ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಊಟಿ ರಸ್ತೆಯ ಜೆಎಸ್ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ಪ್ರಾಚೀನ ಕವಿಗಳು ಕನ್ನಡ ನೆಲದ ಅನನ್ಯತೆಯನ್ನು ತಮ್ಮ ಕೃತಿಗಳಲ್ಲಿ ತುಂಬಾ ಸುಂದರವಾಗಿ ದಾಖಲಿಸಿದ್ದಾರೆ. ಅಂತೆಯೇ ಇಲ್ಲಿನ ಜನರ ಗುಣಗಳನ್ನು ಹೊಗಳಿದ್ದಾರೆ. ಅತ್ಯುಗ್ರರ್, ಚೆಲ್ವರ್ಕಳ್ ಎಂದು ಬಣ್ಣಿಸುವಲ್ಲಿ ಕನ್ನಡಿಗರ ಗುಣದ ಜೊತೆಗೆ ಸೌಂದರ್ಯ ಪ್ರಜ್ಞೆಯನ್ನು ದಾಖಲಿಸಿದ್ದಾರೆ ಎಂದರು.
ಕರ್ನಾಟಕವು ಕಲೆ, ಸಾಹಿತ್ಯ, ಸಂಗೀತ, ನೃತ್ಯ ಈ ಮೊದಲಾದವುಗಳಲ್ಲಿ ತನ್ನದೇ ಆದ ಅನನ್ಯತೆ ಹೊಂದಿದೆ. ದಕ್ಷಿಣಾತ್ಯ ಸಂಗೀತವನ್ನು ಕರ್ನಾಟಕ ಸಂಗೀತವೆಂದು ಕರೆಯುವ ಪರಂಪರೆಯೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.ಇಂತಹ ಸಮೃದ್ಧ ಪರಂಪರೆಯ ಕನ್ನಡಕ್ಕೆ ಅನೇಕ ಏಳುಬೀಳುಗಳು ಉಂಟಾಗಿವೆ. ಪ್ರತಿಯೊಂದು ನಾಡಿಗೂ ಭಾಷೆಗೂ ಇದು ಸಹಜವಾದದ್ದು. ಆದರೆ ಅಂತಹ ಏಳುಬೀಳನ್ನು ಮೀರಿ ಬೆಳೆಯುವುದು ಕನ್ನಡ ಪರಂಪರೆಯ ಗುಣಗಳಲ್ಲಿ ಒಂದು. ಇಂತಹ ಪರಂಪರೆಯನ್ನು ಕಟ್ಟಿಕೊಟ್ಟಿರುವ ಮಹನೀಯರನ್ನು ಇಂತಹ ಸಂದರ್ಭಗಳಲ್ಲಿ ನೆನೆಯುತ್ತಾ ಕನ್ನಡವನ್ನು ಕಟ್ಟುವ ಬೆಳೆಸುವ ಕಾರ್ಯಗಳನ್ನು ಸದಾ ಮಾಡೋಣ ಎಂದು ಹೇಳಿದರು.
ಆಗ ಮಾತ್ರ ಕನ್ನಡವು ಅನ್ನದ ಭಾಷೆಯಾಗುವುದಕ್ಕೆ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕನ್ನಡ ವಿದ್ವಾಂಸರು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ತುರ್ತು ಆಲೋಚನೆ ನಡೆಸಬೇಕು. ಪಠ್ಯಗಳಲ್ಲಿ ಕೌಶಲ್ಯಾಧಾರಿತ ಅಧ್ಯಯನಗಳು ಸಾಗಿದಾಗ ಕನ್ನಡ ಉದ್ಯೋಗಮುಖಿ ಆಗಲು ಸಾಧ್ಯವಾಗುತ್ತದೆ. ಈಗ ಇನ್ನೂ ಮುಂದುವರೆದು ಕೃತಕ ಬುದ್ದಿಮತ್ತೆಯ ಕಾಲ. ಇದಕ್ಕೆ ತಕ್ಕಂತೆ ಕನ್ನಡವನ್ನು ಕೃತಕಬುದ್ಧಿ ಮತ್ತೆಯ ಅಗತ್ಯತೆಗಳಿಗೆ ತಕ್ಕಂತೆ ವೈಜ್ಞಾನಿಕವಾಗಿ ಹೊಂದಿಸಬೇಕು. ಆಗ ಕನ್ನಡದ ಬೆಳವಣಿಗೆ ಇನ್ನೂ ಉನ್ನತಮಟ್ಟದಲ್ಲಿ ವಿಶ್ವವ್ಯಾಪಿಯಾಗಿ ಬೆಳೆಯುತ್ತದೆ ಎಂದರು.