ಥಾನದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ರಂಗಸ್ವಾಮಿ ವಿ., ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ. ಹೆಗಡೆ, ವಜ್ರಳ್ಳಿ ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ಉಪಸ್ಥಿತರಿದ್ದರು. ಸುಜಯ ದುರಂಧರ ಪ್ರಾರ್ಥಿಸಿದರು. ಸಂಕಲ್ಪದ ಸಂಚಾಲಕ ಪ್ರಸಾದ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ವನಿತಾ ಭಾಗ್ವತ ನಿರ್ವಹಿಸಿದರು. ಪತ್ರಕರ್ತ ಅಚ್ಯುತಕುಮಾರ ಮತ್ತು ಶಿಕ್ಷಕಿ ಸುವರ್ಣಲತಾ ಪಟಗಾರ ಸನ್ಮಾನಪತ್ರ ವಾಚಿಸಿದರು. ರಾಮಚಂದ್ರ ಭಟ್ಟ ಚಿಕ್ಯಾನಮನೆ ವಂದಿಸಿದರು.

Share this article