ಕನ್ನಡಪ್ರಭ ವಾರ್ತೆ ಬೇಲೂರು
ಬೇಲೂರು ಪಟ್ಟಣಕ್ಕೆ ಆಗಮಿಸಿದ ಕರವೇ ರಾಜ್ಯಾಧ್ಯಕ್ಷರು ಇಲ್ಲಿನ ಸಂಘಟನೆಯಿಂದ ಅಭಿನಂಧನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಇತ್ತೀಚಿನ ದಿನದಲ್ಲಿ ಹಿಂದಿ ಹೇರಿಕೆಗೆ ನೀಡುತ್ತಿರುವ ಒತ್ತಡದ ನಡುವೆ ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿಯುವ ಕೆಲಸವನ್ನು ಕನ್ನಡಪರ ಸಂಘಟನೆಗಳು ಮಾಡಬೇಕಿದೆ ಎಂದರು. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕನ್ನಡ ಸಾಹಿತ್ಯ ಪರಿಷತ್ತು ಈ ನಿಟ್ಟಿನಲ್ಲಿ ವಿನೂತನ ಯೋಜನೆಗಳನ್ನು ರೂಪಿಸಬೇಕಿದೆ. ಕೇವಲ ವರ್ಷಕೊಮ್ಮೆ ಇಂತಹ ಆಡಂಬರ ಕಾರ್ಯಕ್ರಮವನ್ನು ನಡೆಸದೆ ಕಳೆದ ಸಾಲಿನಲ್ಲಿ ನಡೆದ ನಿರ್ಣಯಕ್ಕೆ ಸರ್ಕಾರ ಯಾವ ರೀತಿಯಲ್ಲಿ ಸ್ಪಂದನೆ ನೀಡುತ್ತಿದ ಎಂಬ ಅನುಪಾತ ವರದಿ ಮೇಲೆ ಸಮ್ಮೇಳನಗಳನ್ನು ನಡೆಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಮುಂದಾಗಬೇಕಿದ ಎಂದು ಸಲಹೆ ನೀಡಿದರು. ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾದ ಸರ್ವಾಧ್ಯಕ್ಷರು ಮಂಡಿಸಿದ ನಿರ್ಣಯಗಳನ್ನು ಕನಿಷ್ಠ ಜಾರಿ ತರುವ ಬಗ್ಗೆ ಆಲೋಚಿಸಿದರೆ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಮನ್ನಣೆ ಸಿಗುತ್ತದೆ. ಈ ಬಗ್ಗೆ ಕಸಾಪ ಅಧ್ಯಕ್ಷರು ಸಮಗ್ರ ಅಲೋಚನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಕನ್ನಡಪರ ಸಂಘಟನೆಗಳು ನಾಡು, ನುಡಿ, ಜಲದ ಜೊತೆಗೆ ರೈತಾಪಿ ವರ್ಗಗಳ ಸಮಸ್ಯೆಗಳಿಗೆ ಹೋರಾಟ ನಡೆಸುವ ಅನಿವಾರ್ಯತೆ ಇರುವ ಕಾರಣದಿಂದ ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಕಾಡಾನೆಗಳ ಸಮಸ್ಯೆಯಿಂದ ತತ್ತರಿಸಿದ ಕೃಷಿಕರ ಬೆಂಬಲ ನಿಲ್ಲುವ ಪ್ರಾಮಾಣಿಕ ಕೆಲಸಕ್ಕೆ ಮುಂದಾಗಬೇಕಿದೆ. ಈಗಾಗಲೇ ಕಾಡಾನೆ ಸಮಸ್ಯೆ ಬಗ್ಗೆ ಸಕಲೇಶಪುರದಿಂದ ಹಾಸನದ ತನಕ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಶೀಘ್ರವೇ ಮುಖ್ಯಮಂತ್ರಿಗಳಿಗೆ ಗಮನ ಸೆಳೆಯಲು ಹೋರಾಟ ರೂಪಿಸಲು ಕರವೇ ಮುಂದಾಗಿದೆ. ಅರಣ್ಯ ಮಂತ್ರಿಗಳು ತಮ್ಮ ಜಾಣಮೌನದಿಂದ ಹೊರಬಂದು ರೈತಪರವಾಗಿ ಕೆಲಸ ಮಾಡಿ ಇಲ್ಲವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.ಹೋರಾಟದ ಎಚ್ಚರಿಕೆ: ಹಾಸನ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಹೊರರಾಜ್ಯ ಮತ್ತು ಹೊರರಾಷ್ಟ್ರದಿಂದ ಬಂದವರಿಗೆ ನಕಲಿ ಆಧಾರಕಾರ್ಡ್ ನೀಡುವ ಮೂಲಕ ಅವರಿಗೆ ಆಶ್ರಯ ನೀಡುತ್ತಿರುವ ಬಗ್ಗೆ ಹೆಚ್ಚು ವರದಿಗಳಿವೆ. ಈ ಬಗ್ಗೆ ಶೀಘ್ರವೇ ಸಂಬಂಧ ಪಟ್ಟವರು ಕ್ರಮಕೈಗೊಳ್ಳಬೇಕು, ಇಲ್ಲವಾದರೆ ಉಗ್ರ ಹೋರಾಟ ಅನಿವಾರ್ಯವೆಂದು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಎಚ್ಚರಿಕೆ ನೀಡಿದರು.
ಫೋಟೋ :