ಇತಿಹಾಸ, ಸಂಸ್ಕೃತಿ, ಭಾವನೆಯ ಮಿಶ್ರಣವೇ ಕನ್ನಡ : ಈ.ಸಿ.ನಿಂಗರಾಜ್‌ಗೌಡ

KannadaprabhaNewsNetwork | Published : Nov 18, 2024 12:04 AM

ಸಾರಾಂಶ

ಮಹಾಭಾರತ ಕಾಲದಿಂದಲೂ ಕನ್ನಡ ಭಾಷೆಯ ಬಳಕೆಯಲ್ಲಿರುವ ಇತಿಹಾಸವಿದೆ. ಅಲ್ಲಿಂದ ಕನ್ನಡ ಹುಟ್ಟಿ, ಬೆಳೆಯುತ್ತಾ ಬಂದಿದ್ದು, ವಿಶ್ವದ ಅತಿ ಸುಂದರ ಹಾಗೂ ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ-ಮಾನ ದೊರಕಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕದ ಇತಿಹಾಸವೇ ಕನ್ನಡವಾಗಿದ್ದು, ಭಾವನೆ, ಸಂಸ್ಕೃತಿ, ಇತಿಹಾಸದ ಮಿಶ್ರಣವೂ ಕನ್ನಡವೇ ಆಗಿದೆ ಎಂದು ಮೈಸೂರು ವಿವಿ ಸಿಂಡಿಕೇಟ್‌ನ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಅಭಿಪ್ರಾಯಪಟ್ಟರು.

ನಗರದಲ್ಲಿರುವ ಗಾಂಧಿ ಭವನದಲ್ಲಿ ಡಾ.ಜೀಶಂಪ ಸಾಹಿತ್ಯ ವೇದಿಕೆ ಹಾಗೂ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಫಿಲಂಸ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕನ್ನಡ ಹಬ್ಬ, ಕವಿಗೋಷ್ಠಿ ಹಾಗೂ ವಿವಿಧ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಹಾಭಾರತ ಕಾಲದಿಂದಲೂ ಕನ್ನಡ ಭಾಷೆಯ ಬಳಕೆಯಲ್ಲಿರುವ ಇತಿಹಾಸವಿದೆ. ಅಲ್ಲಿಂದ ಕನ್ನಡ ಹುಟ್ಟಿ, ಬೆಳೆಯುತ್ತಾ ಬಂದಿದ್ದು, ವಿಶ್ವದ ಅತಿ ಸುಂದರ ಹಾಗೂ ಶ್ರೇಷ್ಠ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ-ಮಾನ ದೊರಕಿರುವುದು ಮತ್ತೊಂದು ಹೆಗ್ಗಳಿಕೆಯಾಗಿದೆ ಎಂದು ಬಣ್ಣಿಸಿದರು.

ವಿಶ್ವಾದ್ಯಂತ ೫.೬೦ ಕೋಟಿ ಜನರು ಕನ್ನಡದಲ್ಲಿ ಮಾತನಾಡುತ್ತಾರೆ. ನೂರಕ್ಕೂ ಹೆಚ್ಚು ದೇಶದಲ್ಲಿ ಕನ್ನಡ ಮಾತನಾಡುವ ಜನರಿದ್ದಾರೆ. ಕನ್ನಡ ಮತ್ತಷ್ಟು ಬೆಳೆಯಬೇಕೆಂದರೆ ಮಾತನಾಡುವವರ ಸಂಖ್ಯೆ ಹೆಚ್ಚಾಗಬೇಕು. ಬೇರೆ ಭಾಷೆಗಳನ್ನು ಕಲಿಯುವುದಕ್ಕೆ ಮುಕ್ತ ಅವಕಾಶ, ಸ್ವಾತಂತ್ರ್ಯವಿದೆ. ಆದರೆ, ಪ್ರತಿಯೊಬ್ಬರೂ ಅಂತರಂಗದಲ್ಲಿ ಕನ್ನಡಾಭಿಮಾನ ಇಟ್ಟುಕೊಳ್ಳಬೇಕು ಎಂದರು.

