ದಾವಣಗೆರೆ: ರಾಜ್ಯದಲ್ಲಿ ಕನ್ನಡ ಭಾಷೆ ಸುಭದ್ರವಾಗಿ ಉಳಿದಿದ್ದರೆ ಅದು ದಾವಣಗೆರೆಯಿಂದಾಗಿ ಮಾತ್ರ, ಇಲ್ಲಿ ಕನ್ನಡ ಮತ್ತು ಕನ್ನಡಿಗರನ್ನು ಬಿಟ್ಟು, ಬೇರೆ ಯಾರದ್ದೂ ನಡೆಯುತ್ತಿಲ್ಲ, ನಡೆಯುವುದಿಲ್ಲ ಎಂದು ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ದಾವಣಗೆರೆಯಿಂದಾಗಿ ಕನ್ನಡ ಭಾಷೆ ಉಳಿದಿದೆ. ಬೆಂಗಳೂರು, ಬೆಳಗಾವಿಯಲ್ಲಿ ಕನ್ನಡ ಉಳಿದಿದೆಯೋ, ಇಲ್ಲವೋ ಗೊತ್ತಾಗದಂತಾಗಿದೆ. ಅನ್ಯ ಭಾಷೆಗಳ ಮಧ್ಯೆ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕನ್ನಡ ಸಂಕಷ್ಟದಲ್ಲಿದೆ. ರಾಜಧಾನಿ, ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆಯನ್ನು ಜಗ್ಗುವವರು ತುಂಬಾ ಜನರಿದ್ದಾರೆ. ಕನ್ನಡವನ್ನು ಉಳಿಸುವ ಕೆಲಸವನ್ನು ಪ್ರತಿಯೊಬ್ಬ ಕನ್ನಡಿಗರೂ ಮಾಡಬೇಕು ಎಂದ ಅವರು, ಮಕ್ಕಳು, ಮೊಮ್ಮಕ್ಕಳಿಗೆ ಕನ್ನಡ ಕಲಿಸುವ, ಬೆಳೆಸುವ, ಉಳಿಸುವ ಕೆಲಸ ಮಾಡೋಣ. ಎಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳು ಎಂದು ಅವರು ಹಾರೈಸಿದರು.
ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಮಾತನಾಡಿ, ಕೇಂದ್ರದಿಂದ ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರುವ ಪ್ರಯತ್ನ ನಡೆದಿದ್ದು, ಇದು ಖಂಡನೀಯ. ಪ್ರಪಂಚದಲ್ಲಿ ಅತ್ಯಂತ ಸಂತೋಷ ಕೊಡುವ ಭೂ ಭಾಗ ಇದ್ದರೆ ಅದು ಕರ್ನಾಟಕ ಮಾತ್ರ. ಇಲ್ಲಿ ಸಿಗುವ ಸಂತೋಷ ಪ್ರಪಂಚದ ಯಾವ ಭಾಗದಲ್ಲೂ ಸಿಗಲು ಸಾಧ್ಯವಿಲ್ಲ. ಭಾಷಾ ವಿಜ್ಞಾನಿಗಳು ಈಚೆಗೆ ಮುಂದಿನ ಕೆಲ ವರ್ಷಗಳಲ್ಲಿ ಜಾಗತೀಕರಣದ ಸುಳಿಗೆ ಸಿಲುಕಿ ತೃತೀಯ ಜಗತ್ತಿನ ಸುಮಾರು 500 ಪ್ರಾದೇಶಿಕ ಭಾಷೆಗಳು ನಶಿಸಿ ಹೋಗುತ್ತವೆಂದಿರುವುದು ಶುದ್ಧ ಸುಳ್ಳು. ಏಕೆಂದರೆ ಕನ್ನಡಕ್ಕೆ ಇನ್ನೂ ಸಹಸ್ರಾರು ವರ್ಷ ಬದುಕುವ ಚೈತನ್ಯ ಇದೆ ಎಂದು ತಿಳಿಸಿದರು.ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮೇಯರ್ ಕೆ.ಚಮನ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಕೆ.ಎಸ್.ಬಸವಂತಪ್ಪ, ಮಂಗಳೂರಿನ ಮುಸ್ಲಿಂ ಧರ್ಮ ಗುರು ಸಖಾಫಿ, ದೂಡಾ ದಿನೇಶ್ ಕೆ.ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ, ಪಾಲಿಕೆ ಸದಸ್ಯರಾದ ಎ.ನಾಗರಾಜ್, ಸವಿತಾ ಗಣೇಶ ಹುಲ್ಮನಿ, ಸುಧಾ ಇಟ್ಟಿಗುಡಿ, ಆಶಾ ಉಮೇಶ್, ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜ, ಜಿಪಂ ಸಿಇಓ ಸುರೇಶ ಇಟ್ನಾಳ್, ಆಯುಕ್ತೆ ರೇಣುಕಾ, ಕನ್ನಡ ಪರ ಹೋರಾಟಗಾರರಾದ ಕೆ.ಜಿ.ಯಲ್ಲಪ್ಪ, ನಾಗೇಂದ್ರ ಬಂಡೀಕರ್, ಕೆ.ಜಿ.ಶಿವಕುಮಾರ್, ಅಭಿ, ಎನ್.ಎಚ್.ಹಾಲೇಶ್ ಇತರರು ಇದ್ದರು.