ಒಂದು ಭಾಷಾ ಅಧ್ಯಯನ ಸಂಶೋಧನೆಯ ಪ್ರಕಾರ ವಿಶ್ವದಲ್ಲಿ ಸುಮಾರು ೭೧೫೧ ಭಾಷೆಗಳಿವೆ. ೨೦೦೧ ಜನಗಣತಿಯ ಪ್ರಕಾರ ಭಾರತದಲ್ಲಿ ೧೭೨೧ ವೈವಿಧ್ಯಮಯ ಭಾಷೆಗಳಿವೆ. ಈಗ ಜನಗಣತಿ ಮಾಡಿದರೆ ಮತ್ತಷ್ಟು ಭಾಷೆ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟು ಭಾಷೆಗಳ ನಡುವೆ ನಮ್ಮ ಕನ್ನಡ ವಿಶೇಷ ಸ್ಥಾನಮಾನ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವಾರು ಸಂಶೋಧನೆಗಳು ನಡೆದು ಹೊಸ ಹೊಸ ಪದಗಳು ಉಗಮವಾಗುತ್ತಿವೆ. ಆ ಪದಗಳಿಗೆ ಸರಿಸಮಾನವಾದ ಪದಗಳನ್ನು ಸಾಹಿತಿಗಳು, ಭಾಷಾತಜ್ಞರು, ಪತ್ರಕರ್ತರು ಟಂಕಿಸುತ್ತಿದ್ದಾರೆ. ಆ ಪದಗಳನ್ನೂ ನಾವೂ ದಿನನಿತ್ಯ ಬಳಸುವ ಮೂಲಕ ನಾವೆಲ್ಲರೂ ಕನ್ನಡ ಭಾಷೆಯನ್ನೂ ಉಳಿಸಿ ಬೆಳೆಸುವ ಜವಾಬ್ದಾರಿ ಹೆಚ್ಚಿದೆ ಎಂದು ವಿವರಿಸಿದರು.

ಊಟಿ, ಕಾಸರಗೋಡು, ಸೋಲ್ಲಾಪುರ ಪ್ರದೇಶಗಳು ಬೇರೆ ರಾಜ್ಯದಲ್ಲಿದ್ದರೂ ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿದೆ. ಈ ಪ್ರದೇಶಗಳು ಮೂಲ ಕರ್ನಾಟಕಕ್ಕೆ ಸೇರಿದ್ದರಾದರೂ ಹಿಂದೆ ನಮ್ಮನ್ನಾಳಿದ ರಾಜಕಾರಣಿಗಳ ನಿರ್ಲಕ್ಷ್ಯದಿಂದಾಗಿ ಈ ಪ್ರದೇಶಗಳು ಇಂದು ಬೇರೆ ರಾಜ್ಯಗಳ ಪಾಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್ ಮಾತನಾಡಿ, ಮುಂದಿನ ತಿಂಗಳು ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಮಂಡ್ಯ ಸಮ್ಮೇಳನ ರಾಜ್ಯದಲ್ಲಿ ಇತಿಹಾಸವಾಗಬೇಕು. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮ್ಮೇಳನ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಜೆಡಿಎಸ್ ಹಿಂದುಳಿದ ವರ್ಗಗಳ ಘಟಕದ ರಾಜ್ಯಾಧ್ಯಕ್ಷ ಜಯರಾಂ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಯುವಕರ ಮೇಲಿದೆ. ಇಂದಿನ ಯುವ ಪೀಳಿಗೆ ಆಂಗ್ಲ ಭಾಷೆಗೆ ಜೋತು ಬಿದ್ದಿದ್ದಾರೆ. ಆಂಗ್ಲಭಾಷೆಯನ್ನು ಕಲಿಕೆಗೆ ಮೀಸಲಿಟ್ಟು, ಕನ್ನಡವನ್ನು ಹೆಚ್ಚು ಬಳಸುವ ಮೂಲಕ ಕನ್ನಡ ಕಟ್ಟುವ ಕೆಲಸ ಮಾಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಮಂದಿಗೆ ಸುವರ್ಣ ಕರ್ನಾಟಕ ಸಾಹಿತ್ಯ ಪ್ರಶಸ್ತಿ, ಕನ್ನಡ ರತ್ನ ಪ್ರಶಸ್ತಿ ಹಾಗೂ ಕಾವ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೇದಿಕೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಬನ್ನಂಗಾಡಿ ಸಿದ್ದಲಿಂಗಯ್ಯ, ಸಮಾಜ ಸೇವಕರಾದ ಗಂಗಾಧರ್, ಎಲ್.ಸಿ.ಮಂಜುನಾಥ್, ವೆಂಕಟೇಶ್, ಡಾ.ಜೀಶಂಪ ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣಸ್ವರ್ಣಸಂದ್ರ, ಉಪಾಧ್ಯಕ್ಷ ಅರಸಯ್ಯ, ಕಾರ್ಯಧ್ಯಕ್ಷ ನಾಗೇಶ್, ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಉದ್ಯಮಿ ಸಿದ್ದೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಹೊಸಹಳ್ಳಿ ಉಪಸ್ಥಿತರಿದ್ದರು.

Share this article